This is the title of the web page

ಸಪಾಗೆ ಬಟನ್ ಒತ್ತಿದರೂ ಹೊರಬಂದ ಬಿಜೆಪಿ ಸ್ಲಿಪ್; ಆರೋಪ ನಿರಾಕರಿಸಿದ ಆಯೋಗ

ಲಖನೌ, ಫೆ. 20:-ಉತ್ತರ ಪ್ರದೇಶದ 16 ಜಿಲ್ಲೆಗಳ 59 ಕ್ಷೇತ್ರಗಳಿಗೆ ಇಂದು ಮೂರನೇ ಹಂತದ ಮತದಾನ ನಡೆಯಿತು. ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನಲ್ಲೂ ಮತದಾನ ನಡೆಯಿತು.

ಉತ್ತರ ಪ್ರದೇಶದಲ್ಲಿ ಬೆಳಿಗ್ಗೆ ಮತದಾನ ಆರಂಭವಾದ ಸಮಯದಲ್ಲೇ ಕಾನಪುರ ಗ್ರಾಮಾಂತರದಲ್ಲಿ ಇವಿಎಂ ಮತಯಂತ್ರದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.

ಮತದಾರರು ಸಮಾಜವಾದಿ ಪಕ್ಷದ ಗುರುತಿನ ಪಕ್ಕದಲ್ಲಿರುವ ಬಟನ್ ಒತ್ತಿದ ನಂತರವೂ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಬಿಜೆಪಿಯ ಸ್ಲಿಪ್ ಅನ್ನು ನೀಡಿದೆ ಎಂದು ಸಮಾಜವಾದಿ ಪಕ್ಷವು ಆರೋಪಿಸಿತು. ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದೆ.

“ಕಾನಪುರ ಗ್ರಾಮಾಂತರದ ಭೋಗ್ನಿಪುರ 208 ವಿಧಾನಸಭೆಯ ಬೂತ್ ಸಂಖ್ಯೆ 121 ರಲ್ಲಿ ಸಮಾಜವಾದಿ ಪಕ್ಷದ ಬಟನ್ ಒತ್ತಿದ ನಂತರ ಬಿಜೆಪಿಯ ಸ್ಲಿಪ್ ಹೊರಬರುತ್ತಿದೆ. ಸುಗಮ ಮತ್ತು ನ್ಯಾಯಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಗಮನಹರಿಸಬೇಕು” ಎಂದು ಸಮಾಜವಾದಿ ಹಿಂದಿಯಲ್ಲಿ ಟ್ವೀಟ್ ಮಾಡಿದರು.

“ಕಾನಪುರ ದೇಹತ್‌ನ ಭೋಗ್ನಿಪುರ್‌ನಲ್ಲಿರುವ ಮತಗಟ್ಟೆ ಸಂಖ್ಯೆ 21 ರಲ್ಲಿ ಇವಿಎಂನಲ್ಲಿ ಎಸ್‌ಪಿಯ ಸೈಕಲ್ ಚಿಹ್ನೆಯನ್ನು ಒತ್ತಿದಾಗ ಬಿಜೆಪಿ ಚಿಹ್ನೆ ಇರುವ ಸ್ಲಿಪ್ ಹೊರಬರುತ್ತಿದೆ ಎಂಬ ದೂರು ನಮಗೆ ಬಂದಿದೆ. ಆದರೆ ಈ ದೂರು ಆಧಾರರಹಿತವಾಗಿದೆ ಎಂದು ಕಂಡು ಬಂದಿದೆ” ಎಂದು ಹೆಚ್ಚುವರಿ ಚುನವಣಾ ಮುಖ್ಯ ಅಧಿಕಾರಿ ಬಿಡಿರಾಮ ತಿವಾರಿ ಹೇಳಿದ್ದಾರೆ.

ಇನ್ನು ಮೈನ್‌ಪುರಿಯ ಕೆಲವು ಮತಗಟ್ಟೆಗಳಲ್ಲಿ ಇವಿಎಂಗಳು ಅಸಮರ್ಪಕವಾಗಿವೆ ಎಂದು ಅಖಿಲೇಶ ಯಾದವ ಪಕ್ಷ ಆರೋಪಿಸಿದೆ.

ಇಂದು ಮತದಾನ ನಡೆಯುವ ಸ್ಥಾನಗಳು ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿವೆ. 2017 ರಲ್ಲಿ, ಈ 59 ಸ್ಥಾನಗಳಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಸಮಾಜವಾದಿ ಪಕ್ಷವು 9 ಸ್ಥಾನಗಳನ್ನು, ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿತ್ತು ಮತ್ತು ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷವು ಯಾವುದೇ ಸ್ಥಾನವನ್ನು ಇಲ್ಲಿ ಪಡೆದಿಲ್ಲ.

ಮೂರನೇ ಹಂತದ ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆ ಕ್ಷೇತ್ರಗಳ ಪೈಕಿ 172 ಸ್ಥಾನಗಳಿಗೆ ಮತದಾನ ಮುಕ್ತಾಯ ಆಯಿತು.

You might also like
Leave a comment