This is the title of the web page

8 ಕೋಟಿ ರೂಪಾಯಿ ಖರ್ಚು ಮಾಡಿದರೂ ಬದುಕುಳಿಯಲಿಲ್ಲ ಕೊರೋನಾ ರೋಗಿ

ಚೆನ್ನೈ, 13- ಕೊರೋನಾ ಸೋಂಕಿತ ಮಧ್ಯ ಪ್ರದೇಶದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಮನೆಯವರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ತೀವ್ರ ಸೋಂಕಿನಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಚೆನ್ನೈ ನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ ನುರಿತ ವಿದೇಶಿ ವೈದ್ಯರಿಂದ ಚಿಕಿತ್ಸೆ ನೀಡಲಾಯಿತು. ವಿಪರ್ಯಾಸವೆಂದರೆ 254 ದಿನಗಳ ದೀರ್ಘ ಚಿಕಿತ್ಸೆಯ ಬಳಿಕವೂ ಸಹ ಆ ವ್ಯಕ್ತಿ ಇತ್ತೀಚೆಗೆ ಮೃತಪಟ್ಟರು.

ಅವರ ಆಸ್ಪತ್ರೆಯ ಚಿಕಿತ್ಸೆಯ ವೆಚ್ಚ 8 ಕೋಟಿ ರೂಪಾಯಿ, ಅಂದರೆ ದಿನಕ್ಕೆ ಒಟ್ಟು 3 ಲಕ್ಷ ರೂಪಾಯಿ.

ಎಂಟು ತಿಂಗಳ ವರೆಗೆ ಕೊರೋನಾ ಹಾಗೂ ನಂತರದ ತೊಂದರೆಗೆ ಚಿಕಿತ್ಸೆಗೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಗೆ ಸುಮಾರು 8 ಕೋಟಿ ರೂ.ವೆಚ್ಚ ಮಾಡಿದರೂ ಮಧ್ಯಪ್ರದೇಶದ ರೈತ ಮಂಗಳವಾರ ರಾತ್ರಿ ಕೊರೋನಾ ಸಂಬಂಧಿ ತೊಂದರೆಯಿಂದ ಕೊನೆಗೂ ಬದುಕುಳಿಯಲಿಲ್ಲ.

ಏಪ್ರಿಲ್ 2021 ರಲ್ಲಿ ಮಧ್ಯಪ್ರದೇಶದ ರೇವಾ ರೈತ ಧರಂಜಯ ಸಿಂಗ್ (50) ಕೊರೋನಾ ಸೋಂಕಿಗೆ ಒಳಗಾಗಿದ್ದರು. ಅವರ ಸ್ಥಿತಿ ಸುಧಾರಿಸದಿದ್ದಾಗ, ಅವರನ್ನು ಮೇ 18 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ವಿಮಾನದ ಮೂಲಕ ತರಲಾಗಿತ್ತು. ಅಲ್ಲಿ ಲಂಡನ್ ವೈದ್ಯರು ಅವರ ಮೇಲ್ವಿಚಾರಣೆ ನಡೆಸುತ್ತಿದ್ದರು. ಅವರ ಚಿಕಿತ್ಸೆಯು ಸುಮಾರು 254 ದಿನಗಳ ಕಾಲ ನಡೆಯಿತು. ಅವರನ್ನು ಎಕ್ಮೋ ಯಂತ್ರದಲ್ಲಿ ಇಡಲಾಗಿತ್ತು. ಪ್ರತಿದಿನ ಚಿಕಿತ್ಸೆಗೆ ಸುಮಾರು 3 ಲಕ್ಷ ರೂ.ವೆಚ್ಚವಾಗುತ್ತಿತ್ತು. ಈ ವೇಳೆ ಕುಟುಂಬ ಚಿಕಿತ್ಸೆಗಾಗಿ 50 ಎಕರೆ ಜಮೀನನ್ನು ಮಾರಾಟ ಮಾಡಿದೆ.

ಒಂದು ವಾರದ ಹಿಂದೆ ಇದ್ದಕ್ಕಿದ್ದಂತೆ ಅವರ ಬಿಪಿ ಕಡಿಮೆಯಾಯಿತು ಎಂದು ಧರಂಜಯ ಅವರ ಹಿರಿಯ ಸಹೋದರ ವೃತ್ತಿಯಲ್ಲಿ ವಕೀಲರಾದ ಪ್ರದೀಪ ಸಿಂಗ್ ಹೇಳಿದ್ದಾರೆ. ವೈದ್ಯರು ಅವರನ್ನು ಐಸಿಯುಗೆ ದಾಖಲಿಸಿದರು. ಇಲ್ಲಿ ಬ್ರೇನ್ ಹೆಮರೇಜ್ ಆಗಿದ್ದು, ವೆಂಟಿಲೇಟರ್ ಹಾಕಬೇಕಾಯಿತು.

ಮೌಗಂಜ್ ಪ್ರದೇಶದ ರಾಕ್ರಿ ಗ್ರಾಮದ ನಿವಾಸಿ ಧರಂಜಯ ಸಿಂಗ್ (50) ಅವರನ್ನು 30 ಏಪ್ರಿಲ್ 2021 ರಂದು ಪರೀಕ್ಷೆ ಮಾಡಿದಾಗ ಮೇ 2 ರಂದು ವರದಿ ಬಂದಿತ್ತು. ಅವರು ಕೊರೋನಾ ಸೋಂಕಿತರು ಎಂದು ಕಂಡುಬಂತು. ಆರಂಭದಲ್ಲಿ ಅವರನ್ನು ರೇವಾದ ಸಂಜಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೇ 18ರಂದು ಪರಿಸ್ಥಿತಿ ಸುಧಾರಿಸದಿದ್ದಾಗ ಏರ್ ಆಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಯಿತು. ಅಂದಿನಿಂದ ಅಲ್ಲಿಯೇ ದಾಖಲಾಗಿದ್ದರು. ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಧರಂಜಯ್ ಸಿಂಗ್ ಅವರ ಶ್ವಾಸಕೋಶದಲ್ಲಿ ಶೇ.100ರಷ್ಟು ಸೋಂಕು ತಗುಲಿರುವುದು ಕಂಡು ಬಂದಿತ್ತು. ಆದರೆ, ನಾಲ್ಕು ದಿನಗಳ ನಂತರ ಕೊರೋನಾ ಸೋಂಕಿನಿಂದ ಅದು ಮುಕ್ತವಾಯಿತು. ಶ್ವಾಸಕೋಶ ಹಾಳಾಗಿದ್ದರಿಂದ ಎಕ್ಮೋ ಯಂತ್ರದ ಮೂಲಕ ಹೊಸ ಜೀವ ನೀಡುವ ಪ್ರಯತ್ನ ಮಾಡಲಾಗುತ್ತಿತ್ತು.

ಕುಟುಂಬ ಸದಸ್ಯರ ಪ್ರಕಾರ, ದೇಶದ ಮತ್ತು ವಿದೇಶಗಳ ವೈದ್ಯರ ಸಮ್ಮುಖದಲ್ಲಿ ಧರಂಜಯ ಸಿಂಗ್ ಅವರಿಗೆ ಚಿಕಿತ್ಸೆ ನೀಡಲಾಯಿತು. ಅವರನ್ನು ನೋಡಲು ಲಂಡನ್‌ನ ಪ್ರಸಿದ್ಧ ವೈದ್ಯರು ಅಪೋಲೋ ಆಸ್ಪತ್ರೆಗೆ ಬರುತ್ತಿದ್ದರು. ಇದರೊಂದಿಗೆ ಇತರ ದೇಶಗಳ ವೈದ್ಯರನ್ನೂ ಆನ್‌ಲೈನ್‌ನಲ್ಲಿ ಸಮಾಲೋಚಿಸಲಾಯಿತು. ಲಂಡನ್‌ ವೈದ್ಯರ ಆದೇಶದ ಮೇರೆಗೆ ಎಕ್ಮೋ ಯಂತ್ರದಲ್ಲಿ ಎಂಟು ತಿಂಗಳ ಕಾಲ ಇರಿಸಲಾಯಿತು. ಆಗ ಅವರು ಸಂಪೂರ್ಣವಾಗಿ ಚೆನ್ನಾಗಿದ್ದರು.

ಧರಂಜಯ ಸಿಂಗ್‌ ಅವರು ಪ್ರಶಸ್ತಿ ಪುರಸ್ಕೃತ ರೈತರಾಗಿದ್ದರು. 26 ಜನವರಿ 2021 ರಂದು ಪಿಟಿಎಸ್ ಮೈದಾನದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಅವರು ಧರಂಜಯ್ ಅವರನ್ನು ಗೌರವಿಸಿದ್ದರು. ಸ್ಟ್ರಾಬೆರಿ ಬೆಳೆದು ಇ-ಕೃಷಿಗೆ ವಿಶಿಷ್ಟವಾದ ಗುರುತು ನೀಡಿದ್ದ ಧರಂಜಯ್ ಸಿಂಗ್ ಅವರನ್ನು ಗೌರವಿಸಲಾಗಿತ್ತು. ವಿಂಧ್ಯದಲ್ಲಿ ಅವರು ಅದನ್ನು ಬೆಳೆದಿದ್ದರು. ಕೊರೋನಾ ಅವಧಿಯಲ್ಲಿ ಜನರ ಸೇವೆ ಮಾಡುವಾಗ ಅವರಿಗೆ ಸೋಂಕು ತಗುಲಿತ್ತು.

ಚಿಕಿತ್ಸೆಗೆ 8 ಕೋಟಿ ಖರ್ಚಾಗಿದೆ ಎಂದು ಸಂಬಂಧಿಕರು ಹೇಳಿದ್ದಾರೆ. ಕುಟುಂಬಸ್ಥರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಸರ್ಕಾರದಿಂದ ಕೇವಲ 4 ಲಕ್ಷ ರೂ.ಗಳ ಧನ ಸಹಾಯ ದೊರೆತಿದೆ.

ಧರಂಜಯ ಸಿಂಗ್ ಅವರಿಗೆ 100 ಎಕರೆಗೂ ಹೆಚ್ಚು ಭೂಮಿ ಇತ್ತು. ಚಿಕಿತ್ಸೆಯ ಸಮಯದಲ್ಲಿ ಕುಟುಂಬವು ಚಿಕಿತ್ಸೆ ವೆಚ್ಚಕ್ಕಾಗಿ 50 ಎಕರೆ ಭೂಮಿಯನ್ನು ಮಾರಾಟ ಮಾಡಬೇಕಾಯಿತು.ಕಾರಣ ಚಿಕಿತ್ಸೆಗೆ ದಿನಕ್ಕೆ 3 ಲಕ್ಷ ರೂ.ವೆಚ್ಚ ಭರಿಸಬೇಕಾಗಿತ್ತು. ಇದಕ್ಕೂ ಮುನ್ನ ಮೀರತ್‌ನಲ್ಲಿ ಅವರಿಗೆ 100 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು.

ಏನಿದು ಎಕ್ಮೊ ಯಂತ್ರ….?

ವೆಂಟಿಲೇಟರ್ ಸಹ ವಿಫಲವಾದಾಗ, ರೋಗಿಯನ್ನು ಎಕ್ಮೋ ಯಂತ್ರದಲ್ಲಿ ಇರಿಸಲಾಗುತ್ತದೆ. ಈ ಯಂತ್ರದಿಂದ ರೋಗಿಯ ರಕ್ತವನ್ನು ಹೊರತೆಗೆಯುವ ಮೂಲಕ ಆಮ್ಲಜನಕೀಕರಣವನ್ನು ಮಾಡಲಾಗುತ್ತದೆ. ನಂತರ ಆ ರಕ್ತವನ್ನು ಮತ್ತೆ ದೇಹದೊಳಗೆ ಕಳುಹಿಸಲಾಗುತ್ತದೆ. ಇದು ಕೃತಕ ಪ್ರಕ್ರಿಯೆಯಾಗಿದ್ದು, ದೇಹದ ಆಮ್ಲಜನಕವನ್ನು ನಿಯತಕಾಲಿಕವಾಗಿ ನಿರ್ವಹಿಸಬಹುದು.

ಈ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಮೊದಲು ಇದನ್ನು ಬಳಸಲು 4 ರಿಂದ 5 ಲಕ್ಷ ರೂಪಾಯಿ ಬೇಕಾಗುತ್ತದೆ. ಬಳಿಕ ಚಿಕಿತ್ಸೆ ಮುಂದುವರಿಸಲು ದಿನಕ್ಕೆ 2-೩ ಲಕ್ಷ ರೂ.ಬೇಕಾಗುತ್ತದೆ.

You might also like
Leave a comment