ಗೋಕಾಕ, ೧: ಆಟೋದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವಕ-ಯುವತಿಯ ಶವ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಸಿಕ್ಕಿದೆ.
ಸವದತ್ತಿ ತಾಲ್ಲೂಕಿನ ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ(28) ಮತ್ತು ರಂಜೀತಾ ಚೋಬಾರಿ(26) ಆತ್ಮಹತ್ಯೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗುತ್ತಿದ್ದು ಹದಿನೈದು ದಿನದ ಹಿಂದೆ ರಂಜೀತಾ ಅವರ ವಿವಾಹದ ನಿಶ್ಚಿತಾರ್ಥ ಬೇರೊಬ್ಬ ವ್ಯಕ್ತಿಯೊಂದಿಗೆ ಆಗಿತ್ತು. ಆದರೆ ಅವರಿಗೆ ಈ ವಿವಾಹ ಇಷ್ಟವಿರಲಿಲ್ಲ, ಈ ಕಾರಣಕ್ಕೆ ಅವರು ನೊಂದು ತಾವು ಪ್ರೀತಿಸುತ್ತಿದ್ದ ವ್ಯಕ್ತಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಯರಗಟ್ಟಿ ಸಮೀಪದಲ್ಲಿರುವ ಹಿರೇನಂದಿ ಗ್ರಾಮದ ಹೊರವಲಯದಲ್ಲಿ ಅವರ ಶವಗಳು ಸಿಕ್ಕಿವೆ. ಸೋಮವಾರ ರಾತ್ರಿ ಈ ಪ್ರೇಮಿಗಳು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ರಾಘವೇಂದ್ರ ಓಡಿಸುವ ಆಟೋ ರಿಕ್ಷಾದಲ್ಲಿ ನಿರ್ಜನ ಪ್ರದೇಶಕ್ಕೆ ಬಂದು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಶಂಕಿಸಿದ್ದಾರೆ. ಆಟೋದ ಮೇಲಿನ ಕಬ್ಬಿಣ ಸಲಾಖೆಗೆ ಹಗ್ಗ ಕಟ್ಟಿದ್ದು, ಇಬ್ಬರ ದೇಹಗಳೂ ಕಾಲು ಮುದುಡಿಕೊಂಡು ಕೆಳಗೆ ಇಳಿಬಿಟ್ಟಂಥ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆದರೆ ರಿಕ್ಷಾದಲ್ಲಿ ಹೇಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತಿದ್ದು ತನಿಖೆಯ ನಂತರವೇ ಸಾವಿನ ಖಚಿತ ಕಾರಣ ತಿಳಿದು ಬರಲಿದೆ.
ನಮ್ಮ ಸಹೋದರ ಪ್ರೀತಿಯ ವಿಚಾರವಾಗಿ ಮನೆಯಲ್ಲಿ ಏನೂ ಹೇಳಿಲ್ಲ. ಅವನು ಆಟೋ ಓಡಿಸುತ್ತಿದ್ದ. ಸೋಮವಾರ ಮಧ್ಯಾಹ್ನ ಆಟೋ ತೆಗೆದುಕೊಂಡು ಕೆಲಸಕ್ಕೆ ಹೋದವನು ಮತ್ತೆ ಮನೆಗೆ ಬಂದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಪೊಲೀಸರು ವಿಷಯ ತಿಳಿಸಿದಾಗಲೇ ಘಟನೆ ಗೊತ್ತಾಗಿದೆ. ಚಿಕ್ಕ ಆಟೋದಲ್ಲಿಯೇ ಇಬ್ಬರೂ ಹಗ್ಗದಿಂದ ನೇಣು ಹಾಕಿಕೊಂಡ ರೀತಿ ಪತ್ತೆಯಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ತಿಳಿಯುತ್ತಿಲ್ಲ. ಪೊಲೀಸರು ತನಿಖೆ ಮಾಡಬೇಕು ಎಂದು ರಾಘವೇಂದ್ರ ಅವರ ಸಹೋದರ ಸೋಮನಾಥ ಪತ್ರಿಕೆಗಳ ಎದುರು ಆಗ್ರಹಿಸಿದರು.