This is the title of the web page

ಶತ್ರುವಿನ ಮುಂದೆ ಶರಣಾಗದ ಜಗತ್ತಿನ ಏಕೈಕ ವೀರ ಟಿಪ್ಪು -ಬಿಜೆಪಿ ನಾಯಕ ವಿಶ್ವನಾಥ

ಟಿಪ್ಪು ಕುರಿತ ಸತ್ಯ ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಬಿಜೆಪಿ ನಾಯಕ

ಮೈಸೂರು,9 : ಟಿಪ್ಪು ಈ ನಾಡಿನ ಮಣ್ಣಿನ ಮಗ, ಮೈಸೂರು ಹುಲಿ. ಶತ್ರುವಿನ ಮುಂದೆ ಶರಣಾಗದ ಜಗತ್ತಿನ ಏಕೈಕ ವೀರ ಟಿಪ್ಪು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಎಂಎಲ್ ಸಿ ಎಚ್.ವಿಶ್ವನಾಥ ಹೇಳಿದ್ದಾರೆ.

ಖ್ಯಾತ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸು ಬರೆದಿರುವ ಟಿಪ್ಪು ಕುರಿತಾದ “ಟಿಪ್ಪು- ಮಾನ್ಯತೆ ಸಿಗದ ಸುಲ್ತಾನ” ಎಂಬ ಪುಸ್ತಕವನ್ನು ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ ಅವರು ಇಂದು ಬಿಡುಗಡೆ ಮಾಡಿದರು.

ನಿವೃತ್ತ ನ್ಯಾಯಾಧೀಶ ಎಚ್.ಎನ್ ನಾಗಮೋಹನ ದಾಸ್ ಅಧ್ಯಕ್ಷತೆಯಲ್ಲಿ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ‌.ಕೆ ಹರಿಪ್ರಸಾದ ಅವರು ಕೃತಿ ಬಿಡುಗಡೆ ಮಾಡಬೇಕಿತ್ತು. ಆದರೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಗೈರಾಗಿದ್ದರು.

ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ ಅವರು ಕೃತಿ ಬಿಡುಗಡೆ ಮಾಡಿ ಭಾಷಣ ಉದ್ದಕ್ಕೂ ಟಿಪ್ಪುವನ್ನು ಮನಸಾರೆ ಹಾಡಿ ಹೊಗಳಿದರು. ಟಿಪ್ಪು ಇಡೀ ಜಗತ್ತಿನ ಮಾನ್ಯತೆಗೆ ಒಳಗಾದ ಮಹಾ ಚಕ್ರವರ್ತಿ. ಕೇಸರಿಯನ್ನು ಒಂದು ಧರ್ಮದವರು, ಹಸಿರನ್ನು ಒಂದು ಧರ್ಮದವರು ಕಿತ್ತು ಕೊಂಡಿದ್ದಾರೆ. ಕಾಮಾಲೆ ಕಣ್ಣಿನಿಂದ, ಮತಾಂಧತೆ ಕಣ್ಣಿನಿಂದ ಟಿಪ್ಪುವನ್ನು ನೋಡಬೇಡಿ. ಟಿಪ್ಪು ಈ ನಾಡಿನ ಮಣ್ಣಿನ ಮಗ, ಮೈಸೂರು ಹುಲಿ ಎಂದು ಹೇಳಿದರು.

ಟಿಪ್ಪು 80 ಸಾವಿರ ಕೊಡವರನ್ನು ಕೊಂದ ಎಂದು ಹೇಳುತ್ತಾರೆ. 250 ವರ್ಷದ ಹಿಂದೆ ಅಲ್ಲಿ ಅಷ್ಟು ಜನಸಂಖ್ಯೆ ಇತ್ತಾ? ಎಂದು ಪ್ರಶ್ನಿಸಿದ ಅವರು, ಟಿಪ್ಪು ಕುರಿತ ಸತ್ಯವನ್ನು ಸುಳ್ಳಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಟಿಪ್ಪು ಯಾರಿಗೂ ತಲೆ ಬಾಗಿಲ್ಲ. ಯಾರ ಮುಂದೆಯೂ ಮಂಡಿಯೂರದ ಮಹಾ ಧೀರ ಟಿಪ್ಪು. ಟಿಪ್ಪುವನ್ನು ಪುಸ್ತಕದಿಂದ ತೆಗೆದು ಹಾಕಿದರೂ “ಟಿಪ್ಪು ಭಾರತೀಯರ ಹೃದಯದಲ್ಲಿ ಸದಾ ಇರುತ್ತಾರೆ” ಎಂದು ವಿಶ್ವನಾಥ ಹೇಳಿದರು.

ನನ್ನ ಜೆಂಡಾ ಬದಲಾಗಿದೆ. ಆದರೆ ನನ್ನ ಅಜೆಂಡಾ ಮಾತ್ರ ಒಂದೇ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಬಂದಾಗಲೂ ಇದನ್ನೇ ಹೇಳಿದ್ದೆ ಎಂದು ಅವರು ಹೇಳಿದರು.

ಈ ದೇಶದ ಎಲ್ಲಾ ಧರ್ಮ ಗುರುಗಳು ಯಾಕೆ ಮೌನವಾಗಿದ್ದೀರಾ? ಇವತ್ತಿನ ಸ್ಥಿತಿಯನ್ನು ಯಾಕೆ ಖಂಡಿಸುತ್ತಿಲ್ಲ. ಸರಕಾರದ ಅನುದಾನದ ಕಾರಣಕ್ಕೆ ಸರಕಾರ ವಿರುದ್ದ ಮಾತಾಡುತ್ತಿಲ್ಲವೇ? ಅನ್ನ ಕಿತ್ತು ಕೊಳ್ಳುವ ಕೆಲಸ ರಾಜ್ಯದಲ್ಲಿ ನಡೆಯತ್ತಿದೆ. ಇದರ ವಿರುದ್ದ ಯಾಕೆ ಧರ್ಮ ಗುರುಗಳು ಮಾತಾಡ್ತಿಲ್ಲ? ಎಂದು ಅವರು ಹೇಳಿದರು.

ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಮಠಾಧೀಶರು ತಮ್ಮ ಮೌನ ಮುರಿಯಬೇಕು. ಭಾರತವನ್ನು ಸಮರ್ಥವಾಗಿ ಕಟ್ಟುವಲ್ಲಿ ಎಲ್ಲಾ ಧರ್ಮದ ಪಾತ್ರ ದೊಡ್ಡದಿದೆ. ಇದನ್ನು ಬೇರ್ಪಡಿಸುವ ಕೆಲಸ ಮಾಡಬೇಡಿ ಎಂದು ವಿಶ್ವನಾಥ ಬೇಡಿಕೊಂಡರು.

ಇದೇ ವೇಳೆ ನಿವೃತ್ತ ನ್ಯಾಯಾಧೀಶ ನಾಗಮೋಹನ ಅವರು ಮಾತನಾಡಿ, ರಾಜ್ಯದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಂದು ಚುನಾವಣೆಯ ಮೂಲಕ ಭ್ರಷ್ಟಾಚಾರ, ಸರ್ವಾಧಿಕಾರ, ಕೋಮು ಗಲಭೆ ಗೆಲ್ಲುತ್ತಿದೆ. ನಿರುದ್ಯೋಗ, ಆರೋಗ್ಯ, ಶಿಕ್ಷಣ, ರೈತರ ಆತ್ಮಹತ್ಯೆಯ ವಿಚಾರಗಳು ಮುನ್ನೆಲೆಗೆ ಬರಲೇ ಇಲ್ಲ. ಬದಲಾಗಿ ಹಿಜಾಬ್, ಹಲಾಲ್, ನಂತಹ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಮುಂದಿನ 15 ದಿನಗಳಲ್ಲಿ ಮತ್ತೊಂದು ವಿಚಾರ ಬರಲಿದೆ ಕಾದು ನೋಡಿ ಎಂದು ಅವರು ನುಡಿದರು.

ನಮ್ಮ ಸಂವಿಧಾನದ ಮೇಲೆ ಕೆಲ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲದಂತಾಗಿದೆ. ರಾಜಕೀಯದಿಂದ ಧರ್ಮವನ್ನು ಬೇರ್ಪಡಿಸುವ ವ್ಯವಸ್ಥೆಗೆ ಜಾತ್ಯತೀತ ವ್ಯವಸ್ಥೆ ಎನ್ನುತ್ತೇವೆ. ರಾಜಕೀಯೇತರ ಕ್ಷೇತ್ರಗಳಲ್ಲಿ ಮೀಸಲಾತಿ ಅಪ್ರಸ್ತುತ ಆಗುತ್ತಿದೆ. ಇದು ಸಂವಿಧಾನದ ಮೂಲ ಆಶಯಗಳಿಗೆ ವಿರೋಧವಾದದ್ದು. ಮೀಸಲಾತಿ ವಿಚಾರಗಳು ಪ್ರಸ್ತಾಪವಾಗುತ್ತಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ.ಮಹೇಶ ಚಂದ್ರ ಗುರು ಅವರ ಮಾತನಾಡಿ, ಟಿಪ್ಪು ಅಧಿಕಾರಕ್ಕೆ ಬರುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಪ್ರಬಲ ಮೈತ್ರಿಕೂಟ ಕಟ್ಟಲು ಯತ್ನ ನಡೆಯಿತು. ಮರಾಠಾ, ಹೈದ್ರಾಬಾದ ನಿಜಾಮ್, ಮಲಬಾರ್‌ ಗಳನ್ನು ಸೇರಿ ಮೈತ್ರಿ ನಡೆಸಿದ್ದರು. ಆದರೆ ಆದು ಸಾಧ್ಯ ಆಗಲಿಲ್ಲ. ಟಿಪ್ಪು ವಿಶ್ವ ಕಂಡ ಶ್ರೇಷ್ಠ ನಾಯಕ ಎಂದರು.

ಟಿಪ್ಪು ಕಾಲದಲ್ಲಿ ಮಹಿಳೆಯರು, ಮಕ್ಕಳು, ಯುವಕರು ಹಸಿದು ಬೀದಿಗೆ ಬೀಳದಂತೆ ನೋಡಿಕೊಳ್ಳಲಾಗಿತ್ತು. ಈಗ ಬಹುತೇಕರು ಬೀದಿಗೆ ಬಿದ್ದಿದ್ದಾರೆ. ಅಧಿಕಾರ ನಡೆಸುವವರಿಗೆ 56 ಇಂಚು ಎದೆ ಇದ್ದರೆ ಸಾಲದು. ತಾಯಿ ಹೃದಯ ಇರಬೇಕು. ಮೋದಿ ಮನ್‌ ಕೀ ಬಾತ್‌ನಲ್ಲಿ ಸಾಕಷ್ಟು ಮಾತನಾಡ್ತಾರೆ. ಈವತ್ತು ಮನ್‌ ಕಿ ಬಾತ್ ಕೇಳಿದವರು ಮಂಕಿಗಳಾಗಿದ್ದಾರೆ. ನಾವೇನು ಕಿವಿಗೆ ಹೂ ಮುಡಿದುಕೊಂಡಿಲ್ಲ. ಇವತ್ತು 56 ಇಂಚು ಎದೆ ಬೇಕಾಗಿಲ್ಲ, ಜನರ ಕೆಲಸ ಮಾಡುವ ತಾಯಿ ಹೃದಯ ಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದರು.

ಟಿಪ್ಪು ಜಯಂತಿ ಪ್ರಾರಂಭವಾಗಿದ್ದು ಬಿಜೆಪಿಯಿಂದ. ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರು ಟಿಪ್ಪು ಜಯಂತಿ ಆಚರಿಸಿದ್ದಾರೆ. ಯಡಿಯೂರಪ್ಪ ಅವರು ಟಿಪ್ಪು ಖಡ್ಗವನ್ನು ಹಿಡಿದಿದ್ದರು. ಖಡ್ಗ ಹಿಡಿಯಲು ಶಕ್ತಿ ಇಲ್ಲದೇ ನಡುಗುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಟಿಪ್ಪು ಬಗ್ಗೆ ಅವರು ಹೊಗಳಿದ್ದಾರೆ. ಕಾಂಗ್ರೆಸ್ ಅಥವಾ ಸಿದ್ದರಾಮಯ್ಯರಿಂದ ಟಿಪ್ಪು ಜಯಂತಿ ಪ್ರಾರಂಭವಾಗಲಿಲ್ಲ. ಬಿಜೆಪಿಯಿಂದ ಪ್ರಾರಂಭವಾಗಿದ್ದರೂ ಸಿದ್ದರಾಮಯ್ಯರನ್ನು ಟೀಕಿಸುವ ಕೆಲಸವಾಯಿತು ಎಂದು ಅವರು ಹೇಳಿದರು.

You might also like
Leave a comment