This is the title of the web page

ಸಮಾಜಕ್ಕೆ ಧಕ್ಕೆ ತರುವ ವಿಷಯ ವೈಭವೀಕರಿಸುವ ಮಾಧ್ಯಮಗಳು, ವಾಟ್ಸಪ್ ಸಂದೇಶಗಳ ಬಗ್ಗೆ ಕುಮಾರಸ್ವಾಮಿ ಬೇಸರ

ಬೆಂಗಳೂರು,31- ಬಟ್ಟೆ, ಆಹಾರ ಪದ್ಧತಿಯಂತಹ  ಸಮಾಜಕ್ಕೆ ಧಕ್ಕೆ ಉಂಟು ಮಾಡುವ ಸೂಕ್ಷ್ಮ ಭಾವನಾತ್ಮಕ ವಿಷಯಗಳನ್ನು ಟಿವಿ ಮಾಧ್ಯಮಗಳು ವೈಭವೀಕರಣ ಮಾಡುತ್ತ ಜನರನ್ನು ಪ್ರಚೋದಿಸುತ್ತಿರುವ ಬಗ್ಗೆ ಮತ್ತು ಪ್ರಚೋದನಾತ್ಮಕ ವಾಟ್ಸಪ್ ಸಂದೇಶಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಬುಧವಾರ ಚುನಾವಣೆ ಸುಧಾರಣೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಜಾಬ್ ಆಯಿತು, ಜಾತ್ರೆಗಳಲ್ಲಿ ವ್ಯಾಪಾರ ಬಂದ್ ಆಯಿತು, ಈಗ ಯುಗಾದಿಗೆ ಹಲಾಲ್ ಬಗ್ಗೆ ಚರ್ಚೆ ಮಾಧ್ಯಮಗಳಲ್ಲಿ ಸತತ ನಡೆಯುತ್ತಿದೆ ಎಂದರು.

ನಾವು ಮೂಲತಃ ಮಾಂಸಾಹಾರಿಗಳು. ನಾವು ಹಲಾಲ್, ಹರಾಮ್ ಮಾಂಸ ಅಂತೆಲ್ಲ ನೋಡುವುದಿಲ್ಲ. ಹಾಗೆಂದು ನಾವು ಮಾಂಸ ತಂದು ಪೂಜೆಗೂ ಇಡುವುದಿಲ್ಲ. ಈಗ ಇಂತಹ ಅಶಾಂತಿಯ ವಾತಾವರಣ ಯಾಕೆ ಸೃಷ್ಟಿಸಬೇಕು? ಮಾಧ್ಯಮಗಳು ಇಂಥ ಸುದ್ದಿಗಳನ್ನು ವೈಭವೀಕರಿಸಿ ತೋರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಕೇಳಿಕೊಂಡರು.

ಶಾಂತಿಯನ್ನು ಹಾಳು ಮಾಡುವಂಥ ವಿಷಯಗಳಿಗೆ ಮಾಧ್ಯಮಗಳು ಹೆಚ್ಚು ಮಹತ್ವ ಕೊಟ್ಟರೆ, ಅದರಿಂದ  ರಾಜ್ಯ ಹಾಳಾಗುತ್ತದೆ. ಆಗ ಮಾಧ್ಯಮಗಳೇ ಉತ್ತರದಾಯಿಗಳಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಮುಖ್ಯವಾಗಿ ವಾಟ್ಸಪ್ ನಲ್ಲಿ ಜನರನ್ನು ಪ್ರಚೋದಿಸುವ ಸಾಕಷ್ಟು ಪೋಸ್ಟಗಳು ಬರುತ್ತಿವೆ. ಇಂಥ ಪ್ರಚೋದನಾತ್ಮಕ ವಿಷಯಗಳನ್ನು ಓದಿ ನನಗೆ ಬಹಳ ನೋವಾಯಿತು ಎಂದ ಅವರು, ವಾಟ್ಸಾಪ್ ಆದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿರುವ ಪೋಸ್ಟಗಳನ್ನು ಸದನದಲ್ಲಿ ಓದಿದರು.

ವ್ಯಾಪಾರ ಮಾಡಲಿಕ್ಕೆ ಹಿಂದೂಗಳ ಅಂಗಡಿಗಳನ್ನೇ ಹಿಂದೂಗಳು ಆಯ್ಕೆ ಮಾಡಿಕೊಳ್ಳಿ ಎಂಬ  ಸಂದೇಶಗಳು ವ್ಯಾಪಕವಾಗಿ ರವಾನೆ ಆಗುತ್ತಿವೆ. ಮುಸ್ಲಿಂ ಸಮುದಾಯದವರ ಅಂಗಡಿಗಳಿಗೆ ಹೋಗಬೇಡಿ ಎಂದು ಹರಿದಾಡುತ್ತಿರುವ ಸಂದೇಶವನ್ನು ಕುಮಾರಸ್ವಾಮಿ ಕಲಾಪದಲ್ಲಿ ಓದಿದರು.

You might also like
Leave a comment