ಬೆಳಗಾವಿ: ನಗರ ಸಾರಿಗೆ ಬಸ್ಸಿನಲ್ಲಿ “ಕನ್ನಡದಲ್ಲಿ ಮಾತಾಡು, ನನಗೆ ನಿಮ್ಮ ಭಾಷೆ ಬರೊಲ್ಲ” ಎಂದು ಯುವತಿಯೊಬ್ಬಳಿಗೆ ಹಿರಿಯ ವಯಸ್ಸಿನ ಬಸ್ ನಿರ್ವಾಹಕ (ಕಂಡಕ್ಟರ್) ಹೇಳಿದ್ದಕ್ಕೆ ಕೆಲವರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕೆಲ ಮರಾಠಿ ಭಾಷಿಕರು ಎನ್ನಲಾದ ಕೆಲವರು ದೈಹಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಸುಳೇಭಾವಿ-ಬಾಳೇಕುಂದ್ರಿ ಗ್ರಾಮದ ಮಧ್ಯೆ ಶುಕ್ರವಾರ ನಡೆದಿದೆ.
ನಡೆದದ್ದೇನು…
ನಗರ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬನ ಮಾಹಿತಿಯಂತೆ ಚಿಕ್ಕ ಬಾಳೆಕುಂದ್ರಿಯ ಸುಮಾರು 20 ಮರಾಠಿ ಭಾಷಿಕರು ಹಿರಿಯ ವಯಸ್ಕ ಕನ್ನಡ ಬಸ್ ನಿರ್ವಾಹಕ (ಕಂಡಕ್ಟರ) ನನ್ನು ಥಳಿಸಿದರು.
ಯುವತಿಯೊಬ್ಬಳು ಯುವಕನೊಬ್ಬನೊಂದಿಗೆ ಬೆಳಗಾವಿಯಿಂದ ಚಿಕ್ಕಬಾಳೆಕುಂದ್ರಿ ಗ್ರಾಮಕ್ಕೆ ತೆರಳುತ್ತಿದ್ದಳು. ಕಂಡಕ್ಟರಗೆ ತನಗೂ ಮತ್ತು ಆ ಯುವಕನಿಗೂ ಟಿಕೆಟ್ ಕೊಡಲು ಮರಾಠಿ ಭಾಷೆಯಲ್ಲಿ ಹೇಳಿದ್ದಾಳೆ. ಯುವತಿಗೆ ಬಸ್ ಪ್ರಯಾಣ ಉಚಿತವಾಗಿದ್ದು ತನ್ನೊಂದಿಗಿದ್ದ ಯುವಕನಿಗೆ ಟಿಕೆಟ್ ಪಡೆಯಲು ಮರಾಠಿಯಲ್ಲಿ ಕೇಳಿದ್ದಕ್ಕೆ ಮರಾಠಿ ಬಾರದ ಕಂಡಕ್ಟರರು ಕನ್ನಡದಲ್ಲಿ ಮಾತನಾಡಲು ಸೂಚಿಸಿದ್ದರು. ತನಗೆ ಮರಾಠಿ ಅರ್ಥವಾಗೊಲ್ಲ ಕನ್ನಡದಲ್ಲಿ ಹೇಳಿ ಎಂದು ಕಂಡಕ್ಟರ್ ಹೇಳಿದಾಗ ಆ ವಿಷಯದಲ್ಲಿ ವಾದವಾಗಿದೆ.
ಆಗ ಚಿಕ್ಕಬಾಳೆಕುಂದ್ರಿಯ ಜನರಿಗೆ ಫೋನ್ ಮಾಡಿ ಅವರನ್ನು ಗ್ರಾಮದ ಬಸ್ ನಿಲ್ದಾಣದಲ್ಲಿ ಯುವಕ ಸೇರಿಸಿದ್ದ. ಬಸ್ ಗ್ರಾಮ ಪ್ರವೇಶಿಸಿಸುತ್ತಿದ್ದಂತೆ ಬಸ್ ನಿಲ್ಲಿಸಿದ ಅವರು ಕಂಡಕ್ಟರ್ ಮಹದೇವ ಹುಕ್ಕೇರಿ ಅವರನ್ನು ಥಳಿಸಿದ್ದಾರೆ. ಅಲ್ಲದೇ ಡ್ರೈವರನನ್ನೂ ಒದ್ದಿದ್ದಾರೆಂದು ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.