This is the title of the web page

ಸಂಗೀತ ಯುಗದ ಅಂತ್ಯ

ಲತಾ ಅವರಿಂದ ಮತ್ತೆ ಹಾಡಿಸಿ ಕೇಳಿದವರು ಇಬ್ಬರೇ. ಒಬ್ಬರು ಪಂಡಿತ್ ನೆಹರೂ, ಮತ್ತೊಬ್ಬರು ಖ್ಯಾತ ಸಂಗೀತ ನಿರ್ದೇಶಕ ನೌಷಾದ. ಚೀನ ಯುದ್ಧದ ಸಮಯದಲ್ಲಿ ದೆಹಲಿಯ ಕ್ರೀಡಾಂಗಣದಲ್ಲಿ ಲತಾ ಹಾಡಿದ ‘ಏ ಮೇರೆ ವತನ್ ಕೆ ಲೋಗೋ’ ಅಂದಿನ ಪ್ರಧಾನಿ ನೆಹರೂ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡಿತ್ತು. ಇನ್ನೊಮ್ಮೆ ಮುಂಬಯಿನಲ್ಲಿ ನಡೆದ ಲತಾ ಸಂಗೀತ ಸಂಜೆಯಲ್ಲಿ ಹಾಜರಿದ್ದ ನೆಹರೂ ಅವರು, ‘ಏ ಮೇರೆ ವತನ್’ ಹಾಡುವಂತೆ ಕೋರಿದ್ದರು, ಅವರು ಹಾಡಿದರು. ಸಂಗೀತ ನಿರ್ದೇಶಕ ನೌಷಾದ ಅಲಿ ಅಸ್ವಸ್ಥರಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ನಿತ್ಯ ಲತಾ ಅವರಿಗೊಂದು ನೌಷಾದ ಅವರಿಂದ ಫೋನ್ ಕರೆ ಹೋಗುತ್ತಿತ್ತು. ಮಾತು ಮುಕ್ತಾಯ ಆಗುವಾಗ ‘ರಸಿಕ ಬಲಮಾ’ ಒಮ್ಮೆ ಹಾಡಿಬಿಡು ಎಂಬ ಕೋರಿಕೆ. ಒಂದಲ್ಲ ಹಲವು ಸಲ ಈ ಹಾಡು ಫೋನ್‍ನಲ್ಲಿ ನೌಷಾದ್‍ಗಾಗಿ ಹಾಡಿದರು ಲತಾ. ಇದನ್ನು ಅವರ ಲಂಡನ್‍ನ ಆಲ್ಬರ್ಟ್ ವಿಕ್ಟರ್ ಮೆಮೋರಿಯಲ್ ಹಾಲ್‍ನಲ್ಲಿ ನಡೆಸಿಕೊಟ್ಟ ಸಂಗೀತ ಸಂಜೆಯ ಸಮಯದಲ್ಲಿ ನೆನಪು ಮಾಡಿಕೊಂಡು ಹೇಳಿದ್ದರು.

ಐದು ವರ್ಷಕ್ಕೆ ಆಕೆಯ ಸಂಗೀತ ಪ್ರತಿಭೆ ಗಮನಿಸಿದ ತಂದೆ ದೀನಾನಾಥ ಮಂಗೇಶ್ಕರ ಮಗಳಿಗೆ ತಾವೇ ಸಂಗೀತ ಪಾಠ ಆರಂಭಿಸಿದರು. ಅದರ ಹಿಂದಿನ ದಿನ ಅಂಗಳದಲ್ಲಿ ಆಡುತ್ತಿದ್ದ ಲತಾಗೆ ತಂದೆಯ ಶಿಷ್ಯನೊಬ್ಬ ಪೂರಿಯಾ ಧನಶ್ರೀ ರಾಗದ ರಿಯಾಜ್‍ನಲ್ಲಿ ತಪ್ಪಾಗಿ ಹಾಡುತ್ತಿದ್ದುದನ್ನು ಗಮನಿಸಿ ಆಟ ನಿಲ್ಲಿಸಿ, ಓಡಿ ಬಂದು ಆ ಶಿಷ್ಯನನ್ನು ತಿದ್ದಿದರು. ಅದನ್ನು ಗಮನಿಸಿದ ತಂದೆ, ಮರು ದಿನದಿಂದ ಅದೇ ಪೂರಿಯಾ ಧನಶ್ರೀ ರಾಗದೊಡನೆ ಮಗಳಿಗೆ ಸಂಗೀತದ ಶ್ರೀಕಾರ ಆರಂಭಿಸಿದರು. ಅವರದ್ದು ಸಂಪೂರ್ಣ ಸಂಗೀತ ಕುಟುಂಬ. ಮೂವರು ತಂಗಿಯರು, ಸಹೋದರ ಕೂಡ ಸಂಗೀತ ರಂಗದಲ್ಲಿ ದುಡಿದವರು. ಅದೊಂದು ದಿನ ಪಂಡಿತ ಜಸರಾಜ ಜೈಪುರದಲ್ಲಿ ಅಂದಿನ ಮಹಾನ್ ಸಂಗೀತ ಸಾಧಕ ಬಡೆ ಗುಲಾಮ ಅಲಿಖಾನ್ ಅವರನ್ನು ಕಾಣಲು ಹೋಗಿದ್ದರು. ಮಾತಿನ ನಡುವೆ ರೇಡಿಯೋದಲ್ಲಿ ಲತಾ ಹಾಡಿದ ಹಾಡು ಬರುತ್ತಿತ್ತು. ಮಾತು ನಿಲ್ಲಿಸಿದ ಖಾನ್ ಸಾಹೇಬರು ಕಿವಿಗೊಟ್ಟು ಕೇಳಿ, ಹಾಡು ಮುಗಿದ ಮೇಲೆ ಹೇಳಿದರು, ‘ಕಂಭಕ್ತ ಭೂಲ್ ಸೇ ಭೀ ಬೇಸುರಾ ನಹೀ ಗಾತಿ’.

ಹದಿಮೂರು ವರ್ಷದ ಹುಡುಗಿಯು ತಂದೆಯ ಸಾವಿನ ನಂತರ ಇಡೀ ಸಂಸಾರ ನಡೆಸುವ ಹೊಣೆ ಹೊರಬೇಕಾಯಿತು. ಆಗ ಆಶ್ರಯಿಸಿದ್ದು ನಾಟಕ ಮತ್ತು ಸಿನಿಮಾ ರಂಗವನ್ನು. ಎಂಟು ಸಿನಿಮಾಗಳಲ್ಲಿ ಅಭಿನಯಿಸಿದರೂ ಮನಸ್ಸಿಗೆ ತೃಪ್ತಿ ಇಲ್ಲ. ಕೊನೆಗೆ ಹಾಡಿನ ಅವಕಾಶ ಸಿಕ್ಕಾಗ ಧನ್ಯ ಭಾವ. ಅವರು ಸಿನೆಮಾ ಗಾಯನಕ್ಕೆ ಬರುವ ಸಮಯಕ್ಕೆ ಪ್ರಸಿದ್ಧ ಆಗಿದ್ದವರು ನೂರ್ ಜಹಾನ್. ಆಕೆ ಲತಾಳ ಅಚ್ಚುಮೆಚ್ಚಿನ ಗಾಯಕಿ. ದೇಶ ವಿಭಜನೆ ನಂತರ ನೂರ್ ಜಹಾನ್ ಪಾಕಿಸ್ತಾನ ತೆರಳಿದರು. ಅಮೃತಸರಕ್ಕೆ ಸಿನೆಮಾ ಕೆಲಸಕ್ಕೆಂದು ಭೇಟಿ ನೀಡಿದ ಲತಾಗೆ ನೂರ್ ಜಹಾನ್ ಅವರೊಡನೆ ಮಾತಾಡುವ ಇಚ್ಛೆ. ಫೋನ್ ಮಾಡಿ ಗಂಟೆಗಟ್ಟಲೇ ಮಾತಾಡಿದರೂ ಸಮಾಧಾನ ಆಗಲಿಲ್ಲ. ಇಬ್ಬರೂ ವಾಘಾ ಗಡಿಯಲ್ಲಿ ಸಂಧಿಸುವ ನಿರ್ಧಾರ ಮಾಡಿದರು. ಲಾಹೋರ್ ಅಲ್ಲಿಂದ ಎರಡು ತಾಸಿನ ಹಾದಿ. ಗಡಿಗೆ ಬಂದ ಲತಾ ಮತ್ತು ನೂರ್ ಜಹಾನ್ ‘ನೋ ಮ್ಯಾನ್ಸ್ ಲ್ಯಾಂಡ್’ನಲ್ಲಿ ಪರಸ್ಪರ ಬಿಗಿದಪ್ಪಿದ ಕ್ಷಣ, ಎರಡು ಕಡೆಯ ಸೈನಿಕರು ಮತ್ತು ಅಲ್ಲಿದ್ದ ಎಲ್ಲರ ಕಣ್ಣಲ್ಲಿ ನೀರು ಹನಿಯಾಡುತ್ತಿತ್ತು. ದೇಶ, ಭಾಷೆಗಳ ಗಡಿ ಮೀರುವ ಶಕ್ತಿ ಕಲೆಗೆ ಇರುತ್ತದೆ ಅಲ್ಲವೇ?

ಇಂದೋರ್ ಗುಲಾಬ ಜಾಮೂನ್, ಸುಂದರ ಕಾರುಗಳು, ಶೇರ್ಲಾಕ್ ಹೋಂಸ್‍ನ ಸಾಹಸಗಳು, ಜೇಮ್ಸ್ ಬಾಂಡ್ ಸಿನಿಮಾಗಳು ಎಂದರೆ ಆಕೆಗೆ ಇಷ್ಟ. 200 ರೂಪಾಯಿ ಸಂಭಾವನೆ ಪಡೆಯುತ್ತಿದ್ದಾಗ ಹಿಲ್‍ಮನ್ ಕಾರಿನ ಕನಸು ಕಾಣುತ್ತಿದ್ದ ಲತಾಗೆ ಆ ಕಾರು ಕೊಳ್ಳುವುದು ಸಾಧ್ಯ ಆದದ್ದು ಸಂಭಾವನೆ ಎರಡು ಸಾವಿರ ರೂಪಾಯಿಗೆ ಏರಿದಾಗ.
ಅವರ ಖ್ಯಾತಿ, ಪ್ರತಿಭೆ, ಪುರಸ್ಕಾರ ಎಲ್ಲವೂ ಒತ್ತಟ್ಟಿಗಿಟ್ಟು ನೋಡಿದಾಗ ಒಂದು ಸಂಗತಿ ಗೋಚರ. ಅಂದಿನ ಬಹುಪಾಲು ಜನರಿಗೆ ನಿತ್ಯದ ಅನ್ನಕ್ಕೆ ದಾರಿ ಆಗಿದ್ದು ಅವರ ಕಲೆ.  ತನ್ನ ಕನಸುಗಳನ್ನು, ಆಸೆಗಳನ್ನು ಅದುಮಿಟ್ಟು ನಿತ್ಯ ಮನೆಯಲ್ಲಿ ಒಲೆ ಉರಿಯಲು ಎಲ್ಲ ನೋವು, ಸಂಕಟ, ಅವಮಾನ ಸಹಿಸಿಕೊಂಡು ದುಡಿಯುವುದು ಲತಾಗೆ ಅನಿವಾರ್ಯ ಆಗಿತ್ತು. ಇದು ಆ ಕಾಲಕ್ಕೆ ಸಿನೆಮಾ, ಸಂಗೀತ, ನಾಟಕ ಕಲೆಗಳಲ್ಲಿ ಜೀವನ ಕಾಣಲು ಯತ್ನಿಸುತ್ತಿದ್ದ ಎಲ್ಲರ ಬದುಕಿನ ಚಿತ್ರವಾಗಿತ್ತು. ಅನ್ನದ ಅನಿವಾರ್ಯತೆ ಜೊತೆಗೇ ಅದನ್ನು ಕೊಡಮಾಡುವ ಕಲೆಯನ್ನು ಗೌರವಿಸಬೇಕು, ಆ ಬಗ್ಗೆ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳಬೇಕು ಎಂದೇ ಆಗಿನವರ ಮನದಾಳದ ಭಾವ ಆಗಿತ್ತು.

ಎರಡು ವರ್ಷಗಳ ಹಿಂದೆ ಲತಾ ಧ್ವನಿ ಮುದ್ರಿಸಿದ ಮರಾಠಿ ಹಾಡೇ ಅವರ ಕೊನೆಯ ಗೀತೆ. ‘ಅತಾ ವಿಶವ್ಯಾಚ ಕ್ಷಣ’ ಎಂದು ಆರಂಭವಾಗುವ ಆ ಸಾಲಿನ ಅರ್ಥ ‘ಇದು ವಿಶ್ರಾಂತಿಗೆ ಹೋಗುವ ಕ್ಷಣ’. ಐದು ನಿಮಿಷ 19 ಸೆಕೆಂಡ್‍ಗಳ ಆ ಮರಾಠಿ ಹಾಡಿನ ನಂತರ ಅವರೆಂದೂ ಹಾಡಲಿಲ್ಲ. ಆರೇಳು ದಶಕಗಳ ಕಾಲ ಹಾಡುತ್ತ ಹಾಡುತ್ತ ಅಮರತ್ವ ಪಡೆದ ಜೀವ ಇಂದು ಹಲವರನ್ನು ಗಾಢವಾಗಿ ಅಲುಗಿಸಿದೆ. ನಮ್ಮ ಈ ಕಾಲ ಘಟ್ಟದಲ್ಲಿ ಕೆಡುಕು ಮೇಲುಗೈ ಪಡೆಯುತ್ತ ಬಿಕ್ಕಟ್ಟು, ಅಶಾಂತಿ ಹೆಚ್ಚುತ್ತಾ ಇರುವ ಈ ಸನ್ನಿವೇಶದಲ್ಲಿ ಧೀಮಂತರ ಸ್ಮರಣೆ ಕೂಡ ಅಳಿಸಿ, ಆ ಚೇತನಗಳಿಗೆ ಅಪಮಾನ ಮಾಡುವ ವಿಕೃತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಲತಾ ಅವರು ಚಿರವಾಗಿ ಉಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ, ವಸಂತ ಮುಗಿದು ಕೋಗಿಲೆಯ ದನಿ ಮರೆಯಾದರೂ ಅದರ ನೆನಪು ಮಾತ್ರ ಮಾಸದ ಹಾಗೆ ಅವರು ತಮ್ಮ ದನಿಯನ್ನು ನಮಗೆ ಕೊಟ್ಟು ಹೋಗಿದ್ದಾರೆ.

ಮಹಮ್ಮದ ರಫಿ 1980 ರಲ್ಲಿ ನಿಧನರಾದಾಗ ಆ ಸಮಯದಲ್ಲಿ ಲತಾ ಒಂದು ಮಾತು ಹೇಳಿದ್ದರು ; “ಗಾಯಕ ಕುಂದನ್‍ಲಾಲ ಸೈಗಲ್ ತೀರಿಕೊಂಡಾಗ ಭಾರತೀಯ ಸಂಗೀತದ ಒಂದು ಯುಗದ ಅಂತ್ಯವಾಗಿತ್ತು. ಮಹಮ್ಮದ ರಫಿ ಅವರ ನಿಧನದಿಂದ ಭಾರತೀಯ ಸಂಗೀತ ಜಗತ್ತಿನ ಎರಡನೇ ಯುಗದ ಅಂತ್ಯವಾಗಿದೆ”. ಈಗ ಲತಾ ಅವರ ಅಗಲುವಿಕೆಯಿಂದ ಭಾರತೀಯ ಸಂಗೀತದ ಕೊನೆಯ ಯುಗದ ಅಂತ್ಯವಾದಂತಾಗಿದೆ.
-ಎ.ಬಿ.ಧಾರವಾಡಕರ

You might also like
Leave a comment