ಬೆಳಗಾವಿ : ಗೋವಾದ ಮಾಜಿ ಶಾಸಕ ಲಾವೂ ಮಾಮಲೆದಾರ ಅವರನ್ನು ಕ್ಷುಲ್ಲಕ ಕಾರಣಕ್ಕೆ ಬೆಳಗಾವಿಯ ಆಟೋ ಚಾಲಕನೊಬ್ಬ ಹೊಡೆದು ಕೊಲೆ ಮಾಡಿದ ಘಟನೆ ಬೆಳಗಾವಿ ನಗರದ ಖಡೇ ಬಜಾರ ಲಾಡ್ಜವೊಂದರ ಅಂಗಳದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಲಾವೂ ಅವರು ತಮ್ಮ ಕಾರಿನಲ್ಲಿ ತಾವು ಮೊದಲೇ ನಿಗದಿ ಪಡಿಸಿದ್ದ ಹೊಟೇಲಗೆ ಕಾರಿನಲ್ಲಿ ಬರುತ್ತಿದ್ದರು. ಬರುವಾಗ ಬೆಳಗಾವಿ ಮಾರುಕಟ್ಟೆ ಪ್ರದೇಶದಲ್ಲಿ ಅವರ ಕಾರು ಆಟೋ ಒಂದಕ್ಕೆ ಸ್ವಲ್ಪ ತಾಗುತ್ತೆ. ಇದಕ್ಕೆ ಲಾವೂ ಅವರೊಂದಿಗೆ ಜಗಳವಾಡಿದ ಆಟೋ ಚಾಲಕ ಅವರಿಂದ ರಿಕ್ಷಾ ರಿಪೇರಿಗೆ ದೊಡ್ಡ ಮೊತ್ತದ ಹಣ ಕೇಳಿದ್ದಾನೆ. ಅದಕ್ಕೆ ಲಾವೂ ಅವರು ಒಪ್ಪದೇ ತಾವು ವಸತಿ ಮಾಡಬೇಕಿದ್ದ ಹೋಟೆಲಗೆ ಬಂದಿದ್ದಾರೆ.
ಅವರನ್ನು ಹಿಂಬಾಲಿಸಿಕೊಂಡು ಬಂದ ರಿಕ್ಷಾ ಚಾಲಕನು ಮಾಜಿ ಶಾಸಕರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಅವರ ಮೇಲೆ ಹಲ್ಲೆ ನಡೆಸಿ ಮುಖದ ಮೇಲೆ ಕೈಯಿಂದ ಗುದ್ದಿದ್ದಾನೆ. ಆಗ ಲಾವೂ ಕುಸಿದು ಬಿದ್ದಿದ್ದಾರೆ. ಮಾಹಿತಿ ದೊರೆತ ಮೇಲೆ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಅವರನ್ನು ಸಿವಿಲ್ ಆಸ್ಪತ್ರೆಗೆ ತೆಗೆದುಕೊಂಡು ಹೋದರಾದರೂ ಅವರನ್ನು ಪರೀಕ್ಷಿಸಿದ್ದ ವೈದ್ಯರು ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಾರ್ಕೆಟ್ ಪೊಲೀಸರು ಆರೋಪಿ ಆಟೋ ಚಾಲಕನನ್ನು ವಶಕ್ಕೆ ಪಡೆದು ಸ್ಥಳ ಮಹಜರು ಪಡಿಸಿದ್ದಾರೆ.
ಸಮದರ್ಶಿಯೊಂದಿಗೆ ಮಾತಮಾಡಿದ ಡಿಸಿಪಿ ರೋಹನ್ ಜಗದೀಶ ಅವರು, ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ವಯ ವಿವರಣೆ ನೀಡಿದರು. ಆಟೋ ಡ್ರೈವರ್ ಶಕೀಲ ಸನದಿ ಎಂಬಾತ ಹೋಟೆಲ್ ಅಂಗಳದಲ್ಲಿ ಲಾವೋ ಅವರ ಬಲಗನ್ನೆಗೆ ಹೊಡೆಯುತ್ತಾನೆ. ನಂತರ ಹೋಟೆಲ್ ರೂಮನತ್ತ ತೆರಳಿದ ಅವರು ರಿಸೆಪ್ಶನ್ ಕೌಂಟರ್ ಬಳಿ ಬರುತ್ತಿದ್ದಂತೆ ಕುಸಿದು ಬಿದ್ದರು. ಬಹುಶ: ಅವರು ಅಘಾತದಿಂದ ಸ್ಥಳದಲ್ಲೇ ಮೃತರಾಗಿರಬಹುದು ಎಂದು ತಿಳಿಸಿದರು.
ಲಾವೂ ಗೋವಾದ ಮಹಾರಾಷ್ಟ್ರವಾದಿ ಗೋಮಾಂತಕ ಕಾಂಗ್ರೆಸ್ ಪಕ್ಷವನ್ನು 2012ರಲ್ಲಿ ಪೊಂಡಾ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. ಆದರೆ 2017ರ ಚುನಾವಣೆಯಲ್ಲಿ ಕಾಂಗ್ರೆಸನ ರವಿ ನಾಯ್ಕ ಅವರಿಂದ ಪರಾಜಿತರಾಗಿದ್ದರು.
ಲಾವೋ ಅವರ ಪುತ್ರಿ ವಕೀಲರಾಗಿರುವ ಅಕ್ಷತಾ ಅವರು ಶನಿವಾರ ಸಂಜೆ ಬೆಳಗಾವಿಗೆ ಆಗಮಿಸಿದ್ದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರ ಸಮುಖದಲ್ಲೇ ಲಾವೋ ಅವರ ದೇಹದ ಪೋಸ್ಟ ಮಾರ್ಟೆಮ್ ಮಾಡಿ ದೇಹವನ್ನು ಹಸ್ತಾಂತರ ಮಾಡಲಾಗುವುದು ಎಂದು ಡಿಸಿಪಿ ಜಗದೀಶ ತಿಳಿಸಿದರು.
ನೂರಾರು ಗೋವಾ ನಾಗರಿಕರಂತೆ ಮಾಜಿ ಶಾಸಕ ಲಾವೂ ಕೂಡ ಬೆಳಗಾವಿಗೆ ಬಂದಾಗೆಲ್ಲ ತಮ್ಮ ಹೋಟೆಲನಲ್ಲೇ ವಾಸ್ತವ್ಯ ಮಾಡುತ್ತಿದ್ದರು. ಇಲ್ಲಿಂದ ಹೋಗುವಾಗ ತರಕಾರಿ, ಹಾಲು, ಮಾಂಸ ಮುಂತಾದವುಗಳನ್ನು ವಾರ, ತಿಂಗಳಿಗಾಗುವಷ್ಟು ತೆಗೆದುಕೊಂಡು ಹೋಗುತ್ತಿದ್ದರು ಎಂದು ಶ್ರೀನಿವಾಸ ಲಾಡ್ಜ ಸಿಬ್ಬಂದಿ ಮಾಹಿತಿ ನೀಡಿದ್ದು ಘಟನೆಗೆ ವಿಷಾದಿಸಿದರು.