This is the title of the web page

ಬೆಂಗಳೂರಿಗೆ ಸೀಮಿತವಾಗಿದ್ದ ಕೈಗಾರಿಕೆ ಉತ್ತರ ಕರ್ನಾಟಕಕ್ಕೆ ತರುವ ಪ್ರಯತ್ನ -ಮುಖ್ಯಮಂತ್ರಿ

ಹಾವೇರಿ.ಫೆ.13-: ಈ ಭಾಗದ ಯುವ ಸಮೂಹಕ್ಕೆ ಉದ್ಯೋಗ ನೀಡುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸೀಮಿತವಾಗಿದ್ದ ಕೈಗಾರಿಕೆಗಳನ್ನು ಉತ್ತರಕರ್ನಾಟಕಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವ ತಾಲೂಕು ಜಕ್ಕನಕಟ್ಟಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ವಿ.ಐ.ಎನ್.ಪಿ ಸಕ್ಕರೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ, ಡಿಸ್ಟಲರಿ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು. ಈ ಕಾರ್ಖಾನೆಯಲ್ಲಿ ಈ ಕ್ಷೇತ್ರದ ಜನರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂದು ಹೇಳಿದರು.

ಈ ಕ್ಷೇತ್ರದ ಅಭಿವೃದ್ಧಿಗೆ ಬೆಂಗಳೂರಿನಲ್ಲೇ ಕುರಿತುಕೊಂಡು ಕೆಲಸಮಾಡಲಾಗುತ್ತಿದೆ. ಬಿಯಾಂಡ್ ಬೆಂಗಳೂರು ಯೋಜನೆ ಮೂಲಕ ಕೈಗಾರಿಕೆಗಳನ್ನು ಈ ಕ್ಷೇತ್ರಕ್ಕೆ ತರುವ ಚಿಂತನೆ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ನಾಲ್ಕೈದು ಗಾರ್ಮೆಂಟ್ಸ್‍ಗಳು ಈ ಭಾಗದಲ್ಲಿ ಬರಲಿವೆ. ಈಗಾಗಲೇ ಸಾಯಿ ಗಾರ್ಮೆಂಟ್ಸ್‍ನವರು ಜಮೀನು ಗುರುತಿಸಿದ್ದಾರೆ, ಶೀಘ್ರದಲ್ಲೇ ಗಾರ್ಮೆಂಟ್ ಆರಂಭವಾಗಲಿದೆ. ಬರುವ ದಿನಗಳಲ್ಲಿ ಯುವ ಸಮೂಹದ ಭವಿಷ್ಯ ಉಜ್ವಲಬಾಗಬೇಕು, ಸ್ವಾಭಿಮಾನದ ಬದುಕು ಬದುಕಬೇಕು ಎಂದರು.

ಕೋಣನಕೇರಿ ಜನ ಬಹಳ ಶ್ರಮಜೀವಿಗಳು, ಈ ಕಾರ್ಖಾನೆ ಬರಲು ಅವರ ಸಹಕಾರ ಬಹಳವಿದೆ. ಕೋಣನಕೇರಿ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಪಿಯು ಕಾಲೇಜಿಗೆ ಬೇಡಿಕೆ ಸಲ್ಲಿಸಿದ್ದಾರೆ. ಹೊಸ ಕಾಲೇಜುಗಳಿಗೆ ಮಂಜೂರಾತಿ ನೀಡುವ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲಿ ಪಿ.ಯು.ಕಾಲೇಜ್ ಇರುತ್ತದೆ ಎಂದು ಭರವಸೆ ನೀಡಿದರು.

ಕೋಣನಕೇರಿ, ದುಂಡಶಿ, ಹೊಸೂರ, ಯತ್ನಳ್ಳಿ ವರೆಗೆ 15 ಸಾವಿರ ಎಕರೆ ಕಬ್ಬು ಬೆಳೆ ವಿಸ್ತೀರ್ಣವಾಗಿ ರೈತರಿಗೆ ಉತ್ತಮ ಬೆಲೆ ದೊರೆತು ಆರ್ಥಿಕವಾಗಿ ಸಬಲರಾಗಿ ಅವರ ಮಕ್ಕಳು ವಿದ್ಯಾವಂತರಾಗಿ ಉತ್ತಮ ಜೀವನ ನಡೆಸಿದರೆ ಸಂತೋಷವಾಗುತ್ತದೆ. ರೈತರ ಉತ್ಪಾದನೆ ಹೆಚ್ಚಿನ ಬೆಲೆ ಸಿಗಬೇಕು ಎಂದು ಭಾಷಣ ಮಾಡುತ್ತೇವೆ. ಆದರೆ ರೈತರು ಬೆಳೆದ ಬೆಳೆಗಳ ಸಂಸ್ಕರಣ ಘಟಕ ಮೂಲಕ ವೃದ್ಧಿಯಾದಾಗ ಹೆಚ್ಚಿನ ಬೆಲೆ ಸಿಗುತ್ತದೆ ಎಂದರು.

ಈ ಕಾರ್ಖಾನೆಯಲ್ಲಿ ಕೇವಲ ಸಕ್ಕರೆಯಲ್ಲದೆ ಅತ್ಯಾಧುನಿಕ ರೀತಿಯಲ್ಲಿ ಎಥಲಾನ್ ತಯಾರು ಮಾಡಲಿದ್ದಾರೆ. ದೇಶದಲ್ಲಿ ಸಕ್ಕರೆ ಉತ್ಪಾದನೆ ಅಧಿಕವಾಗಿ ಬಹಳ ಸಕ್ಕರೆ ಕಾರ್ಖಾನೆಗಳು ತೊಂದರೆಯಲ್ಲಿವೆ. ಹಾಗಾಗಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ನಸಿಸಿಹೋಗುತ್ತಿರುವ ಕಬ್ಬು ಬೆಳೆ ರೈತರ ಭವಿಷ್ಯ ರೂಪಿಸುವ ಹಿನ್ನಲೆಯಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಲಾಭ ಕೊಡಬೇಕು ಹಾಗೂ ವಿದೇಶದಿಂದ ಪೆಟ್ರೋಲ್, ಡಿಸೈಲ್ ಹಾಗೂ ಗ್ಯಾಸ್ ಆಮದಿಗೆ ಹೆಚ್ಚು ಹಣ ವಿನಿಯೋಗ ತಡೆಯಲು ಎಥಲಾನ್‍ಗೆ ಶೇ.20ರಷ್ಟು ಅನುಮೋದನೆ ನೀಡಿದ್ದಾರೆ. ವಾಜಪೇಯಿ ಅವರ ಸರ್ಕಾರದಲ್ಲಿ ಎಥಲಾನ್‍ಗೆ ಶೇ.5 ರಷ್ಟು ಅನುಮೋದನೆ ನೀಡಲಾಗಿತ್ತು ಎಂದರು.

ಪರಿಸರ ಶುದ್ಧವಾಗಿಟ್ಟುಕೊಂಡು ಆರ್ಥಿಕ ಚಟುವಟಿಕೆ ಮಾಡುವ ನಿಟ್ಟಿನಲ್ಲಿ ಹತ್ತುಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರಿಗೆ ಕಾರ್ಖಾನೆಯಿಂದ ಲಾಭ ದೊರೆಯಲು ಹಾಗೂ ಪೆಟ್ರೋಲ್ ಡಿಸೈಲ್ ಖರೀದಿ ಡಾಲರ್ ಉಳಿಸಲು ಎಥಲಾನ್ ಪಾಲಸಿ ಮಾಡಲಾಗಿದೆ. ಕರ್ನಾಟಕ ಹೆಚ್ಚಿನ ಲಾಭಪಡೆಯುತ್ತಿದೆ. ಮೊದಲು ಸಕ್ಕರೆ ಕಾರ್ಖಾನೆಗಳ ಮೊಲಾಸಿಸ್‍ನಲ್ಲಿ ಎಥಲಾನ್ ತೆಗೆಯಲಾಗುತ್ತಿತ್ತು. ಈಗ ಜ್ಯೂಸ್, ಗೋವಿನಜೋಳ ಹಾಗೂ ಭತ್ತದ ಮೇಲಿನ ಕೆನೆ ಪದರಿನಿಂದ ಎಥಲಾನ್ ತಯಾರಿಕೆಗೆ ಕಾರ್ಖಾನೆ ಸಿದ್ಧವಾಗಿದೆ. ಇದರಿಂದ ಕಬ್ಬು, ಗೋವಿನಜೋಳ ಹಾಗೂ ಭತ್ತದ ಬೆಳೆಗಾರರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಆರ್ಥಿಕ ಬದಲಾವಣೆಯಾಗುತ್ತದೆ. ಮುಂದಿನ ಐದು ತಿಂಗಳಲ್ಲಿ ಇಲ್ಲಿನ ನಕ್ಷೆ ಬದಲಾಗಲಿದೆ. ಪ್ರಥಮ ಹಂತದಲ್ಲಿ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಎರಡನೇ ಹಂತದಲ್ಲಿ ಕೈಗಾರಿಕೆ ಸ್ಥಾಪನೆ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಈ ಕ್ಷೇತ್ರದಲ್ಲಿ ಗುಜರಾತ್ ಅಂಬುಜಾ ಕೈಗಾರಿಕೆ ಆರಂಭವಾಗಿದೆ. ಬರುವದಿನಗಳಲ್ಲಿ ಇನ್ನೂ ಮೂರ್ನಾಲಕು ಕೈಗಾರಿಗಳು ಬರಲಿದ್ದು, ಯುವಕ-ಯುವತಿಯರ ಕೈಗೆ ಕೆಲಸ ಕೊಡುವ ನಿಟ್ಟಿನಲ್ಲಿ ಕೈಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.

ಈ ಭಾಗದಲ್ಲಿ 80ಕ್ಕಿಂತ ಅಧಿಕ ಕೆರೆಗಳನ್ನು ತುಂಬಿಸಲಾಗಿದೆ. ತಡಸದ ವರೆಗೆ ನೀಡು ಕೊಡಲಾಗಿದೆ. ಹತ್ತಿಮತ್ತೂರ ಮತ್ತು ಕಡಕೋಳ ಭಾಗದಲ್ಲಿ ಅಧಿವೇಶನ ನಂತರ ಉದ್ಘಾಟನೆ ನೆರವೇರಿಸಲಾಗುವುದು. ಹಾವೇರಿ ಕ್ಷೇತ್ರದ ಶಾಸಕರು ಇನ್ನೊಂದು ನೀರಾವರಿ ಬೇಡಿಕೆ ಇಟ್ಟುದ್ದು ಅದನ್ನು ಮಂಜೂರು ಮಾಡಲಾಗುವುದು. ಹಾವೇರಿ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ರೂ.30 ಕೋಟಿ ಹಾಗೂ ಹಾಲಿನ ಸಂಸ್ಕರಣ ಘಟಕಕ್ಕೆ ರೂ.20 ಕೋಟಿ ಮಂಜೂರು ಮಾಡಲಾಗಿದ್ದು, ಕೆಲಸ ಆರಂಭವಾಗಿದೆ. ದೂರಷ್ಟಿಯಿಂದ ಕೆಲಸ ಮಾಡಲಾಗುತ್ತಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ, ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ, ರಾಜ್ಯ ಅನುಸೂಚಿತ ಹಾಗೂ ಅನುಸೂಚಿತ ಬಡಕಟ್ಟು ಆಯೋಗಗಳ ಅಧ್ಯಕ್ಷರು ಹಾಗೂ ಶಾಸಕ ನೆಹರು ಓಲೇಕಾರ ಇತರರು ಉಪಸ್ಥಿತರಿದ್ದರು.

You might also like
Leave a comment