This is the title of the web page

27 ವರ್ಷ ಸೂರ್ಯನ ಕಿರಣಗಳನ್ನೇ ಆಹಾರ ಮಾಡಿಕೊಂಡಿದ್ದ ಮಹಾನ್ ಸಾಧಕ ವಿಧಿವಶ

ತಿರುವನಂತಪುರ, 14- “ಸೋಲಾರ್ ಹೀಲಿಂಗ ಟೆಕ್ನಿಕ್ ” ಪ್ರತಿಪಾದಕ ಹೀರಾ ರತನ್ ಮಾಣಿಕ ಅವರು ತಮ್ಮ 85ನೇ ವಯಸ್ಸಿನಲ್ಲಿ ಮೊನ್ನೆ ಶನಿವಾರ ಇಹಲೋಕ ಯಾತ್ರೆ ಮುಗಿಸಿದರು. ಅವರು ತಮ್ಮ ಬದುಕಿನ ಕೊನೆಯ 27 ವರುಷಗಳಲ್ಲಿ ಸೂರ್ಯನ ಕಿರಣಗಳನ್ನು ಮಾತ್ರವೇ ಆಹಾರ ಮಾಡಿಕೊಂಡಿದ್ದರು.

ಮಾಣಿಕ ಅವರು ತಮ್ಮ ದೇಹವನ್ನು ಪ್ರಯೋಗಾಲಯವಾಗಿ ಪರಿವರ್ತಿಸಿ ಮಾನವರು ಕೇವಲ ನೀರನ್ನು ಮಾತ್ರ ಸೇವಿಸಿ ಮತ್ತು ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ಜಗತ್ತಿಗೆ ಯಶಸ್ವಿಯಾಗಿ ಸಾಬೀತುಪಡಿಸಿದ್ದರು.

ಗುಜರಾತ್‌ ಕಚ್‌ ನಲ್ಲಿ ಜನಿಸಿದ್ದ ಮಾಣಿಕ ಅವರು ತಮ್ಮ ಜೀವನದ ಹೆಚ್ಚು ಅವಧಿ ಕೇರಳದ ಕೋಝಿಕೋಡ್‌ನಲ್ಲಿ ಕಳೆದರು. ಕುಟುಂಬದ ಹಡಗು ವ್ಯಾಪಾರದಲ್ಲಿ ಅವರು ತೊಡಗಿಸಿಕೊಂಡಿದ್ದರು. 1962ರಲ್ಲಿ ಪಾಂಡಿಚೇರಿಯ ಅರಬಿಂದೋ ಆಶ್ರಮಕ್ಕೆ ಭೇಟಿ ನೀಡಿದಾಗ ಸೌರ ಚಿಕಿತ್ಸೆ ಬಗ್ಗೆ ತಿಳಿದುಕೊಂಡಿದ್ದರು. ನಂತರ ಸ್ವಆಸಕ್ತಿಯಿಂದ ಸೂರ್ಯನ ಧ್ಯಾನ ಮಾಡಲು ಪ್ರಾರಂಭಿಸಿದ್ದರು. ಈ ವಿಧಾನವು ನಂತರ ‘ಎಚ್.ಆರ್.ಎಂ. ವಿದ್ಯಮಾನ’ ಎಂದು ಕರೆಯಲ್ಪಟ್ಟಿತು. ಸೂರ್ಯೋದಯದ ಒಂದು ಗಂಟೆಯೊಳಗೆ ಅಥವಾ ಸೂರ್ಯಾಸ್ತದ ಒಂದು ಗಂಟೆಯೊಳಗೆ ಬರಿಗಣ್ಣಿನಿಂದ ಸೂರ್ಯನನ್ನು ನೋಡುವುದನ್ನು ಒಳಗೊಂಡಿರುತ್ತದೆ.

ಆರಂಭದಲ್ಲಿ ಇದು ಕಠಿಣವಾಗಿದ್ದರೂ ಏಳು ತಿಂಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡಿದರೆ ಅರ್ಧ ಗಂಟೆ ಸೂರ್ಯನನ್ನು ನೇರವಾಗಿ ನೋಡಬಹುದು ಎಂದು ಮಾಣಿಕ ಅವರು ಸಾಬೀತುಪಡಿಸಿದರು. ಒಂಭತ್ತನೇ ತಿಂಗಳ ಹೊತ್ತಿಗೆ ದೇಹವು ಸೌರಶಕ್ತಿಯ ಸಂಗ್ರಹವಾಗುತ್ತದೆ ಮತ್ತು ಆಹಾರವಿಲ್ಲದೇ ಬದುಕಬಹುದು ಎಂದು ಅವರು ಪ್ರತಿಪಾದಿಸಿದರು.

1995ರಿಂದ ಆಹಾರ ಸೇವನೆಯಿಲ್ಲದೇ ಬದುಕಿದ್ದ ಕುತೂಹಲದ ವ್ಯಕ್ತಿ ಹೀರಾ ರತನ್ ಮಾಣಿಕ ಅವರು.
“ದೇಹವು ಸೂರ್ಯನಿಂದ ಶಕ್ತಿಯನ್ನು ಪಡೆದುಕೊಂಡಾಗ ಅದು ಅದು ಚಿಪ್ ಆಗಿ ಕಾರ್ಯನಿರ್ವಹಿಸುತ್ತದೆ. ಸೂರ್ಯನಿಂದ ನೀವು ಪಡೆಯುವ ಶಕ್ತಿಯೊಂದಿಗೆ ಆಹಾರವಿಲ್ಲದೇ ನೀರನ್ನು ಮಾತ್ರ ಕುಡಿಯುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ” ಎಂದು ಅವರು ಹೇಳುತ್ತಿದ್ದರು.

ಮಾಣಿಕ ಅವರು 1992 ರಿಂದ ಪೂರ್ಣ ಪ್ರಮಾಣದ ಸೂರ್ಯನ ಆರಾಧಕರಾಗಿದ್ದರು. ಸೂರ್ಯೋದಯದ ಒಂದು ಗಂಟೆಯ ನಂತರ ಮತ್ತು ಸೂರ್ಯಾಸ್ತದ ಒಂದು ಗಂಟೆಯ ಮೊದಲು ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅವರ ಆರಾಧನಾ ಕ್ರಮವಾಗಿತ್ತು. ಆರಂಭದಲ್ಲಿ ಸೂರ್ಯನನ್ನು ನೋಡುವುದು ಕೆಲವು ಸೆಕೆಂಡುಗಳ ಕಾಲ ತೆಗೆದುಕೊಳ್ಳುತ್ತದೆ. ಆದರೆ ಏಳು ತಿಂಗಳೊಳಗೆ ಅದನ್ನು ಅರ್ಧ ಘಂಟೆಯವರೆಗೆ ಹೆಚ್ಚಿಸಬಹುದು. ಒಂಭತ್ತು ತಿಂಗಳೊಳಗೆ ದೇಹವು ಶಕ್ತಿಯ ಉಗ್ರಾಣವಾಗುತ್ತದೆ. ಇದರಿಂದ ಹಸಿವು ಕಳೆದು ಆಹಾರ ತ್ಯಜಿಸಬಹುದು ಎಂದು ಅವರು ಹೇಳಿದ್ದರು.

ಜೂನ್ 1995 ರಲ್ಲಿ ಇವರು 213 ದಿನಗಳ ಕಾಲ ಉಪವಾಸ ಮಾಡಿದ್ದರು. ಈ ಪ್ರಯೋಗವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮತ್ತು ಬಾಯಾರಿಕೆಯಾದಾಗ ನೀರು ಕುಡಿಯುವುದನ್ನು ಒಳಗೊಂಡಿತ್ತು. ನಂತರ 2000 ಜನವರಿಯಿಂದ 2001 ಫೆಬ್ರವರಿ 15ರವರೆಗೆ ಅಂದರೆ ಸತತ 411 ದಿನಗಳ ಕಾಲ ಉಪವಾಸ ಮಾಡಿದ್ದರು.

ಗಿನ್ನಿಸ್ ದಾಖಲೆ
———–
1995 ರಲ್ಲಿ ಕೋಝಿಕ್ಕೋಡ್‌ನಲ್ಲಿ ಅವರ 211-ದಿನಗಳ ಉಪವಾಸವು ಮಾಣಿಕ ಅವರಿಗೆ ಖ್ಯಾತಿಗೆ ತಂದಿತು. ನಂತರ ಅವರು 2000 ರಲ್ಲಿ ಅಹಮದಾಬಾದ್‌ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. 411 ದಿನಗಳ ಉಪವಾಸವನ್ನು ಕೈಗೊಂಡರು, ಇದು ಅವರನ್ನು ಜಗತ್ತಿನಾದ್ಯಂತ ಪ್ರಸಿದ್ಧರನ್ನಾಗಿ ಮಾಡಿತು.

ಅವರು ಅಮೆರಿಕದಲ್ಲಿ ಪೆನ್ಸಿಲ್ವೇನಿಯಾ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನಡೆಸಿದರು. ಗಗನಯಾತ್ರಿಗಳು ಸೌರ ಹೀಲಿಂಗ್ ತಂತ್ರವನ್ನು ಅಭ್ಯಾಸ ಮಾಡಬಹುದು ಮತ್ತು ಹೆಚ್ಚು ಆಹಾರವಿಲ್ಲದೇ ಬಾಹ್ಯಾಕಾಶದಲ್ಲಿ ಬದುಕಬಹುದು ಎಂದು ಅವರು ಹೇಳಿದ್ದಾರೆ.

ಮಾಣಿಕ ಅವರು 80 ವರ್ಷ ವಯಸ್ಸಿನವರೆಗೆ ಸೌರ ಚಿಕಿತ್ಸೆ ಅಭ್ಯಾಸ ಮಾಡಿದರು. ಅವರ ಪತ್ನಿ ವಿಮಲಾ ಒಂದು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಮಾಣಿಕ ಅವರು ನಿಧನರಾದಾಗ ಕೋಝಿಕ್ಕೋಡ್‌ನ ಆಸ್ಪತ್ರೆಯಲ್ಲಿ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.

You might also like
Leave a comment