ಬೆಳಗಾವಿ, ಜುಲೈ 25: ಅಸಮರ್ಪಕ ನೀರು ಸರಬರಾಜು ಮತ್ತು ಕಸ ವಿಲೇವಾರಿಯ ಸಮಸ್ಯೆಯ ಕಾರಣ ಇಲ್ಲಿನ ರಾಮತೀರ್ಥ ನಗರದ ನಿವಾಸಿಗಳು ಕಂಗಾಲಾಗಿದ್ದಾರೆ.
ಕಳೆದ 10 ದಿನಗಳಿಂದ ಇಲ್ಲಿ ನೀರು ಸರಬರಾಜು ಮಾಡಿಲ್ಲ. ಕಾರಣ ಇಲ್ಲಿನ ಜನರು ಅನಿವಾರ್ಯವಾಗಿ ಟ್ಯಾಂಕರ್ ನೀರು ಖರೀದಿಸುವ ಪರಿಸ್ಥಿತಿ ಉದ್ಭವಿಸಿದೆ. ಬೆಳಗಾವಿ ನಗರಕ್ಕೆ ಹಿಡಕಲ್ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತಿದ್ದು ತುರ್ತು ರಿಪೇರಿ ಕಾರಣದಿಂದ ಕಳೆದ ಎರಡು ದಿನಗಳಿಂದ ನೀರು ಬಿಟ್ಟಿರಲಿಲ್ಲ ಎಂದು ಎಲ್ ಅಂಡ್ ಟಿ ಕಂಪನಿ ಹೇಳಿಕೆ ನೀಡಿದೆ. ಆದರೆ ರಾಮತೀರ್ಥ ನಗರಕ್ಕೆ ಹತ್ತು ದಿನಗಳಿಂದ ನೀರು ಸರಬರಾಜು ಏಕೆ ಮಾಡಿಲ್ಲ ಎಂಬುದಕ್ಕೆ ಸಂಬಂಧಿಸಿದವರ ಅವರ ಬಳಿ ಉತ್ತರ ಇಲ್ಲ.
ರಾಮತೀರ್ಥ ಬಡಾವಣೆಯಲ್ಲಿ ಮನೆ ಹೊಂದಿದವರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ, ನೀರಿನ ಬಿಲ್ ನಿಯಮಿತವಾಗಿ ಪಾವತಿಸುತ್ತಿದ್ದರೂ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಗರದಲ್ಲಿದ್ದು ಮಳೆಗಾಲದಲ್ಲೂ ನಾಲ್ಕೈದು ದಿನಗಳಿಗೊಮ್ಮೆ ಸಮರ್ಪಕ ನೀರು ಪಡೆಯಲು ಜನರು ಹೆಣಗಾಡಬೇಕಾಗಿದೆ.
ನೀರು ಮಾತ್ರವಲ್ಲದೇ ಕಸ ವಿಲೇವಾರಿಯ ಸಮಸ್ಯೆಯನ್ನೂ ಇಲ್ಲಿನ ನಿವಾಸಿಗಳು ಎದುರಿಸುತ್ತಿದ್ದಾರೆ. ನಾಲ್ಕೈದು ದಿನಗಳಿಗೊಮ್ಮೆ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಬರುತ್ತಿದ್ದ ವಾಹನವು ಈಗ ಅದನ್ನೂ ನಿಲ್ಲಿಸಿದೆ. “ಮೊದಲು ನಾಲ್ಕೈದು ದಿನಗಳಿಗೊಮ್ಮೆ ಮುಂಜಾನೆಯಿಂದ ಸಂಜೆ ವರೆಗೆ ಯಾವುದೋ ಸಮಯದಲ್ಲಿ ಕಸದ ವಾಹನ ಬರುತ್ತಿತ್ತು. ಜನರು ಮುಂಜಾನೆಯಿಂದ ಅದರ ಬರುವಿಕೆಗಾಗಿ ಕಾಯುತ್ತ ಇರಬೇಕು. ಮನೆ ಹೊರಗಡೆ ಕಸ ಇಟ್ಟರೆ ನಾಯಿಗಳು ಚೆಲ್ಲಾಪಿಲ್ಲಿ ಮಾಡುತ್ತವೆ ಎಂದು ಕಸದ ವಾಹನಕ್ಕಾಗಿ ಕೆಲಸ ಬಿಟ್ಟು ಕಾಯಬೇಕು. ಒಂದು ನಿಗದಿತ ಸಮಯದಲ್ಲಿ ಕಸದ ವಾಹನ ಎಂದೂ ಬಂದಿಲ್ಲ” ಎಂದು ನಾಗರಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.
ಕಳೆದ ಜುಲೈ 1ನೇ ತಾರೀಖಿನಿಂದ ಕಸ ಸಂಗ್ರಹ ವಾಹನ ಬರುತ್ತಿಲ್ಲ. ಅಲ್ಲದೇ ಈ ಬಡಾವಣೆಯ ಕಸದ ತೊಟ್ಟಿಗಳನ್ನು ತೆಗೆದಿರುವ ಕಾರಣ ಮನೆಗಳಲ್ಲಿ ಕಸ ಇಟ್ಟುಕೊಳ್ಳಲಾಗದೇ ಅನಿವಾರ್ಯವಾಗಿ ಖಾಲಿ ಇರುವ ನಿವೇಶನಗಳ ಎದುರು ಜನರು ಕಸ ಎಸೆದು ಹೋಗುವ ಪರಿಸ್ಥಿತಿ ಉದ್ಭವಿಸಿದೆ. ಅಲ್ಲಲ್ಲಿ ಕಸ ಬಿದ್ದಿದ್ದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ರಾಮತೀರ್ಥ ನಗರವು ಸೊಳ್ಳೆಗಳ ತಾಣವಾಗಿದೆ
ರಾಮತೀರ್ಥ ನಗರವನ್ನು ಪ್ರತಿನಿದಿಸುವ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಅವರು, ಕೇವಲ ಎರಡು ದಿನ ಮಾತ್ರ ನೀರು ಸರಬರಾಜು ಮಾಡುವಲ್ಲಿ ತೊಂದರೆಯಾಗಿತ್ತು, ಶುಕ್ರವಾರ ನೀರು ಬಿಡಲಾಗಿದೆ ಎಂದು ಹೇಳಿದ್ದಾರೆ. ಗುರುವಾರ ಈ ವಿಷಯವನ್ನು ಪಾಲಿಕೆಯ ಸಭೆಯಲ್ಲಿ ಪ್ರಸ್ತಾಪಿಸಿರುವದಾಗಿಯೂ ಅವರು ತಿಳಿಸಿದ್ದಾರೆ.
ಸಮದರ್ಶಿಯೊಂದಿಗೆ ಮಾತನಾಡಿದ ಸದಸ್ಯ ಕೊಂಗಾಲಿ ಅವರು, “ಕಸ ಸಂಗ್ರಹ ಗುತ್ತಿಗೆ ಪಡೆದಿದ್ದ ಎಜೆನ್ಸಿಯ ಗುತ್ತಿಗೆಯ ಅವಧಿ ಜೂನ್ 30ಕ್ಕೆ ಕೊನೆಗೊಂಡಿದ್ದು ಹೊಸ ಎಜನ್ಸಿಗೆ ಗುತ್ತಿಗೆ ನೀಡಲಾಗಿದೆ. ಜುಲೈ 1ರಿಂದಲೇ ಅವರು ಕೆಲಸ ಪ್ರಾರಂಭಿಸಬೇಕಿತ್ತು. ಆದರೆ ಈ ವರೆಗೂ ಪ್ರಾರಂಭಿಸಿಲ್ಲ ಎಂದು ಹೇಳಿದರು.
ಒಟ್ಟಿನಲ್ಲಿ ರಾಮತೀರ್ಥ ನಗರದ ನಿವಾಸಿಗಳು ಅಸಮರ್ಪಕ ನೀರು ಸರಬರಾಜು ಮತ್ತು ಕಸದ ಸಮಸ್ಯೆಯಿಂದ ಹೈರಾಣಾಗಿದ್ದು ಇದರಿಂದ ಯಾವಾಗ ಮುಕ್ತಿ ದೊರೆಯುತ್ತದೆ ಎಂದು ಕಾಯುತ್ತಿದ್ದಾರೆ.


