Please assign a menu to the primary menu location under menu

National

ಮುಖ್ಯ ನ್ಯಾಯಮೂರ್ತಿಯಾಗಿ ಉದಯ ಉಮೇಶ ಲಲಿತ್ ಪ್ರಮಾಣ ವಚನ 


ಹೊಸದಿಲ್ಲಿ, ೨೭: ನ್ಯಾಯಮೂರ್ತಿ ಉದಯ ಉಮೇಶ ಲಲಿತ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿ( ಸಿಜೆಐ)ಯಾಗಿ ಅಧಿಕಾರಿ ಸ್ವೀಕರಿಸಿದ್ದಾರೆ.

ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಲಿತ ಅವರಿಗೆ ಭಾರತದ ಪ್ರಮಾಣ ವಚನ ಬೋಧಿಸಿದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಜಗದೀಪ ಧಂಖರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಯು.ಯು.ಲಲಿತ​ ಅವರು ಆಗಸ್ಟ 26 ರಂದು ನಿವೃತ್ತರಾದ ನ್ಯಾಯಮೂರ್ತಿ ಎನ್​ ವಿ ರಮಣ ಅವರ ಸಿಜೆಐ ಸ್ಥಾನವನ್ನು ತುಂಬಿದ್ದಾರೆ. ಆದರೆ ಲಲಿತ ಅವರ ಅಧಿಕಾರವಧಿಯು 74 ದಿನಗಳ ಕಾಲ ಮಾತ್ರ ಆಗಿರಲಿದೆ. ನವೆಂಬರ್ 8 ರಂದು ಅವರು 65ನೇ ವರ್ಷಕ್ಕೆ ಕಾಲಿಡುತ್ತಿದ್ದು, ಹೀಗಾಗಿ ಅಧಿಕಾರದಿಂದ ನಿರ್ಗಮಿಸಲಿದ್ದಾರೆ. ಆ ಬಳಿಕ ಮತ್ತೊಬ್ಬ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ನ್ಯಾಯಮೂರ್ತಿ ಲಲಿತ ಅವರು ನಿವೃತ್ತರಾದ ನಂತರ, ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ನಿರೀಕ್ಷೆಯಿದೆ.

ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ನೂತನ ಸುಪ್ರೀಮ ಕೋರ್ಟ​ ಮುಖ್ಯ ನ್ಯಾಯಮೂರ್ತಿ ಲಲಿತ ಅವರು​, “ಸುಪ್ರೀಮ ಕೋರ್ಟ ಪಾತ್ರವು ಸ್ಪಷ್ಟತೆ, ಸ್ಥಿರತೆಯೊಂದಿಗೆ ಕಾನೂನನ್ನು ರೂಪಿಸುವುದು ಎಂದು ನಾನು ಯಾವಾಗಲೂ ನಂಬುತ್ತೇನೆ ಮತ್ತು ಅದನ್ನು ಮಾಡಲು ಉತ್ತಮ ಮಾರ್ಗವೆಂದರೆ ಸಾಧ್ಯವಾದಷ್ಟು ಬೇಗ ದೊಡ್ಡ ಪೀಠಗಳನ್ನು ಸ್ಥಾಪಿಸುವುದು. ಅಂತಹ ಪೀಠಗಳು ಸಮಸ್ಯೆಗಳನ್ನು ತಕ್ಷಣವೇ ಸ್ಪಷ್ಟಪಡಿಸುತ್ತವೆ” ಎಂದು ಹೇಳಿದರು.

ನ್ಯಾಯಮೂರ್ತಿ ಲಲಿತ ಅವರು ಸುಪ್ರೀಮ ಕೋರ್ಟನ ನ್ಯಾಯಾಧೀಶರಾಗುವ ಮೊದಲು ಹಿರಿಯ ವಕೀಲರಾಗಿದ್ದರು. ಅವರು ಆಗಸ್ಟ 13, 2014 ರಂದು ಸುಪ್ರೀಮ ಕೋರ್ಟನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ಲಲಿತ್ ಅವರು ನವೆಂಬರ್ 9, 1957 ರಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಜನಿಸಿದರು. ಅವರ ತಂದೆ ಯುಆರ್ ಲಲಿತ ಅವರು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿದ್ದರು ಮತ್ತು ಸುಪ್ರೀಮ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದರು. ನ್ಯಾಯಮೂರ್ತಿ ಲಲಿತ್ ಅವರು ಜೂನ್ 1983 ರಲ್ಲಿ ವಕೀಲರಾಗಿ ಸೇರಿಕೊಂಡರು. 1983 ರಿಂದ 1985 ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು.

ಅವರು ಜನವರಿ 1986ರಲ್ಲಿ ತಮ್ಮ ಅಭ್ಯಾಸವನ್ನು ದೆಹಲಿಗೆ ಬದಲಾಯಿಸಿದರು ಮತ್ತು ಏಪ್ರಿಲ್ 2004 ರಲ್ಲಿ ಅವರನ್ನು ಉನ್ನತ ನ್ಯಾಯಾಲಯವು ಹಿರಿಯ ವಕೀಲರಾಗಿ ನೇಮಿಸಿತು.

ಲಲಿತ ಅವರನ್ನು 2ಜಿ ತರಂಗಾಂತರ ಹಂಚಿಕೆ ಪ್ರಕರಣದ ವಿಚಾರಣೆ ನಡೆಸಲು ಸಿಬಿಐಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಗಿತ್ತು.

 


Samadarshi News

Leave a Reply