ಗೋಕಾಕ, ೨೪: ಪ್ರಯಾಗರಾಜಗೆ ಕುಂಭಮೇಳದಲ್ಲಿ ಪಾಲ್ಗೊಂಡು ಮರಳಿ ಬರುತ್ತಿದ್ದಾಗ ಮಧ್ಯಪ್ರದೇಶದಲ್ಲಿ ಗೋಕಾಕದ ಆರು 6 ಜನ ಪ್ರಯಾಣಿಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮೃತರನ್ನು ಬಾಲಚಂದ್ರ ನಾರಾಯಣ ಗೌಡರ (50 ವರ್ಷ) ಲಕ್ಷ್ಮೀ ಬಡಾವಣೆ ಗೋಕಾಕ, ಸುನೀಲ ಬಾಲಕೃಷ್ಣ ಶೇಡಬಾಳೆ (45 ವರ್ಷ), ಬಸವರಾಜ ನಿರಪಾದಪ್ಪಾ ಕುರ್ತಿ (63 ವರ್ಷ) ಗೊಂಬಿ ಗುಡಿ, ಗೋಕಾಕ, ಬಸವರಾಜ ಶಿವಪ್ಪಾ ದೊಡಮನಿ (49 ವರ್ಷ), ಗುರುವಾರ ಪೇಟ, ಗೋಕಾಕ, ಈರಣ್ಣ ಶನಬಸಪ್ಪಾ ಶೇಬಿನಕಟ್ಟಿ (27 ವರ್ಷ), ಕಮತಗಿ, ಗುಳೇದಗುಡ್ಡ ಮತ್ತು ವೀರೂಪಾಕ್ಷ ಚನ್ನಪ್ಪಾ ಗುಮತಿ (61 ವರ್ಷ), ಗುರುವಾರ ಪೇಟ, ಗೋಕಾಕ ಮತ್ತು ಗಾಯಗೊಂಡವರನ್ನು ಮುಸ್ತಾಕ ಶಿಂದಿಕುರಬೇಟ ಮತ್ತು ಸದಾಶಿವ ಉಪಬಳ್ಳಿ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಬೆಳಗಾವಿ ಜಿಲ್ಲೆಯ ಗೋಕಾಕ ನಿವಾಸಿಗಳು.
ಉತ್ತರ ಪ್ರದೇಶದ ಪ್ರಯಾಗರಾಜನಿಂದ ಹಿಂತಿರುಗುತ್ತಿದ್ದಾಗ ಖಿತೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪಹ್ರೇವಾ ಗ್ರಾಮದ ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಈ ಘಟನೆ ನಡೆದಿದೆ ಎಂದು ಜಬಲ್ಪುರ ಜಿಲ್ಲಾಧಿಕಾರಿ ದೀಪಕ್ ಸಕ್ಸೇನಾ ತಿಳಿಸಿದ್ದಾರೆ. ಬೆಳಗಿನ ಜಾವ 5 ಗಂಟೆಗೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ಗೋಕಾಕದಿಂದ KA49 M 5054 ಸಂಖ್ಯೆಯ ಕ್ರೂಜರ್ ಕ್ರೂಸರ್ ವಾಹನದಲ್ಲಿ ಒಟ್ಟು 8 ಜನ ಪ್ರಯಾಣ ಬೆಳೆಸಿದ್ದರು. ನಸುಕಿನಲ್ಲಿ ಮುಂಜಾನೆ ವೇಗದಿಂದ ಹೊರಟಿದ್ದ ಕ್ರೂಸರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಎದುರುಗಡೆ ಬರುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ೬ ಮಂದಿ ಸ್ಥಳದಲ್ಲಿಯೇ ಸಾವನಪ್ಪಿದರೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತೀ ವೇಗದಲ್ಲಿದ್ದ ಜೀಪ್ ಚಾಲಕ ಕಾರ್ನ ನಿಯಂತ್ರಣ ಕಳೆದುಕೊಂಡಿದ್ದರ ಪರಿಣಾಮವಾಗಿ ಮೊದಲು ವಾಹನವು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು, ಬಳಿಕ ಮರಕ್ಕೆ ಬಡಿದಿದೆ. ಆ ನಂತರ ಹೆದ್ದಾರಿಯ ಇನ್ನೊಂದು ಬದಿಗೆ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ನೀಡಲಾಗಿದೆ.. ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ಸಿಹೋರಾ ಪಟ್ಟಣದ ವೈದ್ಯಕೀಯ ಸೌಲಭ್ಯದಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಜಬಲ್ಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.