This is the title of the web page

ಸಾಮಾನ್ಯ ಫ್ರಿಡ್ಜ್ ನಲ್ಲಿಟ್ಟು ಲಸಿಕೆ ಬಳಸಿದ್ದೇ ಮಕ್ಕಳ ಸಾವಿಗೆ ಕಾರಣವೇ?

ಬೆಂಗಳೂರು, 18- ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎರಡು ಗ್ರಾಮಗಳಲ್ಲಿ ಇತ್ತೀಚಿಗೆ 10 ರಿಂದ 15 ತಿಂಗಳ ವಯಸ್ಸಿನ ಮೂರು ಶಿಶುಗಳು ರುಬೆಲ್ಲಾ ಲಸಿಕೆಯನ್ನು ಪಡೆದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದು ಕ್ರಿಮಿನಾಶಕವಲ್ಲದ ಸಿರಿಂಜ್‌ಗಳಿಂದ ಸೋಂಕು ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಜಿಲ್ಲಾ ಆರೋಗ್ಯ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದು, ಪ್ರಾಥಮಿಕ ಅಂಶಗಳ ಪ್ರಕಾರ ಓರ್ವ ನರ್ಸ ಹಾಗೂ ಫಾರ್ಮಸಿಸ್ಟ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.

ಬಳಸದೇ ಉಳಿದ ಲಸಿಕೆಯನ್ನು ಮನೆಗೆ ತೆಗೆದುಕೊಂಡು ಹೋಗಿ, ಮನೆಯ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಕೆ ಮಾಡಿದ್ದೇ ಈ ದುರಂತಕ್ಕೆ ಕಾರಣವೆನ್ನಲಾಗಿದೆ.

ಬಳಸದೇ ಉಳಿದ ಲಸಿಕೆಯನ್ನು ವೈದ್ಯಕೀಯ ನಿರ್ದಿಷ್ಟ ಶೀತ ಇರುವ ಫ್ರಿಡ್ಜ್ ನಲ್ಲಿಡಬೇಕು. ಗೃಹ ಬಳಕೆಯ ಫ್ರಿಡ್ಜ್ ನಲ್ಲಿಟ್ಟು ಮರುದಿನ ಮಕ್ಕಳಿಗೆ ಬಳಸಿದ್ದಕ್ಕೆ ಈ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದಡಾರ ಮತ್ತು ರೂಬೆಲ್ಲ ಲಸಿಕೆ ಹಾಕುವ ನರ್ಸ್ ಬಳಸದೇ ಉಳಿದ ಲಸಿಕೆ ರಾಮದುರ್ಗ ತಾಲೂಕಿನ ಮೆಡಿಕಲ್ ಅಂಗಡಿಗೆ ಹಿಂದಿರುಗಿಸದೇ ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಗೃಹ ಬಳಕೆಯ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಕೆ ಮಾಡಿರುವದಾಗಿ ಹೇಳಿಕೆ ನೀಡಿದ್ದಾರೆ.

ಎರಡು ಗ್ರಾಮಗಳ 20 ಕ್ಕೂ ಹೆಚ್ಚು ಶಿಶುಗಳು ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಸಿಕೆ ಹಾಕಿದ ಒಂದೆರಡು ದಿನದಲ್ಲಿ ಮೂರು ಶಿಶುಗಳು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬಿಮ್ಸ್) ಶನಿವಾರ ಮೃತಪಟ್ಟಿದೆ.

ಆಸ್ಪತ್ರೆಗೆ ದಾಖಲಾಗಿರುವ ಇನ್ನಿಬ್ಬರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಲಸಿಕೆಯ ಮಾದರಿಗಳನ್ನು ಕೇಂದ್ರ ಲಸಿಕೆ ಘಟಕಕ್ಕೆ ಕಳುಹಿಸಲಾಗಿದೆ ಮತ್ತು ಮೃತ ಮಕ್ಕಳ ಮೂತ್ರ, ಮಲ ಮತ್ತು ಒಳಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯಕೀಯ ಸಿಬ್ಬಂದಿಯ ಪ್ರಮಾದದಿಂದ ಮೂರು ಅಮೂಲ್ಯ ಜೀವಗಳು ಬಲಿಯಾಗಿದ್ದು ನಿಜವಾದ ಕಾರಣ ಜನರಿಗೆ ತಿಳಿಸುವುದು ಸರಕಾರದ ಜವಾಬ್ದಾರಿಯಾಗಿದೆ.

You might also like
Leave a comment