This is the title of the web page

ಜ. 1 ರಿಂದ ಪಿಯೂ ಕಾಲೇಜಗಳಲ್ಲಿ ಸೂರ್ಯ ನಮಸ್ಕಾರ

ಬೆಂಗಳೂರು, 28- ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಜ. 1ರಿಂದ ಫೆ. 7ರ ವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.

75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ‘ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ಡಿ.16 ರಂದು ಪತ್ರ ಬರೆದು ಸೂಚಿಸಿತ್ತು. ಅದರಂತೆ, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ನಂತರ ಕಾರ್ಯಕ್ರಮದ ಕ್ರೋಢೀಕೃತ ಮಾಹಿತಿಯನ್ನು ಇಲಾಖೆಯ ಶೈಕ್ಷಣಿಕ ಶಾಖೆಗೆ ಸಲ್ಲಿಸಬೇಕು ಎಂದು ಎಲ್ಲ ಜಿಲ್ಲಾ ಉಪ ನಿರ್ದೇಶಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು (ಶೈಕ್ಷಣಿಕ) ತಿಳಿಸಿದ್ದಾರೆ.

ಅಲ್ಲದೇ ಜ 26ರಂದು ‘ಸಂಗೀತದೊಂದಿಗೆ ಸೂರ್ಯ ನಮಸ್ಕಾರ’ (ಮ್ಯೂಸಿಕಲ್‌ ಪರ್ಫಾರ್ಮೆನ್ಸ್‌ ಆನ್‌ ಸೂರ್ಯ ನಮಸ್ಕಾರ) ಆಯೋಜಿಸ ಬೇಕು ಎಂದು ತಿಳಿಸಿದೆ.

ಪ್ರತಿ ದಿನ 13 ಸೂರ್ಯ ನಮಸ್ಕಾರಗಳಂತೆ 21 ದಿನಗಳಲ್ಲಿ ಒಟ್ಟು 273 ಸೂರ್ಯ ನಮಸ್ಕಾರಗಳನ್ನು ಮಾಡಿದವರಿಗೆ ಇ–ಪ್ರಮಾಣಪತ್ರ ನೀಡುವುದಾಗಿ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್‌ ತಿಳಿಸಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್‌ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಆಯೋಜಿಸಿ 30 ರಾಜ್ಯಗಳಲ್ಲಿ 30 ಸಾವಿರ ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ 75 ಕೋಟಿ ಸೂರ್ಯ ನಮಸ್ಕಾರ ಮಾಡಿಸಲು ಫೆಡರೇಷನ್‌ ನಿರ್ಧರಿಸಿದೆ.

ಜ 26ರಂದು ತ್ರಿವರ್ಣ ಧ್ವಜದ ಎದುರು ‌ಸಂಗೀತದೊಂದಿಗೆ ಸೂರ್ಯ ನಮಸ್ಕಾರದ ಮೂಲಕ ತಾಯಿ ಭಾರತಾಂಬೆಗೆ ಭಾವಪೂರ್ಣ ನಮನ ಸಲ್ಲಿಸಬೇಕು ಎಂದು ಫೆಡರೇಷನ್‌ ತಿಳಿಸಿದೆ.

You might also like
Leave a comment