This is the title of the web page

ಮಗ ಶಾಸಕನಾದರೂ ಕಸ ಗುಡಿಸುವ ಕೆಲಸ ಬಿಡುವುದಿಲ್ಲ ಎಂದ ತಾಯಿ

ಬರ್ನಾಲಾ (ಪಂಜಾಬ), 13- ಪಂಜಾಬ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಚರಂಜಿತ ಸಿಂಗ್ ಚನ್ನಿ ಅವರನ್ನು ಸೋಲಿಸಿದ ಆಮ್ ಆದ್ಮಿ ಪಕ್ಷದ ಶಾಸಕ ಲಾಭ‌ ಸಿಂಗ್ ಉಗೋಕೆ ಅವರ ತಾಯಿ ಬಲದೇವ ಕೌರ್ ಅವರು ತಮ್ಮ ಮಗ ಗೆದ್ದ ನಂತರವೂ ಶನಿವಾರ ಸರ್ಕಾರಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ಮುಂದುವರೆಸಿದ್ದಾರೆ.

ಭಾದೌರ್ ಕ್ಷೇತ್ರದಿಂದ ಚನ್ನಿ ಅವರನ್ನು 37,550 ಮತಗಳ ಅಂತರದಿಂದ ಸೋಲಿಸಿದ ಲಾಭ‌ ಸಿಂಗ್‌ ಉಗೋಕೆ ಅವರು ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

“ನನ್ನ ಮಗನ ಸ್ಥಾನವನ್ನು ಲೆಕ್ಕಿಸದೇ ನಾನು ಶಾಲೆಯಲ್ಲಿ ನನ್ನ ಕರ್ತವ್ಯವನ್ನು ಮುಂದುವರಿಸುತ್ತೇನೆ” ಎಂದು ಬಲದೇವ ಕೌರ್ ಹೇಳಿದ್ದಾರೆ.

ತಮ್ಮ ಪುತ್ರನ ಪಕ್ಷದ ಚಿಹ್ನೆ ಕೂಡ ತಾವು ಪ್ರತಿದಿನ ಕಸಗುಡಿಸಲು ಹಿಡಿಯುವ ಪೊರಕೆಯಾಗಿದೆ. ಪೊರಕೆ ಗುರುತಿನ ಎಎಪಿಯ ಅಭ್ಯರ್ಥಿಯಾಗಿ ತನ್ನ ಪುತ್ರನ ಗೆಲುವಿನಿಂದ ಸಂತೋಷಗೊಂಡ ಕೌರ್, ‘ಝಾಡು ನನ್ನ ಜೀವನದ ಪ್ರಮುಖ ಭಾಗವಾಗಿದೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ್ದರೂ ನನ್ನ ಮಗ ಗೆಲ್ಲುತ್ತಾನೆ ಎಂದು ವಿಶ್ವಾಸ ಹೊಂದಿದ್ದೆವು ಎಂದು ಅವರು ಹೇಳಿದರು.

ಲಾಭ್ ಸಿಂಗ್ ಅವರ ತಾಯಿ ಬಹಳ ಸಮಯದಿಂದ ಈ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರೂ ಇದೆ ಶಾಲೆಯಲ್ಲೇ ಓದಿದ್ದಾರೆ. ಬಲದೇವ್ ಕೌರ್ ಅವರು ಶಾಲೆಯಲ್ಲಿ ಕೆಲಸ ಮುಂದುವರೆಸಲು ಬಯಸುತ್ತಾರೆ ಎಂದು ಶಾಲೆಯ ಪ್ರಾಚಾರ್ಯ ಅಮೃತ ಪಾಲ್ ಕೌರ್ ಹೇಳಿದರು.

ಅಲ್ಲದೇ ಕೂಲಿ ಕೆಲಸ ಮಾಡುತ್ತಿರುವ ಲಾಭ‌ ಸಿಂಗ್ ಅವರ ತಂದೆ ದರ್ಶನ ಸಿಂಗ್ ಕುಟುಂಬವು ಮೊದಲಿನಂತೆಯೇ ಬದುಕುತ್ತದೆ ಎಂದು ಹೇಳಿದರು.

“ನನ್ನ ಮಗ ಕುಟುಂಬದ ಬದಲು ಜನರ ಕಲ್ಯಾಣದತ್ತ ಗಮನ ಹರಿಸಬೇಕು. ಜನರು ಅವನನ್ನು ಆಯ್ಕೆ ಮಾಡಿದರು. ಆತ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕೆಂದು ನಾವು ಬಯಸುತ್ತೇವೆ. ನಾವು ಮೊದಲಿನಂತೆಯೇ ಬದುಕುತ್ತೇವೆ” ಎಂದು ಹೊಸ ಶಾಸಕರ ತಂದೆ ದರ್ಶನ ಸಿಂಗ್ ಹೇಳಿದ್ದಾರೆ.

ಲಾಭ ಸಿಂಗ್ ಉಗೋಕೆ 2013 ರಲ್ಲಿ ಎಎಪಿಗೆ ಸೇರಿದರು ಮತ್ತು ಪಕ್ಷದ ಶ್ರೇಣಿಯಲ್ಲಿ ಶೀಘ್ರವಾಗಿ ಏರಿದರು. ಅವರು 2017 ರಲ್ಲೂ ಭಾದೌರ್ ಕ್ಷೇತ್ರದಿಂದ ಎಎಪಿ ಟಿಕೆಟ್ ಕೇಳಿದ್ದರು. ಅವರ ಗೆಲುವಿನಿಂದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಉಗೋಕೆ ಎಂಎಲ್ಎ ಆಗಿದ್ದಾರೆ ಎನ್ನುವುದನ್ನು ಇಂದಿಗೂ ನಂಬಲಾಗುತ್ತಿಲ್ಲ ಎಂದರು.

ಹಗಲು ರಾತ್ರಿ ಪಕ್ಷಕ್ಕಾಗಿ ದುಡಿಯುತ್ತಿದ್ದರು. ಅವರು ಪಕ್ಷದಿಂದ ಟಿಕೆಟ್ ಪಡೆದು ಶಾಸಕರಾಗುತ್ತಾರೆ ಎಂದು ನಾವು ಅಂದುಕೊಂಡಿರಲಿಲ್ಲ. ನಮಗೆ ಸಂತೋಷವಾಗಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಪಂಜಾಬ್ ಚುನಾವಣೆಯಲ್ಲಿ ಎಎಪಿ ಪ್ರಚಂಡ ವಿಜಯವನ್ನು ಗಳಿಸಿತು. 117 ಸದಸ್ಯ ಬಲದ ಪಂಜಾಬ ವಿಧಾನಸಭೆಯಲ್ಲಿ 92 ಸ್ಥಾನಗಳನ್ನು ಗೆದ್ದಿದೆ. ಹಿಂದೆ ಸರಕಾರ ನಡೆಸಿದ್ದ ಕಾಂಗ್ರೆಸ್ ಕೇವಲ 18 ಸ್ಥಾನಗಳನ್ನು ಗೆದ್ದಿದೆ.

You might also like
Leave a comment