This is the title of the web page

ಮಹಿಳೆಯನ್ನು ಹೊತ್ತೊಯ್ದು ಕೊಂದ ಹುಲಿ

ಚಂದ್ರಪುರ, 21- ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಟಿಎಟಿಆರ್) ಶನಿವಾರ ಬೆಳಗ್ಗೆ ಹುಲಿಗಳ ಸಂಖ್ಯೆ ತಿಳಿಯಲು ಇತರ ಮೂವರು ಸಿಬ್ಬಂದಿಯೊಂದಿಗೆ ಸಮೀಕ್ಷೆ ಗೆ ತೆರಳಿದ್ದ ಮಹಿಳಾ ಅರಣ್ಯ ಸಿಬ್ಬಂದಿಯನ್ನು ಹೆಣ್ಣು ಹುಲಿಯೊಂದು ಹೊತ್ತೊಯ್ದು ಕೊಂದಿದೆ.

ಸ್ವಾತಿ ದುಮಾನೆ ಮೃತಳಾದ ದುರ್ದೈವಿ. ಅಖಿಲ ಭಾರತ ಹುಲಿ ಅಂದಾಜು ಸಮೀಕ್ಷೆಯ ಭಾಗವಾಗಿ ಸ್ವಾತಿ ಅವರು ಮೂವರು ಬೀಟ್ ಸಹಾಯಕರೊಂದಿಗೆ ಶನಿವಾರ ಬೆಳಿಗ್ಗೆ 7 ಗಂಟೆಗೆ ಗುರುತು ಪತ್ತೆ ಸಮೀಕ್ಷೆ ಪ್ರಾರಂಭಿಸಿದರು. ಕೋಲಾರ ಗೇಟ್‌ನಿಂದ ಟಿಎಟಿಆರ್‌ನ ಕೋರ್ ಏರಿಯಾದ ಅಡಿಯಲ್ಲಿ ಕಂಪಾರ್ಟ್‌ಮೆಂಟ್ ಸಂಖ್ಯೆ 97 ರವರೆಗೆ ಸುಮಾರು ನಾಲ್ಕು ಕಿಮೀ ನಡೆದ ನಂತರ, ತಂಡವು ಅವರಿಂದ ಸುಮಾರು 200 ಮೀಟರ್ ದೂರದಲ್ಲಿ ರಸ್ತೆಯೊಂದರಲ್ಲಿ ಹುಲಿ ಕುಳಿತಿರುವುದನ್ನು ಗಮನಿಸಿತು. ತಂಡವು ಸುಮಾರು ಅರ್ಧ ಗಂಟೆ ಕಾಯ್ದು ಕಾಡಿನ ದಟ್ಟವಾದ ಪ್ಯಾಚ್ ಮೂಲಕ ಸುತ್ತುವರಿಯಲು ಪ್ರಯತ್ನಿಸಿತು ಎಂದು ಟಿಎಟಿಆರ್‌ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ ಜಿತೇಂದ್ರ ರಾಮಗಾಂವ್ಕರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇವರ ಚಲನವಲನವನ್ನು ಗಮನಿಸಿದ ಹುಲಿ, ಮೂವರು ಬೀಟ್ ಸಹಾಯಕರ ಹಿಂದೆ ಹೋಗುತ್ತಿದ್ದ ಸ್ವಾತಿಯವರನ್ನು ಹಿಂಬಾಲಿಸಿ ಹಿಂದಿನಿಂದ ದಾಳಿ ಮಾಡಿ ಕಾಡಿನ ಆಳಕ್ಕೆ ಎಳೆದೊಯ್ದಿತು ಎಂದು ಅವರು ಹೇಳಿದರು. ಘಟನೆಯ ಬಗ್ಗೆ ಮಾಹಿತಿಯ ಮೇರೆಗೆ ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶವವನ್ನು ಪತ್ತೆ ಹಚ್ಚಲಾಯಿತು, ಶವವನ್ನು ಚಿಮೂರ್ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ನಂತರ ಸಮೀಕ್ಷೆ ಮತ್ತು ಟ್ರಾನ್ಸೆಕ್ಟ್ ವಾಕ್ ಅನ್ನು ಮುಂದಿನ ಸೂಚನೆ ಬರುವವರೆಗೆ ಮೀಸಲು ಪ್ರದೇಶದಲ್ಲಿ ಸ್ಥಗಿತಗೊಳಿಸಲಾಗಿದೆ ಮತ್ತು ಅಂತಹ ಘಟನೆಗಳನ್ನು ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಾಮಗಾಂವ್ಕರ ಹೇಳಿದರು.

ಸ್ವಾತಿ ಕುಟುಂಬಕ್ಕೆ ತಕ್ಷಣದ ಸಕಲ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

You might also like
Leave a comment