This is the title of the web page

ಬೀದಿ ನಾಯಿಗಳಿಗಾಗಿ ಬೀದಿ ಜಗಳ ಬಂತು ಕಮೀಷನರ್ ಕಚೇರಿಗೆ

ಬೆಳಗಾವಿ, 14- : ನಗರದಲ್ಲಿ ಒಂದು ವಿಚಿತ್ರ ಪ್ರಕರಣ ಬಂದಿದೆ. “ನಾವು ಬೀದಿ ನಾಯಿಗಳಿಗೆ ಆಹಾರವಿಟ್ಟು ಆರೈಕೆ ಮಾಡಿದರೆ ಎದುರು ಮನೆಯವರು ಅವಕ್ಕೆ ಬಿಸಿನೀರು ಹಾಕಿ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ನಮ್ಮನ್ನೇ ಪೊಲೀಸರು ದಬಾಯಿಸುತ್ತಾರೆ” ಎಂದು ಅನಿತಾ ಶಂಕರ ದೊಡಮನಿ ಎಂಬುವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಅನಿತಾ ಶಂಕರ ದೊಡಮನಿ ಅವರು ಬೆಳಗಾವಿ ಖಾಸಬಾಗ್‍ದ ಮಾರುತಿಗಲ್ಲಿಯ ವಾರ್ಡ ನಂ 21ರ ನಿವಾಸಿ. ಇವರು ರಸ್ತೆಯಲ್ಲಿ ಅಲೆದಾಡುವ ಬೀದಿ ನಾಯಿಗಳಿಗೆ ಅಲ್ಲಿ ಇಲ್ಲಿ ಅಲೆದು ಆಹಾರ ತಂದು ಸುಮಾರು ಎಂಟು ನಾಯಿಗಳನ್ನು ಸಾಕಿದ್ದಾರೆ. ಅನ್ನವನ್ನು ಆಶ್ರಯಿಸಿ ಆ ನಾಯಿಗಳು ಅಲ್ಲಿಯೇ ಅವರ ಮನೆಯ ಪಕ್ಕದಲ್ಲಿಯೇ ವಾಸ್ತವ್ಯ ಹೂಡಿವೆ. ಆದರೆ ಎದುರು ಮನೆಯ ವಿಜಯ ಮತ್ತು ವನಿತಾ ಭಸ್ಮೆ ಎಂಬ ದಂಪತಿ ಮಲಗಿರುವ ನಾಯಿಗಳ ಮೇಲೆ ಬಿಸಿ ನೀರನ್ನು ಎರಚಿ ಅವಕ್ಕೆ ತೊಂದರೆ ಕೊಡುತ್ತಿದ್ದಾರೆ. ಈ ಕುರಿತು ಕೇಳಿದರೆ, ನಾಯಿಗಳು ಬೀದಿಯಲ್ಲಿ ಹೊಲಸು ಮಾಡುತ್ತವೆ, ಜನರಿಗೆ ತೊಂದರೆ ಕೊಡುತ್ತಿವೆ, ಅವುಗಳ ದೆಸೆಯಿಂದ ಪರಿಚಿತರು ಮನೆಗೆ ಬರುವುದು ಕಡಿಮೆಯಾಗಿದೆ ಎನ್ನುತ್ತಾರೆ.

ಮನೆಯ ಮುಂದೆ ಹಾಕಿದ ರಂಗೋಲಿಯನ್ನು ಹಾಳು ಮಾಡುತ್ತವೆ ಎಂಬ ಕಾರಣಗಳನ್ನು ಹೇಳಿ ನಮ್ಮೊಂದಿಗೆ ಜಗಳವಾಡುತ್ತಾರೆ. ಈ ಕುರಿತು ಶಹಾಪೂರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ವಿನಾಯಕ ಬಡಿಗೇರ ಅವರಿಗೆ ದೂರು ನೀಡಲು ಹೋದರೆ ಹೆಣ್ಣು ಮಕ್ಕಳು ಎನ್ನದೇ ನಮ್ಮನ್ನು ದಬಾಯಿಸಿ ಕಳಿಸಿದ್ದಾರೆ, ಏಕವಚನದಲ್ಲಿಯೇ ಮಾತನಾಡಿದ್ದಾರೆ. ಹಾಗಾಗಿ ಈ ಕುರಿತಂತೆ ಸಿಪಿಐ ವಿನಾಯಕ ಬಡಿಗೇರ ಮೇಲೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಾದ ಡಾ.ಬೋರಲಿಂಗಯ್ಯ ಅವರಿಗೆ ಮನವಿ ಮಾಡಿದ್ದಾರೆ.

ತಮಗೆ ನ್ಯಾಯ ಕೊಡಿಸಿ ಇನ್ ಸ್ಪೆಕ್ಟರ್ ವಿನಾಯಕ ಬಡಿಗೇರ ಮೇಲೆ ಕ್ರಮ ಕೈಗೊಳ್ಳುವಂತೆ ಅನಿತಾ ಅವರು ಕಮಿಷನರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

You might also like
Leave a comment