This is the title of the web page

ಈ ಬಾರಿ ಮಕ್ಕಳ ಬೇಸಿಗೆ ರಜೆ ಕಡಿತ

ಬೆಂಗಳೂರು, 24- ಕೊರೋನಾ ಕಾರಣ ಕಳೆದ ಎರಡು ವರ್ಷ ಮಕ್ಕಳ ತರಗತಿ ಶಿಕ್ಷಣ ಕಡಿಮೆಯಾಗಿದ್ದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ವರ್ಷದ ರಜೆಗಳನ್ನು ಕಡಿತಗೊಳಿಸಿದೆ.

ಮಕ್ಕಳ ಶೈಕ್ಷಣಿಕ ಪ್ರಗತಿ ಗಮನದಲ್ಲಿಟ್ಟು 2022-23ರ ಶೈಕ್ಷಣಿಕ ವರ್ಷ ಜೂನ್ 1ರ ಬದಲು ಮೇ 16ರಿಂದ ಆರಂಭವಾಗಲಿದೆ.

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಮತ್ತು 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವಂತ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಈ ಬಾರಿ ಏಪ್ರಿಲ್ 10ರಿಂದ ಮೇ15ರ ವರೆಗೆ ಬೇಸಿಗೆ ರಜೆಯಿರಲಿದೆ

ಕೋವಿಡ್ ಕಾರಣದಿಂದ ನಿರಂತರವಾಗಿ ಭೌತಿಕ ತರಗತಿಗಳು ನಡೆಯಲಿಲ್ಲ, ಜೊತೆಗೆ ಆನ್ ಲೈನ್ ಶಿಕ್ಷಣ ಪರಿಣಾಮಕಾರಿಯಾಗಿಲ್ಲ ಎಂಬ ವ್ಯಾಪಕ ದೂರುಗಳು ಇವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಈ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ‘ಕಲಿಕಾ ಚೇತರಿಕಾ ಕಾರ್ಯಕ್ರಮ”ವನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೆ ಶಾಲಾ ಶೈಕ್ಷಣಿಕ ವರ್ಷವು ಮೇ 29ರಿಂದ ಆರಂಭವಾಗಿ ಎಪ್ರಿಲ್ 10ಕ್ಕೆ ಮುಕ್ತಾಯವಾಗುತ್ತಿತ್ತು. ಈ ಶೈಕ್ಷಣಿಕ ಚಟುವಟಿಕೆಗಳ ಪಟ್ಟಿಯಂತೆ 2021-22ನೇ ಸಾಲಿನ 1 ರಿಂದ 9ನೇ ತರಗತಿಗಳ ವಾರ್ಷಿಕ ಪರೀಕ್ಷೆ ಮಾರ್ಚ್ 24ರಿಂದ ಆರಂಭಗೊಳ್ಳಲಿದೆ. ಅಲ್ಲದೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬೇಸಿಗೆ ರಜೆ ಏಪ್ರಿಲ್ 10ರಿಂದ ಆರಂಭವಾಗಲಿದೆ.

ಕೋವಿಡ್ ಪ್ರತಿಕೂಲ ಸನ್ನಿವೇಶದಿಂದಾಗಿ 2019-2020, 2020-21 ಮತ್ತು 2021-22ನೇ ಸಾಲಿನ ಶೈಕ್ಷಣಿಕ ಸಾಲುಗಳಲ್ಲಿ ಶಾಲೆಗಳು ಸ್ಥಗಿತಗೊಳಿಸಿ, ನಡೆದ ಕಾರಣ ಶೇ.50 ರಿಂದ 60ರಷ್ಟು ದಿನಗಳಲ್ಲಿ ಮಾತ್ರ ಭೌತಿಕವಾಗಿ ಶಾಲಾ ತರಗತಿಗಳು ನಡೆಸಲಾಗಿದೆ.

You might also like
Leave a comment