This is the title of the web page

ಅಕ್ಕಿ ಮಾಯ; ಪೋಲೀಸರ ವಿರುದ್ಧವೇ ಎಫ್ಐಆರ್

ಮಂಡ್ಯ, 13- ಮಂಡ್ಯದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಶ್ರೀಲಕ್ಷ್ಮೀದೇವಿ ರೈಸ್ ಮಿಲ್ ನಲ್ಲಿ ಪಡಿತರ ಅಕ್ಕಿ ತಂದು ಪಾಲಿಶ್ ಮಾಡಿ, ವಿದೇಶಿ ಹೆಸರಿನ ನಕಲಿ ಬ್ರ್ಯಾಂಡ್ ಚೀಲಗಳಿಗೆ ತುಂಬಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಮತ್ತು ವಿವಿಧ ದೇಶಗಳಿಗೂ ರಫ್ತು ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆಹಾರ ಇಲಾಖೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ ಮಾಡಿ, ಪಂಜಾಬ್ ರಾಜ್ಯದಿಂದ ತಂದಿದ್ದ ಸಾವಿರಾರು ಕ್ವಿಂಟಾಲ್ ಅಕ್ಕಿ ಜಫ್ತು ಮಾಡಿದ್ದರು.

ದಾಳಿ ವೇಳೆ ಅಕ್ಕಿ ತುಂಬಿದ್ದ ಕ್ಯಾಂಟರ್ ಹಾಗೂ ಮಿಲ್ ನ ಗೋಡೌನ್ ನಲ್ಲಿ 500ಕ್ಕೂ ಹೆಚ್ಚು ಅಕ್ಕಿ ಮೂಟೆಗಳು ಪತ್ತೆಯಾಗಿದ್ದವು. ಪೊಲೀಸರು ಕ್ಯಾಂಟರ್ ವಶಕ್ಕೆ ಪಡೆದು, ರೈಸ್ ಮಿಲ್ ಗೆ ಬೀಗ ಹಾಕಿ ಸೀಜ್ ಮಾಡಿದ್ದರು. ಆದರೆ ಬೆಳಿಗ್ಗೆ ಮತ್ತೆ ಪರಿಶೀಲನೆಗೆ ಹೋದಾಗ ಗೋಡೌನ್ ನಲ್ಲಿದ್ದ ಅಕ್ಕಿ ನಾಪತ್ತೆಯಾಗಿದೆ.

ರಾತ್ರಿ ವಶಪಡಿಸಿಕೊಂಡಿದ್ದ ಅಕ್ಕಿ ಕಳುವಾಗಿರುವ ಹಿಂದೆ ಪೊಲೀಸರ ಕೈವಾಡದ ಶಂಕೆ ವ್ಯಕ್ತವಾಗಿದ್ದು ರೈಸ್ ಮಿಲ್ ಮಾಲೀಕರು, ಎರಡು ಕ್ಯಾಂಟರ್ ಗಳ ಮಾಲೀಕರು ಹಾಗೂ ಮಂಡ್ಯ ಪೂರ್ವ ಠಾಣೆ ಪೊಲೀಸರನ್ನೇ ಆರೋಪಿಗಳನ್ನಾಗಿ ಮಾಡಿ ಮಂಡ್ಯ ಆಹಾರ ಇಲಾಖೆ ಅಧಿಕಾರಿ ಸೌಮ್ಯ ಅವರು ದೂರು ನೀಡಿದ್ದಾರೆ.

ಸೌಮ್ಯ ಅವರ ದೂರು ಆಧರಿಸಿ, ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು, ಪೊಲೀಸರನ್ನು 4ನೇ ಆರೋಪಿಯನ್ನಾಗಿ ಮಾಡಲಾಗಿದೆ.

ಸೀಜ್ ಮಾಡಿದ್ದ ಅಕ್ಕಿ ರಾತ್ರಿ ಕಳ್ಳ ಸಾಗಾಣಿಕೆ ಆಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಅಕ್ರಮ ದಂಧೆ ಜಿಲ್ಲೆಯಲ್ಲಿ ಅಡೆತಡೆ ಇಲ್ಲದೇ ನಿರಂತರ ನಡೆಯುತ್ತಿದೆ. “ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಆಗ್ರಹಿಸಿದ್ದಾರೆ.

ಬಡವರ ಸಿಗಬೇಕಿದ್ದ ಅಕ್ಕಿಯನ್ನು ದಂಧೆಕೋರರು ಪಾಲಿಶ್ ಮಾಡಿ ವಿವಿಧ ಬ್ಯ್ರಾಂಡ್ ಲೇಬಲ್ ಹಚ್ಚಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಎರಡನೇ ಪ್ರಕರಣ ಕಳೆದ 20 ದಿನದಲ್ಲಿ ಬೆಳಕಿಗೆ ಬಂದಿದೆ. ಕಳೆದ ನವೆಂಬರ್ 20ರ ರಾತ್ರಿ ಮಂಡ್ಯದ ಬಾಲಾಜಿ ರೈಸ್ ಮಿಲ್ ಮೇಲೆ ದಾಳಿ ಮಾಡಿದ್ದ ಮಂಡ್ಯ ತಹಸೀಲ್ದಾರ ಚಂದ್ರಶೇಖರ ನೇತೃತ್ವದ ತಂಡ ಒಂದು ಸಾವಿರ ಕ್ವಿಂಟಲ್ ಆಂಧ್ರ ಪ್ರದೇಶದ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದರು.

ಇದೀಗ ಮತ್ತೊಂದು ರೈಸ್ ಮಿಲ್ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ಪಂಜಾಬ್ ರಾಜ್ಯದ ಪಡಿತರ ಅಕ್ಕಿ ವಶಕ್ಕೆ ಪಡೆದಿದ್ದರಾದರೂ ಅದು ಮಾಯವಾಗಿದೆ.

You might also like
Leave a comment