ಲಖನೌ : ಭೀಕರ ಅಪಘಾತದಲ್ಲಿ ಪ್ರಯಾಗರಾಜ ಕುಂಭಮೇಳಕ್ಕೆ ಹೋಗಿದ್ದ ಬೀದರ ಮೂಲದ ಒಂದೇ ಕುಟುಂಬದ 5 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದೆ.
ಲಾರಿ ಮತ್ತು ಕ್ರೂಸರ್ ನಡುವೆ ಶುಕ್ರವಾರ ಬೆಳಿಗ್ಗೆ ಮಿರಜಾಪೂರ ಜಿಲ್ಲೆಯ ರೂಪಾಪೂರ ಬಳಿ ಈ ಅಪಘಾತ ಸಂಭವಿಸಿದೆ. 5 ಮಂದಿ ಸಾವನ್ನಪ್ಪಿದ್ದು ಉಳಿದವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಮೃತರನ್ನು ಬೀದರ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ (35) ಸಂತೋಷ (45) ನೀಲಮ್ಮ (62,), ಕಲಾವತಿ (40), ಮತ್ತು ಲಕ್ಷ್ಮಿ, (57) ಎಂದು ಗುರುತಿಸಲಾಗಿದೆ. ಗಾಯಳುಗಳಾದ ಸುಜಾತಾ, ಕವಿತಾ, ಅನಿತಾ, ಖುಷಿ ಗಣೇಶ ಮತ್ತು ಭಗವಂತ ಅವರನ್ನು ಅಪಘಾತ ಸಂಭವಿಸಿದ ಸ್ಥಳದ ಸಮೀಪದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಇತ್ತ ಬೀದರ ಪೊಲೀಸ್ ವರಿಷ್ಟಧಿಕಾರಿ ಪ್ರದೀಪ್ ಗುಂಟಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದು ಲಾಡಗೇರಿ ಕಾಲೋನಿ ನಿವಾಸಿಗಳು ಜೀಪ್ ಒಂದನ್ನು ಬಾಡಿಗೆಯಿಂದ ಗೊತ್ತು ಮಾಡಿ ಫೆಬ್ರವರಿ 18ರಂದು ಪ್ರಯಾಣ ಆರಂಭಿಸಿ ಫೆಬ್ರವರಿ 20 (ಗುರುವಾರ) ಪ್ರಯಾಗರಾಜ ತಲುಪಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಇತರ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಪೂರೈಸಿ ತಮ್ಮ ಕಾರ್ಯಕ್ರಮದಂತೆ ಉತ್ತರ ಪ್ರದೇಶದ ಮತ್ತೊಂದು ಧಾರ್ಮಿಕ ಕ್ಷೇತ್ರ ಕಾಶಿಗೆ ಶುಕ್ರವಾರ ಬೆಳಗಿನ ಜಾವ ಪ್ರಯಾಣ ಬೆಳೆಸಿದ್ದರು.
ಬೆಳಗಿನ ಜಾವ ಅವರ ವಾಹನ ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಹಿಂಬದಿಯಿಂದ ಅಪ್ಪಳಿಸಿದೆ. ವಾಹನ ಅತಿಯಾದ ವೇಗದಲ್ಲಿದ್ದರಿಂದ ಇಷ್ಟು ಸಾವು ನೋವುಗಳಿಗೆ ಕಾರಣವಾಗಿದೆ ಎಂದು ಎಸ್ ಪಿ ಗುಂಟಿ ತಿಳಿಸಿದರು.
ಬೀದರ್ ಪೊಲೀಸ್ ಮತ್ತು ಜಿಲ್ಲಾಡಳಿತ ಉತ್ತರ ಪ್ರದೇಶದ ಆಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು, ಮೃತ ದೇಹಗಳನ್ನು ತರಲು ಮತ್ತು ಗಾಯಗೊಂಡವರ ಚಿಕಿತ್ಸೆ ಕುರಿತು ಮಾಹಿತಿ ಪಡಕೊಳ್ಳುತ್ತಿದೆ ಎಂದೂ ಎಸ್ ಪಿ ತಿಳಿಸಿದರು.
ಒಂದೇ ಗಾಡಿಯಲ್ಲಿ ಒಟ್ಟು 12 ಜನ ಕುಂಭ ಮೇಳಕ್ಕೆ ತೆರಳಿದ್ದರು. ಪುಣ್ಯಸ್ನಾನ ಮಾಡಿದ ಬಳಿಕ ಪ್ರಯಾಗರಾಜನಿಂದ ಕಾಶಿ ಕಡೆಗೆ ಕ್ರೂಸರನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗೆ ಕಾಶಿಯಿಂದ 20 ಕಿಲೋ ಮೀಟರ್ ದೂರದಲ್ಲಿ ಲಾರಿಗೆ ಹಿಂದಿನಿಂದ ಕ್ರೂಸರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಉಳಿದವರ ಸ್ಥಿತಿ ಗಂಭೀರವಾಗಿದೆ.
ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.