This is the title of the web page

ಇವಿಎಂ ಸಾಗಿಸುವ ಆರೋಪಕ್ಕೆ ವಾರಣಾಸಿ ಜಿಲ್ಲಾಡಳಿತದ ಸ್ಪಷ್ಟನೆ

ವಾರಣಾಸಿ, 8- ಟ್ರಕ್‌ನಲ್ಲಿ ಇವಿಎಂಗಳನ್ನು ಸಾಗಿಸುತ್ತಿರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಸಂಬಂಧ ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟರು ಸ್ಪಷ್ಟನೆ ನೀಡಿದೆ.

ಇವಿಎಂಗಳನ್ನು ಮತದಾನಕ್ಕೆ ಬಳಸಲಾಗುತ್ತಿಲ್ಲ. ಅವುಗಳನ್ನು “ಹ್ಯಾಂಡ್-ಆನ್ ತರಬೇತಿ”ಗಾಗಿ ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

“ಕೆಲವು ರಾಜಕೀಯ ಪಕ್ಷಗಳು” ವದಂತಿಗಳನ್ನು ಹರಡುತ್ತಿವೆ ಎಂದು ಆರೋಪಿಸಿದ ಜಿಲ್ಲಾಧಿಕಾರಿ ಕೌಶಲ್ ರಾಜ ಶರ್ಮಾ ಅವರು, ಚುನಾವಣೆಯಲ್ಲಿ ಬಳಸಿದ ಇವಿಎಂಗಳನ್ನು “ಸಿಆರ್‌ಪಿಎಫ್ ವಶದಲ್ಲಿರುವ ಸ್ಟ್ರಾಂಗ್ ರೂಮ್‌ನಲ್ಲಿ ಸೀಲ್ ಮಾಡಲಾಗಿದೆ. ಸಿಸಿಟಿವಿ ಕಣ್ಗಾವಲು ಇದೆ, ಅಲ್ಲದೇ ಇದನ್ನು ಎಲ್ಲಾ ಪಕ್ಷಗಳ ಸದಸ್ಯರು ಕಣ್ಗಾವಲು ಇಟ್ಟಿರುತ್ತಾರೆ,” ಎಂದು ಹೇಳಿದರು.

ಈ ಇವಿಎಂಗಳನ್ನು ಮಂಡಿ ಎಣಿಕೆ ಕೇಂದ್ರದಲ್ಲಿನ ಸಂಗ್ರಹಣೆ ಪ್ರದೇಶದಿಂದ ಸ್ಥಳೀಯ ಕಾಲೇಜಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಅಖಿಲೇಶ ಆರೋಪ :

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವುದಕ್ಕೆ ಎರಡು ದಿನಗಳು ಬಾಕಿ ಇರುವಂತೆ ವಾರಣಾಸಿ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಅನ್ನು ಕದ್ದುಕೊಂಡು ಹೋಗಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಸಮಾಜವಾದಿ ಪಕ್ಷವು ಪ್ರಬಲ ಪೈಪೋಟಿಯನ್ನು ಒಡ್ಡುತ್ತಿದೆ. ಇದರ ಮಧ್ಯೆ ಬಿಜೆಪಿಯು ರಾಜ್ಯದ ಕೆಲವು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇವಿಎಂ ಗಳನ್ನು ಕಳ್ಳತನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೇವಲ 5000 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಅಂಥ ಕ್ಷೇತ್ರಗಳನ್ನು ಗುರುತಿಸಿ ಅಲ್ಲಿ ಇವಿಎಂ ಅನ್ನು ಕದಿಯಲಾಗುತ್ತಿದೆ ಎಂದು ಅಖಿಲೇಶ ಯಾದವ ಆರೋಪಿಸಿದ್ದಾರೆ.

 

You might also like
Leave a comment