This is the title of the web page

ಆರ್ಯನ್ ಖಾನ್ ವಿರುದ್ಧ ಪುರಾವೆಗಳಿಲ್ಲ, ಇದೊಂದು ಷಡ್ಯಂತ್ರ

ಮುಂಬೈ, 2- ದೇಶಾದ್ಯಂತ ಸುದ್ದಿ ಚಾನಲ್ ಗಳಲ್ಲಿ ತಿಂಗಳಾನುಗಟ್ಟಲೇ ಒಂದೇ ಸುದ್ದಿಯನ್ನು ಬಿತ್ತರಿಸಿ ದೇಶದ ಜನರ ತಲೆ ಕೊರೆದು ಕಿರಿ ಕಿರಿ ಉಂಟು ಮಾಡಿದ್ದ ಖ್ಯಾತ ಹಿಂದಿ ಚಿತ್ರನಟ ಶಾರೂಕ ಖಾನ್ ಅವರ ಪುತ್ರ ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಪ್ರಕರಣಕ್ಕೆ ಈಗ ಹೊಸ ತಿರುವು ಬಂದಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಲಾಗಿದೆ.

ಆರ್ಯನ್ ಖಾನ್ ಬಗ್ಗೆ ತನಿಖಾ ಸಂಸ್ಥೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ, ಇದೊಂದು ಪಿತೂರಿ ಎಂದು ವರದಿಯಲ್ಲಿ ಹೇಳಿದೆ.

ಪ್ರಕರಣದ ತನಿಖೆ ನಡೆಸಿದ ಎನ್​ಸಿಬಿ ತಂಡ ವರದಿ ಪ್ರಕಟಿಸಲಿದ್ದು, ಅದರಲ್ಲಿ ಶಾರೂಖ​ ಪುತ್ರ ಆರ್ಯನ್​ ಖಾನ್​ರಿಗೆ ಕ್ಲೀನ್​ಚಿಟ್​ ನೀಡಿದೆ. ಅಲ್ಲದೇ, ದಾಳಿ ವೇಳೆ ಆರ್ಯನ್​ ಖಾನ್​ ಬಳಿ ಡ್ರಗ್ಸ್​ ಪತ್ತೆಯಾಗಿಲ್ಲ. ಆತ ಅಂತರ್ರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್​ನ ಭಾಗವಾಗಿದ್ದರು ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವರದಿಯಲ್ಲಿದೆ ಎಂದು ಹೇಳಲಾಗಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಮತ್ತು ಎನ್‌ಸಿಬಿಯ ಡಿಡಿಜಿ ಸಂಜಯ ಸಿಂಗ್ ಅವರು, ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಇನ್ನೂ ತನಿಖೆ ನಡೆಯುತ್ತಿದ್ದು, ಹಲವು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ ಎಂದು ಸಂಜಯ ಸಿಂಗ್ ಹೇಳಿದ್ದಾರೆ. ಆದರೆ ಇಲ್ಲಿಯವರೆಗೆ ನಾವು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದಿದ್ದಾರೆ.

ಆರ್ಯನ್ ಖಾನ್ ಬಳಿ ಡ್ರಗ್ಸ್ ಸಹ ಪತ್ತೆಯಾಗಿರಲಿಲ್ಲ, ಆದ್ದರಿಂದ ಅವರ ಫೋನ್ ತೆಗೆದುಕೊಳ್ಳುವ ಅಥವಾ ಅವರ ಚಾಟ್ ಓದುವ ಅಗತ್ಯವಿಲ್ಲ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಆದರೆ ಈ ಹಿಂದಿನ ಅಧಿಕಾರಿ ಸಮೀರ ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡ ಮುಂಬೈ ಡ್ರಗ್ ಕೇಸ್ ಕೈಗೆತ್ತಿಕೊಂಡಾಗಿನಿಂದ ಸಮೀರ್ ವಾಂಖೆಡೆ ಮೇಲೆ ವೈಯಕ್ತಿಕ ಆರೋಪಗಳು ಮತ್ತು ಪ್ರಕರಣ ಮುಚ್ಚಿಹಾಕಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆ ಒಡ್ಡಿದ್ದರು ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.

ಮುಂಬೈ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂದು ಎನ್‌ಸಿಬಿಯ ಪ್ರಮುಖ ಸಾಕ್ಷಿಯೇ ಹೇಳಿದ ನಂತರ ಈ ಪ್ರಕರಣ ವಿವಾದಕ್ಕೆ ಒಳಗಾಯಿತು. ಆರ್ಯನ್ ಖಾನ್ ಅವರನ್ನು ಬಂಧಿಸಿದ ನಂತರ ಪ್ರಕರಣ ಕೈಬಿಡಲು 25 ಕೋಟಿ ರೂ. ಹಣದ ಬೇಡಿಕೆಯಲ್ಲಿ ಎಂಟು ಕೋಟಿ ಹಣ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಹೋಗಲಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಸರಳ ಕಾಗದದ ಮೇಲೆ ಸಹಿ ಹಾಕುವಂತೆ ಬಲವಂತವಾಗಿ ಕೇಳಲಾಯಿತು ಎಂದು ಸಾಕ್ಷಿ ಆರೋಪಿಸಿದ್ದರು.

You might also like
Leave a comment