ಬೆಳಗಾವಿ: ರಸ್ತೆ ಪಕ್ಕದ ಸೇತುವೆಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಸೇರಿ ಇಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಖಾನಾಪುರ ಪಟ್ಟಣದ ಹೊರವಲಯದ ಬಾಚೋಳಿ ಕ್ರಾಸ್ ಬಳಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಮಚ್ಚೆ ನಿವಾಸಿ, ಕಾರು ಚಾಲಕ ಶಂಕರ ಮೋಹನ ಗೋಮನ್ನಾಚೆ (27), ಈತನ ಸ್ನೇಹಿತ, ತಾಲೂಕಿನ ಹತ್ತರವಾಡ ನಿವಾಸಿ ಆಶೀಷ ಮೋಹನ ಪಾಟೀಲ (26) ಮೃತಪಟ್ಟಿದ್ದಾರೆ. ಅಲ್ಲದೇ ಮಚ್ಚೆ ಗ್ರಾಮದ ನಿಖೇಶ ಜಯವಂತ ಪವಾರ (26) ಹಾಗೂ ಜ್ಯೋತಿಬಾ ಗೋವಿಂದ ಗಾಂವಕರ (29) ದುರ್ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಶಂಕರ ಹಾಗೂ ಆತನ ಸ್ನೇಹಿತರು ಸೇರಿ ಖಾನಾಪುರಕ್ಕೆ ಪಾರ್ಟಿ ಮಾಡಲು ಹೋಗಿದ್ದರು ಎನ್ನಲಾಗಿದೆ. ಪಾರ್ಟಿ ಮುಗಿಸಿ ಜಾಂಬೋಟಿ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇಳಿಜಾರಿನ ರಸ್ತೆಯಲ್ಲಿ ಕಾರು ಅತಿವೇಗದಲ್ಲಿ ಬಂದು ರಸ್ತೆ ಬದಿಯ ಸೇತುವೆಗೆ ಡಿಕ್ಕಿ ಹೊಡೆದಿದೆ. ಬಳಿಕ ಎರಡು ಚಕ್ರಗಳು ಕಿತ್ತು 100 ಮೀಟರ್ ದೂರದವರೆಗೆ ಬಿದ್ದಿವೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾನಾಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರ ಮೃತದೇಹಗಳನ್ನು ಖಾನಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.