This is the title of the web page

ಎರಡು ನಿಲುವು

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಎಂಟು ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಸರ್ಕಾರದ ಸಾಧನೆ ಸಾರುವ ಜಾಹೀರಾತುಗಳನ್ನು ಕೇಂದ್ರ ಪ್ರಕಟಿಸಿದೆ. ಇದಲ್ಲದೇ ಬಿಜೆಪಿ ಆಡಳಿತ ಇರುವ ರಾಜ್ಯಗಳು ಪ್ರತ್ಯೇಕವಾಗಿ ಜಾಹೀರಾತು ನೀಡಿ, ಕೇಂದ್ರ ಸರ್ಕಾರದ ಎಂಟು ವರ್ಷಗಳ ಸಾಧನೆ ಮೆಚ್ಚಿವೆ. ಹಾಗೆ ಕರ್ನಾಟಕ ಸರ್ಕಾರವೂ ಇತ್ತೀಚೆಗೆ ಹಲವು ಜಾಹೀರಾತುಗಳನ್ನು ಪ್ರಕಟಿಸಿತ್ತು. ಅದರಲ್ಲಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ದೊರೆತ ಅನುದಾನದ ಮೊತ್ತ ಎಷ್ಟೆಂದು ಉಲ್ಲೇಖಿಸಲಾಗಿತ್ತು. ಅದನ್ನು ಗಮನಿಸಿದರೆ ಕೇಂದ್ರವು ಕರ್ನಾಟಕಕ್ಕೆ ಬಹಳ ಅಕ್ಕರೆ ತೋರಿದೆ ಎಂಬಂತೆ ಕಾಣುತ್ತಿತ್ತು. ವಾಸ್ತವದಲ್ಲಿ ಅದು ರಾಜ್ಯಕ್ಕೆ ನೀಡಬೇಕಾದ ಅನುದಾನವೇ ಹೊರತು, ಅದರಲ್ಲಿ ವಿಶೇಷ ಏನೂ ಇರಲಿಲ್ಲ. ಹಿಂದೆ ಇದ್ದ ಸರ್ಕಾರಗಳ ಅವಧಿಯಲ್ಲೂ ರಾಜ್ಯಕ್ಕೆ ಸಲ್ಲಬೇಕಾದ ಅನುದಾನದ ಮೊತ್ತವನ್ನು ನೀಡುತ್ತಲೇ ಬಂದಿವೆ. ಒಂದು ರೀತಿಯಲ್ಲಿ ಇದು ಸಾರ್ವಜನಿಕರನ್ನು ಹಾದಿ ತಪ್ಪಿಸುವ ಮಾಹಿತಿ. ಸಾವಿರ ಸಾವಿರ ಕೋಟಿಗಳ ಈ ಮೊತ್ತ ಕೇಂದ್ರದಿಂದ ಬಂದಿದೆ ಎಂದಾದರೆ, ರಾಜ್ಯದ ಬಗ್ಗೆ ಕೇಂದ್ರ ವಿಶೇಷ ಒಲವು ತೋರಿದೆ ಎಂದೇ ಭಾವಿಸುವಂತಾಗುತ್ತದೆ.

ಕೇಂದ್ರ ಸರ್ಕಾರ ಜಿಎಸ್‍ಟಿ ಜಾರಿಗೆ ತಂದ ಮೇಲೆ ರಾಜ್ಯಗಳು ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಟ್ಟು ತಮ್ಮ ಅನುದಾನಕ್ಕೆ ಕಾಯುತ್ತಾ ಕೂರಬೇಕಾಗಿದೆ. ಕೆಲವು ರಾಜ್ಯಗಳಿಗೆ ಸಲ್ಲಿಸಬೇಕಾದ ಪಾಲನ್ನು ಕೂಡ ಕೇಂದ್ರ ನೀಡುವುದಿಲ್ಲ. ಈ ಅನ್ಯಾಯ ಪ್ರಶ್ನಿಸಿ ಕೇರಳ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳು ನ್ಯಾಯಾಲಯದ ಮೊರೆ ಹೋಗಿವೆ. ನಮ್ಮ ರಾಜ್ಯಕ್ಕೂ ಸಕಾಲಕ್ಕೆ ಮತ್ತು ನೀಡಬೇಕಾದ ಮೊತ್ತವನ್ನು ನೀಡದೇ ಇರುವುದರಿಂದ ಅದಕ್ಕಾಗಿ ಒತ್ತಾಯಿಸುವುದು ಮಾಮೂಲು ಎಂಬಂತಾಗಿದೆ. ಇದೆಲ್ಲದರ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತ ಸಾಗುತ್ತವೆ. ಈಗಲೂ ರಾಜ್ಯ ಸರ್ಕಾರ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಒಪ್ಪಿಸುವ ಮೊತ್ತಕ್ಕೆ ಅನುಗುಣವಾಗಿ ಅನುದಾನ ದೊರೆಯುವುದಿಲ್ಲ. ಆದರೆ ಕರ್ನಾಟಕ ಮಾತ್ರ ಈ ಕುರಿತು ಹೆಚ್ಚು ತಕರಾರು ಮಾಡುವುದಿಲ್ಲ. ಅದೇ ಪಕ್ಕದ ತಮಿಳುನಾಡು ದಿಟ್ಟವಾಗಿ ಈ ವಿಷಯ ಪ್ರಸ್ತಾಪಿಸುತ್ತದೆ.

ಇತ್ತೀಚೆಗೆ ಪ್ರಧಾನಿ ಅವರು ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸಾರ್ವಜನಿಕ ಸಭೆಯೊಂದು ನಡೆಯಿತು. ಅಲ್ಲಿ ಪ್ರಧಾನಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಅವರು ಮಾತನಾಡಿ, ತಮ್ಮ ರಾಜ್ಯವು ದೇಶದ ಒಟ್ಟಾರೆ ತೆರಿಗೆಯ ಶೇಕಡಾ 16ರಷ್ಟನ್ನು ಸಲ್ಲಿಸುತ್ತದೆ, ಆದರೆ ಕೇಂದ್ರದಿಂದ ಬರುವ ಅನುದಾನ ಶೇಕಡಾ ಒಂದಕ್ಕಿಂತ ಕಡಿಮೆ. ಇದರಲ್ಲಿ ಬದಲಾವಣೆ ಆಗಬೇಕು ಎಂದು ಒತ್ತಾಯಿಸಿದರು. ಹೀಗೆ ಪ್ರಧಾನಿ ಮುಂದೆ ಮಾತಾಡಿದ್ದು ಸರಿಯಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿಕೆ ನೀಡಿದಾಗ ರಾಜ್ಯದಾದ್ಯಂತ ತೀವ್ರ ಟೀಕೆಗೆ ಗುರಿಯಾದರು. ಎಲ್ಲ ರಂಗಗಳ ಜನರು ಅಣ್ಣಾಮಲೈಯನ್ನು ತರಾಟೆಗೆ ತೆಗೆದುಕೊಂಡರು. ನಮಗಾಗುತ್ತಿರುವ ಅನ್ಯಾಯವನ್ನು ಪ್ರಧಾನಿ ಮುಂದೆ ಹೇಳದೇ ಇನ್ಯಾರ ಮುಂದೆ ಹೇಳಬೇಕು. ಅದರಲ್ಲೂ ತಮ್ಮದು ನ್ಯಾಯಯುತ ಬೇಡಿಕೆ, ತಾವೇನೂ ಭಿಕ್ಷೆ ಕೇಳುತ್ತಿಲ್ಲ ಅಥವಾ ನಿಯಮ ಮೀರಿ ಸಹಾಯ ಮಾಡಿ ಎಂದೂ ಕೇಳುತ್ತಿಲ್ಲ. ಕೆಲವು ರಾಜಕೀಯ ಮುಖಂಡರಂತೂ ‘ನೀವು ಕರ್ನಾಟಕಕ್ಕೆ ಹೋಗಿ. ಅಲ್ಲಿ ನಿಮ್ಮ ಮಿತ್ರ ಸಿ.ಟಿ.ರವಿ ನಿಮ್ಮನ್ನು ಎತ್ತರಕ್ಕೆ ಏರಿಸಿ ಕೂರಿಸುತ್ತಾರೆ. ತಮಿಳು ಪ್ರಜೆಯಾಗಿ ಇಲ್ಲಿನ ಜನರ ಹಿತ ನೋಡದೇ ಪ್ರಧಾನಿ ಓಲೈಸುವ ನಿಮ್ಮ ನಿಲುವಿಗೆ ಧಿಕ್ಕಾರ ಇರಲಿ’ ಎಂದು ಝಾಡಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಹಾಗೆ ಕಟುವಾಗಿ ಟೀಕಿಸುವ ಕೆಲಸಕ್ಕೆ ಯಾರೂ ಮುಂದಾಗಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತ್ರ ಕೇಂದ್ರ ಕೊಡಬೇಕಿದ್ದ ಹಣ ಕೊಟ್ಟಿದೆ, ಅದಕ್ಕಾಗಿ ಈ ರೀತಿ ಡಂಗುರ ಸಾರುವ ಅಗತ್ಯ ಏನಿತ್ತು ಎಂದದ್ದನ್ನು ಬಿಟ್ಟರೆ ಉಳಿದವರಿಂದ ಅಂಥ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಿ ಅವರು ತಮಿಳುನಾಡಿಗೆ ಭೇಟಿ ನೀಡಿದ ನಂತರ ಅಲ್ಲಿನ ಬಿಜೆಪಿ ನಿಲುವನ್ನು ಬಹುಪಾಲು ಅಲ್ಲಿನ ಎಲ್ಲ ರಂಗಗಳ ನಾಯಕರು ಟೀಕಿಸಿದ್ದಾರೆ. ಅವರಿಗೆ ತಮ್ಮ ರಾಜ್ಯದ ಹಿತ ಮುಖ್ಯ. ತಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಣ ಇನ್ಯಾರನ್ನೋ ಮೆಚ್ಚಿಸಲು ಬಳಕೆ ಆಗುತ್ತಿದೆ, ಅದೂ ವ್ಯರ್ಥವಾಗಿ ಎಂಬ ಆಕ್ರೋಶ ಅಲ್ಲಿ ಕಾಣುತ್ತದೆ. ಹಾಗೆ ನೋಡಿದರೆ ತಮಿಳುನಾಡಲ್ಲಿ ಬಿಜೆಪಿಯ ಅಸ್ತಿತ್ವ ಇಲ್ಲ. ಆದರೆ ಕೇಂದ್ರದಲ್ಲಿ ಆ ಪಕ್ಷದ ಸರ್ಕಾರ ಇರುವುದರಿಂದ ಅಲ್ಲಿನ ಬಿಜೆಪಿ ಮುಖಂಡರು ತಾವೂ ತೀರಾ ಗಮನಾರ್ಹರು ಎಂದು ಭಾವಿಸಿದಂತಿದೆ. ತಮಿಳುನಾಡು ಎಲ್ಲ ಸಮಯದಲ್ಲೂ ಕೇಂದ್ರದ ಮೇಲೆ ಒತ್ತಡ ಹೇರಿಯೋ ಒಲಿಸಿಕೊಂಡೋ ತನ್ನ ರಾಜ್ಯಕ್ಕೆ ಲಾಭ ಮಾಡಿಕೊಳ್ಳುತ್ತ ಬಂದಿದೆ. ಆದರೀಗ ಒಲಿಸಿಕೊಳ್ಳುವುದು ಕಷ್ಟ. ಒತ್ತಾಯದಿಂದಲೇ ತನ್ನ ಕೆಲಸ ಸಾಧಿಸಿಕೊಳ್ಳಬೇಕು. ಅದರಲ್ಲೂ ಪ್ರಧಾನಿ ಎದುರಲ್ಲೇ ಸಮಸ್ಯೆ ಪ್ರಸ್ತಾಪಿಸುವುದು ಉಚಿತ ಎಂದು ಅಲ್ಲಿನ ಮುಖ್ಯಮಂತ್ರಿ ಭಾವಿಸುತ್ತಾರೆ. ಆದರೆ ನಮ್ಮ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಹಣಕಾಸು ಸಚಿವರು ಮಾತ್ರ ಕರ್ನಾಟಕದ ಬಗ್ಗೆ ಸದಾ ಮಲತಾಯಿ ಧೋರಣೆಯನ್ನೇ ಅನುಸರಿಸುತ್ತ ಬಂದಿದ್ದಾರೆ. ಅವರೀಗ ಪುನರಾಯ್ಕೆ ಬಯಸಿದ್ದು ರಾಜ್ಯದ ಯಾರೂ ಆ ಬಗ್ಗೆ ಗಟ್ಟಿ ದನಿಯಲ್ಲಿ ವಿರೋಧ ಮಾಡುತ್ತಿಲ್ಲ.

ಎಂಟು ವರ್ಷಗಳ ಅವಧಿಯಲ್ಲಿ ಬಿಜೆಪಿ ಏನು ಮಾಡಿದೆಯೋ ಬಿಟ್ಟಿದೆಯೋ ಎಂದು ನಿರ್ಧರಿಸುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ನಮ್ಮ ರಾಜ್ಯದ ರಾಜಕಾರಣಿಗಳು ಮಾತ್ರ ಇಲ್ಲಿನ ಜನರ ಹಿತಕ್ಕೆ ದುಡಿಯುವ ಬದಲು, ಕೇಂದ್ರದಲ್ಲಿರುವ ನಾಯಕರ ಸ್ತುತಿ ಮಾಡುವುದರಲ್ಲೇ ನಿರತರಾಗಿದ್ದಾರೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಸುಳ್ಳುಗಳನ್ನೇ ನಿಜ ಎಂದು ಜನರಿಗೆ ತೋರಿಸುವ ಯತ್ನ ಕಂಡೂ ಸಹ ಇವರೇಕೆ ಸುಮ್ಮನಿದ್ದಾರೆ. ಸುಳ್ಳು ಹೇಳುವ ಬಗ್ಗೆ ಲಜ್ಜೆ ಎನಿಸುವುದಿಲ್ಲವೇ? ಅಥವಾ ಜನ ಮೂರ್ಖರಿದ್ದು ತಾವು ಹೇಳಿದ್ದನ್ನಷ್ಟೇ ನಂಬುತ್ತಾರೆ ಎಂಬ ಭಂಡತನವೇ? ಈ ಕುರಿತಂತೆ ಬಿಜೆಪಿ ಶಾಸಕರು, ಮಂತ್ರಿಗಳು ಮತ್ತು ಅವರನ್ನು ಶತಾಯಗತಾಯ ಸಮರ್ಥಿಸಲು ಬದ್ಧರಾಗಿ ನಿಂತಿರುವವರು ತಮಗೆ ತಾವೇ ಸ್ವಲ್ಪ ಪ್ರಶ್ನಿಸಿಕೊಳ್ಳಬೇಕು. ಇದು ಆತ್ಮಗೌರವ ಮತ್ತು ಮನುಷ್ಯನ ಘನತೆಯ ಪ್ರಶ್ನೆ. ಅದನ್ನೂ ಮೀರಿ ತಾವು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತೇವೆ ಎಂಬುದೇ ಇವರ ನಿಲುವಾದರೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮುಂದುವರಿಯುವುದಂತೂ ಖಚಿತ.
-ಎ.ಬಿ.ಧಾರವಾಡಕರ

You might also like
Leave a comment