This is the title of the web page

ಭಾರತೀಯರಿಗೆ ರೈಲು ಹತ್ತಲು ಅವಕಾಶ ನೀಡದ ಉಕ್ರೇನಿಯನ್ ರು

ಬೆಂಗಳೂರು, 3- ಉಕ್ರೇನಿನ ಅಧಿಕಾರಿಗಳು ಮತ್ತು ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಗನ್ ಹಿಡಿದು ಬೆದರಿಸುತ್ತಿದ್ದಾರೆ ಎಂದು ಖಾರ್ಕಿವ್ ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಖಾರ್ಕಿವ್ ವಲಯದಿಂದ ತೆರಳಲಿಕ್ಕಾಗಿ ರೈಲಿನಲ್ಲಿ ಪ್ರಯಾಣಿಸಲು ಭಾರತೀಯ ವಿದ್ಯಾರ್ಥಿಗಳು ಅವಕಾಶ ನೀಡುತ್ತಿಲ್ಲ, ರೈಲುಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ಹೊರಹಾಕಲಾಗುತ್ತಿದೆಯಲ್ಲದೇ ಒಂದು ವೇಳೆ ಪ್ರಶ್ನಿಸಿದರೆ, ಹೊಡೆಯಲಾಗುತ್ತಿದೆ. ಗನ್ ತೋರಿಸಿ ಬೆದರಿಸಲಾಗುತ್ತಿದೆ ಎಂದು ಉಕ್ರೇನ್ ನಲ್ಲಿ ಓದುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಹರ್ಷಿತಾ ಅಲ್ಲಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದ್ದಾರೆ.

ರೈಲುಗಳು ಪ್ಲಾಟ್ ಫಾರಂಗೆ ಬಂದಾಗ ಬಾಗಿಲು ತೆರೆಯುವುದಿಲ್ಲ, ರೈಲುಗಳಲ್ಲಿ ಉಕ್ರೇನ್ ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಕ್ರೇನ್ ಜನರಲ್ಲಿಯೂ ಮೊದಲಿಗೆ ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ತದನಂತರ ಅವರ ತಾಯಂದಿರು ಮತ್ತಿತರ ಮಹಿಳೆಯರಿಗೆ, ಕೊನೆಯಾದಾಗಿ ಉಕ್ರೇನ್ ನ ಪುರುಷರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತೀಯ ವಿದ್ಯಾರ್ಥಿಗಳು ರೈಲುಗಳಲ್ಲಿ ಪ್ರಯಾಣಿಸದಂತಾಗಿದೆ. ಒಬ್ಬ ವಿದ್ಯಾರ್ಥಿಗೆ 100 ರಿಂದ 200 ಡಾಲರ್ಸ್ ತೆಗೆದುಕೊಳ್ಳಲಾಗುತ್ತಿದೆ. ಅಷ್ಟು ಹಣ ಪಾವತಿಸಿದ ನಂತರವೂ ಭಾರತೀಯರಿಗೆ ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ಆರೇಳು ದಿನಗಳಿಂದ ಬಂಕರ್ ನಲ್ಲಿ ವಾಸಿಸುತ್ತಿದ್ದೇವು. ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದಾಗ 11 ಕಿ.ಮೀ. ನಡೆದು ಬಂದೆವು. ಆದರೆ, ರೈಲ್ವೆ ನಿಲ್ದಾಣ ತಲುಪಿದ ನಂತರ ಬೆಳಿಗ್ಗೆ 8 ಗಂಟೆ ಮತ್ತು ಮಧ್ಯಾಹ್ನ 12-30ರ ಎರಡು ರೈಲಿನಲ್ಲಿಯೂ ತೆರಳಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

ನಾವು ನಿಂತಿದ್ದ ರೈಲ್ವೆ ನಿಲ್ದಾಣದ ಸಮೀಪದಲ್ಲಿಯೇ ಸುಮಾರು 8 ರಿಂದ 10 ಕ್ಷಿಪಣಿಗಳು ಬಂದು ಅಪ್ಪಳಿಸಿದವು. ರೈಲು ತಪ್ಪಿದ ನಂತರ ಭಾರೀ ಗುಂಡಿನ ದಾಳಿ ನಡೆಸಲಾಯಿತು. ಆಗ ಮತ್ತೆ ಆಶ್ರಯ ತಾಣಕ್ಕೆ ಬಂದೆವು. ನಿನ್ನೆಯಿಂದ ಆಹಾರ ಸಿಗುತ್ತಿಲ್ಲ. ಇಂದು ಕೂಡಾ ಯಾರೂ ಕೂಡಾ ಏನನ್ನು ಹೇಳುತ್ತಿಲ್ಲ. ಸದ್ಯ 2 ರಿಂದ 3 ಹಾಸ್ಟೆಲ್ ಕೊಠಡಿಗಳಲ್ಲಿ ನಾವು ಉಳಿದುಕೊಂಡಿದ್ದೇವೆ. ಒಂದು ಕೊಠಡಿಯಲ್ಲಿ ನಾಲ್ಕು ಜನರನ್ನು ಇಟ್ಟಿರುವುದಾಗಿ ಹರ್ಷಿತಾ ತಿಳಿಸಿದರು.

ಉಕ್ರೇನ್ ನಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ರೈಲು ನಿಲ್ದಾಣಗಳಲ್ಲಿ ಭಾರತೀಯರಿಗೆ ಕಿರುಕುಳ ನೀಡಲಾಗುತ್ತಿದೆ. ಈಗ ಬಂಕರ್ ತೊರೆಯುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಹೇಳಲಾಗುತ್ತಿದೆ. ಭಾರತ ನಮ್ಮ ನೆರವಿಗೆ ಬಾರದಿರುವಾಗ ನಾವೇಕೆ ಅವರಿಗೆ ಸಹಾಯ ಮಾಡಬೇಕು ಎಂದು ಉಕ್ರೇನ್ ಜನರು ಹೇಳುತ್ತಿರುವುದಾಗಿ ಅವರು ಹೇಳಿದ್ದಾರೆ.

ಉಕ್ರೇನ್ ಗಡಿ ರೊಮಾನಿಯಾದಲ್ಲಿಯೂ ಪರಿಸ್ಥಿತಿ ಭಯಾನಕವಾಗಿದೆ. ಉಕ್ರೇನ್ ಸೈನಿಕರು ಭಾರತೀಯರನ್ನು ಹೊಡೆಯುತ್ತಿದ್ದಾರೆ, ಅಶ್ರುವಾಯು ಶೆಲ್ ಗಳನ್ನು ಸಿಡಿಸುತ್ತಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯ ಅಧಿಕಾರಿಗಳು ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಉಕ್ರೇನ್ ನಿಂದ ರಾಜಸ್ಥಾನಕ್ಕೆ ಇಂದು ವಾಪಸ್ಸಾದ ಎಂಟು ವಿದ್ಯಾರ್ಥಿಗಳು ಹೇಳಿದ್ದಾರೆ.

You might also like
Leave a comment