This is the title of the web page

ಆತ್ಮಹತ್ಯೆಗೆ ಶರಣಾಗಿದ್ದು ಗುತ್ತಿಗೆದಾರನಲ್ಲ, ಗುತ್ತಿಗೆದಾರನ ಮೇಲ್ವಿಚಾರಕ

ಚಿಕ್ಕಮಗಳೂರು, ೨೮- ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಬೆನ್ನಲ್ಲೇ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರಿನಲ್ಲಿ ಬೆಳಗಾವಿ ಮೂಲದ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಸುದ್ದಿ ಬಂದಿದೆ.

ಸಾವಿಗೆ ಶರಣಾಗಿರುವ ವ್ಯಕ್ತಿ ಗುತ್ತಿಗೆದಾರ ಎಂದು ಮೊದಲ ಮಾಹಿತಿ ಬಂದಿತ್ತಾದರೂ ಆತ ಗುತ್ತಿಗೆದಾರನಲ್ಲ, ಗುತ್ತಿಗೆದಾರನ ಬಳಿ ಕೆಲಸ ಮಾಡುವ ಮೇಲ್ವಿಚಾರಕ ಎಂದು ಸ್ಪಷ್ಟಪಡಿಸಲಾಗಿದೆ. ಸಾಲಬಾಧೆ, ಸರಿಯಾದ ಸಮಯಕ್ಕೆ ಸಂಬಳ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದ ಬಸವರಾಜ ಲಿಂಗಪ್ಪ (47) ಅವರು ಬೆಳಗಾವಿ ಮೂಲದ ಗುತ್ತಿಗೆದಾರರ ಬಳಿ ಮೇಲ್ವಿಚಾರಕನಾಗಿ ಕಳೆದ ಆರು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ಬಾಳೆಹೊನ್ನೂರಿಗೆ ಆಗಮಿಸಿದ್ದರು. ಬಾಳೆಹೊನ್ನೂರಿಗೆ ಕಳೆದ ಆರು ತಿಂಗಳ ಹಿಂದೆ ಆಗಮಿಸಿ ಇಲ್ಲಿಯೂ ಗುತ್ತಿಗೆದಾರರ ಬಳಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ಆತ 6 ತಿಂಗಳಿನಿಂದ ಬಾಳೆಹೊನ್ನೂರಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬೆಳೆಗಾವಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಕೈ ಸಾಲದ ಜೊತೆಗೆ ಹಲವು ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದರು. ಅಲ್ಲದೇ ಬೆಳೆಗಾವಿ ಗುತ್ತಿಗೆದಾರರು ಆರು ವರ್ಷದ ಸಂಬಳ ನೀಡದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಬಸವರಾಜ ಲಿಂಗಪ್ಪ ಆತ್ಮಹತ್ಯೆಗೆ ಶರಣಾಗುವ ಮುನ್ನ ತಮ್ಮ ಸಾವಿನ ಬಗ್ಗೆ ಪತ್ರ ಬರೆದಿಟ್ಟಿದ್ದಾರೆ. ಡೆತ್ ನೋಟ್ ನಲ್ಲಿ ಕೈ ಸಾಲದ ಜೊತೆಗೆ ಸಂಬಳವನ್ನು ನೀಡದೇ ಇರುವ ಬಗ್ಗೆ ನೋವಿನ ಮಾತುಗಳನ್ನು ಬರೆದಿದ್ದಾರೆ. ಪತ್ರವನ್ನು ವಶಕ್ಕೆ ಪಡೆದಿರುವ ಬಾಳೆಹೊನ್ನೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ರದಲ್ಲಿ ಪತ್ನಿ ರತ್ನ, ಮಕ್ಕಳಾದ ಸಾಯಿಕುಮಾರ , ಹೇಮಂತ ಕುಮಾರ ಬಗ್ಗೆ ಸಹ ಬರೆದಿದ್ದಾರೆ.

ಮೃತ ಬಸವರಾಜದ ಕುಟುಂಬ ಬೆಳಗಾವಿಯಿಂದ ಆಗಮಿಸಿದ ಬಳಿಕ ಬಾಳೆಹೊನ್ನೂರಿನ ಖಾಸಗಿ ಲಾಡ್ಜ್ ನಲ್ಲಿ ಇದ್ದ ಶವವನ್ನು ಬಾಳೆಹೊನ್ನೂರಿನ ಆಸ್ಪತ್ರೆಗೆ ಸಾಗಿಸಿ ಶವಪರೀಕ್ಷೆಯನ್ನು ನಡೆಸಲಾಯಿತು. ತದನಂತರ ಮೃತದೇಹವನ್ನು ಪೊಲೀಸರು ಕುಟುಂಬದವರಿಗೆ ಹಸ್ತಾಂತರ ಮಾಡಿದರು.

ಪ್ರಕರಣ ದಾಖಲು ಮಾಡಿಕೊಂಡಿರುವ ಬಾಳೆಹೊನ್ನೂರಿನ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You might also like
Leave a comment