This is the title of the web page

ಆಪ್ ನ ಮೊದಲ ಜನಪರ ನಿರ್ಧಾರ; ರಾಜಕಾರಣಿಗಳ ಭದ್ರತೆ ವಾಪಸ್

ಚಂಡಿಗಡ, 13-  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ನೇತೃತ್ವದ “ಆಮ್ ಆದ್ಮಿ ಪಾರ್ಟಿ” ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗಳನ್ನು ಧೂಳೀಪಟ ಮಾಡಿ ಗದ್ದುಗೆ ಏರಲಿದೆ. ಇನ್ನೂ ಸರಕಾರ ರಚಿಸದ “ಆಪ್” ನಿವೃತ್ತ ರಾಜಕಾರಣಿಗಳಿಗೆ ಕೊಟ್ಟಿರುವ ಭಾರಿ ಪೊಲೀಸ್ ಭದ್ರತೆಯನ್ನು ಹಿಂದಕ್ಕೆ ಪಡೆಯುವದಾಗಿ ಹೇಳಿದೆ.

ಮಾರ್ಚ 16 ರಂದು ಪಂಜಾಬ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಭಗವಂತ ಮಾನ್ ಅವರು, ರಾಜ್ಯದಲ್ಲಿ ಅನೇಕ ವಿವಿಐಪಿಗಳು ಸೇರಿದಂತೆ 122 ಮಾಜಿ ಸಂಸದರು ಮತ್ತು ಶಾಸಕರ ಭದ್ರತೆಯನ್ನು ಹಿಂಪಡೆಯಲು ಆದೇಶ ಹೊರಡಿಸಿದ್ದಾರೆ.

ಮಾನ್ ಅವರು ಶನಿವಾರ ಹೊರಡಿಸಿರುವ ಆದೇಶದ ಪ್ರಕಾರ, ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಬಾದಲ್ ಕುಟುಂಬಕ್ಕೆ ಭದ್ರತೆ ನೀಡಲಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಕ್ಯಾಪ್ಟನ್ ಅಮರಿಂದರ ಸಿಂಗ್, ಚರಣ‌ಜಿತ ಸಿಂಗ್ ಚನ್ನಿ ಮತ್ತು ಉಳಿದೆಲ್ಲ ಕಾಂಗ್ರೆಸ್ ಮತ್ತು ಅಕಾಲಿದಳದ ನಾಯಕರಿಗೆ ನಾಯಕರಿಗೆ ಭದ್ರೆ ತೆಗೆಯಲು ಸೂಚನೆ ನೀಡಲಾಗಿದೆ.

ಒಂದೆಡೆ ಪೊಲೀಸ್ ಠಾಣೆಗಳು ಪೊಲೀಸರಿಲ್ಲದೇ ಖಾಲಿ ಬಿದ್ದಿದ್ದರೆ, ಮತ್ತೊಂದೆಡೆ ನಾಯಕರ ಮನೆ ಮುಂದೆ ಟೆಂಟ್ ಹಾಕಿ ಭದ್ರತೆ ಕಲ್ಪಿಸಲಾಗಿದೆ ಎಂದು ಭಗವಂತ ಮಾನ್ ಟೀಕಿಸಿದರು.

ಈ ಮಧ್ಯೆ ನಿಯೋಜಿತ ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ್ ಅವರು ಶನಿವಾರ ರಾಜ್ಯಪಾಲ ಬನ್ವರಿಲಾಲ ಪುರೋಹಿತ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.

ನಾನು ರಾಜ್ಯಪಾಲರನ್ನು ಭೇಟಿ ಮಾಡಿ, ನಮ್ಮ ಶಾಸಕರ ಬೆಂಬಲದ ಪತ್ರವನ್ನು ಹಸ್ತಾಂತರಿಸಿದ್ದೇನೆ ಮತ್ತು ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ನಾವು ಎಲ್ಲಿ ಪ್ರಮಾಣ ವಚನ ಸಮಾರಂಭವನ್ನು ನಡೆಸಬೇಕೆಂದು ಬಯಸುತ್ತೇವೆ ಎಂಬುದನ್ನು ಅವರಿಗೆ ಹೇಳಲು ಅವರು ನನಗೆ ಸೂಚಿಸಿದ್ದಾರೆ. ಮಾರ್ಚ 16ರಂದು ಮಧ್ಯಾಹ್ನ 12.30ಕ್ಕೆ ಭಗತ ಸಿಂಗ್ ಅವರ ಗ್ರಾಮವಾದ ಖಟಕರ್ ಕಲಾನ್ ನಲ್ಲಿ ಪ್ರಮಾಣ ವಚನ ನಡೆಯಲಿದೆ ಎಂದು ಹೇಳಿದರು.

117 ಸದಸ್ಯ ಬಲದ ಪಂಜಾಬ ವಿಧಾನಸಭೆಯಲ್ಲಿ ಎಎಪಿ 92 ಸ್ಥಾನಗಳನ್ನು ಗೆದ್ದಿದೆ. ನಿರ್ಗಮಿತ ಮುಖ್ಯಮಂತ್ರಿ ಚರಂಜಿತ ಸಿಂಗ್ ಚನ್ನಿ, ಎಸ್‌ಎಡಿ ಪಿತಾಮಹ ಪ್ರಕಾಶ ಸಿಂಗ್ ಬಾದಲ್ ಮತ್ತು ಮಾಜಿ ಮುಖ್ಯಮಂತ್ರಿ ಅಮರಿಂದರ ಸಿಂಗ್ ಸೇರಿದಂತೆ ಹಲವಾರು ದಿಗ್ಗಜರು ಸೋತಿದ್ದಾರೆ.

You might also like
Leave a comment