ಬೆಳಗಾವಿ : ಪಶ್ಚಿಮ ಘಟ್ಟ, ಮಹಾರಾಷ್ಟ್ರ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ.
ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ 18 ಸೇತುವೆಗಳು ಮುಳುಗಡೆಯಾಗಿವೆ. ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆಯವರೆಗೆ 8 ಸೇತುವೆಗಳು ಮುಳುಗಡೆಯಾಗಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 12 ಸೇತುವೆಗಳು ಮುಳುಗಡೆಯಾಗಿದ್ದರೆ, ಮೂಡಲಗಿ ಭಾಗದಲ್ಲಿ ನಾಲ್ಕು ಸೇತಿವೆಗಳು ಮುಳುಗಡೆಯಾಗಿವೆ. ಖಾನಾಪುರ ಭಾಗದಲ್ಲಿ ಎರಡು ಸೇತುವೆಗಳು ಮುಳುಗಡೆಯಾಗಿವೆ. ಗ್ರಾಮಗಳು, ಹೊಲ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜನರು ಕ್ಷಣ ಕ್ಷಣಕ್ಕೂ ಪ್ರವಾಹದ ಭೀತಿಯಲ್ಲಿ ಕಾಲಕಳೆಯುತ್ತಿದ್ದಾರೆ.
ಮಹಾರಾಷ್ಟ್ರದ ಪ್ರವಾಸಿ ತಾಣ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಹಿಡ್ಕಲ್ ಜಲಾಶಯದ ಪ್ರಮಾಣದಲ್ಲಿ ಗುರುವಾರ ಮುಂಜಾನೆ 8 ಗಂಟೆಗೆ ಅಳತೆ ಮಾಡಿದಂತೆ 5 ಅಡಿ ಹೆಚ್ಚಳವಾಗಿದೆ. ಆ ಭಾಗದಿಂದ ಹಿಡ್ಕಲ್ ಜಲಾಶಯಕ್ಕೆ 30,000 ಸ್ಕ್ಯೂಸೆಕ್ಸ್ ನೀರು ಹರಿದು ಬಂದಿದೆ. 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2135 ಅಡಿ ನೀರು ಸಂಗ್ರಹವಾಗಿದೆ.
ಖಾನಾಪುರ ತಾಲೂಕಿನ ಖನಕುಂಬಿ ಮತ್ತು ಜಾ0ಬೋಟಿ ಅರಣ್ಯ ಪ್ರದೇಶದಲ್ಲಿನ ಮಳೆಯಿಂದಾಗಿ ಸವದತ್ತಿಯಲ್ಲಿರುವ ಮಲಪ್ರಭಾ ಜಲಾಶಯದ ನೀರಿನ ಮಟ್ಟ ಒಂದೇ ರಾತ್ರಿ 2 ಅಡಿ ಏರಿಕೆಯಾಗಿದೆ.