This is the title of the web page

ವ್ಯರ್ಥಾಲಾಪ

ರಾಜ್ಯ ವಿಧಾನ ಮಂಡಲ ಮತ್ತು ಸಂಸತ್ತಿನ ಉಭಯ ಸದನಗಳ ಅಧಿವೇಶನ ನಡೆಯುತ್ತಿದೆ. ರಾಜ್ಯದ ವಿಧಾನ ಮಂಡಲ ಅಧಿವೇಶನಕ್ಕೆ ಒಂದು ದಿನಕ್ಕೆ ಒಂದು ಕೋಟಿ ರೂಪಾಯಿ ಖರ್ಚಾಗುತ್ತದೆ ಎಂಬ ಅಂದಾಜಿದೆ. ಸಂಸತ್ತಿನ ಕಲಾಪದ ವೆಚ್ಚ ಇನ್ನೂ ಹೆಚ್ಚಾಗಿಯೇ ಇರುವುದು ಸಹಜ. ಹೀಗೆ ಮಾಡಿದ ವೆಚ್ಚ ಸಾರ್ಥಕ ಆಗುತ್ತಿದೆಯೇ? ಎಂಬ ಪ್ರಶ್ನೆಯನ್ನು ನಾಗರಿಕರೊಬ್ಬರು ಎತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿಯ ಬಿಟ್ಟಿರುವ ಅವರ ಮಾತುಗಳಲ್ಲಿ ‘ಕಲಾಪ ಎನ್ನುವುದೇ ಸಂಪೂರ್ಣ ನಿಷ್ಪ್ರಯೋಜಕ. ಇದು ಜನರ ದುಡ್ಡು ಹಾಳು ಮಾಡುವ ಕೆಲಸ ಅಷ್ಟೇ, ಜನರಿಗಂತೂ ಪ್ರಯೋಜನ ಇಲ್ಲ’ ಎಂದಿದ್ದಾರೆ.

ಇದು ಕೇವಲ ಯಾರೋ ಒಬ್ಬ ಸಾಮಾನ್ಯ ಪ್ರಜೆಯ ಅಭಿಪ್ರಾಯ ಅಲ್ಲ, ಬಹುಪಾಲು ಜನರ ಭಾವನೆಯೂ ಇದೇ ಆಗಿದೆ. ಮೊದಲು ಜನತಂತ್ರ ವ್ಯವಸ್ಥೆಯ ಸರ್ಕಾರಗಳು ನಮ್ಮಲ್ಲಿ ಅಸ್ತಿತ್ವಕ್ಕೆ ಬಂದಾಗ, ಕಲಾಪದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿದ್ದವು. ಎಲ್ಲ ಸದಸ್ಯರೂ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಮುಖ್ಯವಾಗಿ ವಿರೋಧಿಗಳ ನಿಲುವು ಸರಿ ಇದೆ ಎಂದಾಗ ಅದನ್ನು ಒಪ್ಪುವ ಸೌಜನ್ಯ ಸರ್ಕಾರ ನಡೆಸುವವರಲ್ಲಿ ಇರುತ್ತಿತ್ತು. ಸ್ವಲ್ಪ ದಿನಗಳ ನಂತರ ವಿರೋಧ ಪಕ್ಷಗಳ ಮಾತಿಗೆ ಬೆಲೆ ಇಲ್ಲ ಎನ್ನುವಂತೆ ಸರ್ಕಾರಗಳು ವರ್ತಿಸಲು ತೊಡಗಿದಾಗ ಅಥವಾ ತನ್ನ ನಿಲುವನ್ನು ಸರ್ಕಾರ ನಡೆಸುವ ಪಕ್ಷ ಪಟ್ಟು ಹಿಡಿದು ಸಮರ್ಥಿಸಿಕೊಳ್ಳಲು ತೊಡಗಿದಾಗ ಗದ್ದಲ, ಗಲಾಟೆಗಳು ನಡೆಯುತ್ತಿದ್ದವು. ಇನ್ನು ಹಲವು ಸಂದರ್ಭಗಳಲ್ಲಿ ಸದಸ್ಯರು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಚರ್ಚೆಯ ಬಿಸಿ ಏರುತ್ತಿತ್ತು. ಎಷ್ಟೋ ಕಲಾಪ ಸಮಯದಲ್ಲಿ ಪೀಠೋಪಕರಣ ಧ್ವಂಸ ಆಗಿದ್ದು, ಮಹಿಳಾ ಸದಸ್ಯೆಯೊಬ್ಬರ ವಸ್ತ್ರಾಪಹರಣದ ಯತ್ನ ನಡೆದಿದ್ದನ್ನೂ ನಾವು ಗಮನಿಸಿದ್ದೇವೆ. ಆದರೆ ಇಂಥ ಸಿಟ್ಟು, ಕೋಪ ಪ್ರದರ್ಶನದಿಂದ ಜನರಿಗೆ ಏನಾದರೂ ಒಳ್ಳೆಯದು ಆಗಿದೆಯೇ ಎಂದು ನೋಡಿದರೆ, ಇಲ್ಲ ಎಂಬುದೇ ಉತ್ತರ.

ನಮ್ಮದೇ ರಾಜ್ಯದ ಮುಂಗಡಪತ್ರ ಅಧಿವೇಶನದ ಮೊದಲ ಭಾಗದಲ್ಲಿ ವಿರೋಧ ಪಕ್ಷಗಳು ಸಚಿವರೊಬ್ಬರ ರಾಜೀನಾಮೆಗೆ ಪಟ್ಟು ಹಿಡಿದು ಕಲಾಪವೇ ನಡೆಯದಂತೆ ವರ್ತಿಸಿದರು. ಆದರೂ ಸರ್ಕಾರ ತನಗೆ ಬೇಕಿದ್ದ ಬಿಲ್‍ಗಳಿಗೆ ಸದನದ ಒಪ್ಪಿಗೆಯನ್ನು ಗದ್ದಲದ ನಡುವೆಯೇ ಪಡೆದುಕೊಂಡು ಕಲಾಪ ಮುಗಿಯಿತು ಎಂದು ಸಾರಿತು. ಕಲಾಪದ ಕೊನೆಯ ದಿನ ಶಾಸಕರು, ಸಚಿವರ ವೇತನ ಏರಿಕೆ ಪ್ರಸ್ತಾಪ ಮಂಡನೆ ಆದಾಗ, ಒಬ್ಬನೇ ಒಬ್ಬ ಸದಸ್ಯನೂ ಇದರ ವಿರುದ್ಧ ದನಿ ಎತ್ತಲಿಲ್ಲ. ಅಂಗನವಾಡಿ ಕಾರ್ಯಕರ್ತರಿಗೆ, ಶಾಲೆಗಳ ಬಿಸಿಯೂಟಕ್ಕೆ ಅಡುಗೆ ಮಾಡುವವರಿಗೆ ನೀಡುವ ವೇತನವು ಸರ್ಕಾರವೇ ನಿಗದಿ ಮಾಡಿದ ಕನಿಷ್ಠ ದಿನಗೂಲಿ ದರಕ್ಕಿಂತ ತೀರಾ ಕಡಿಮೆ ಇದೆ ಎಂದು ಯಾವೊಬ್ಬ ಶಾಸಕನೂ ಬೆರಳು ಮಾಡಿ ತೋರಿಸಲಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ವೇತನ ಹೆಚ್ಚಳ ಮತ್ತು ಸಮಯಕ್ಕೆ ಸರಿಯಾಗಿ ವೇತನ ನೀಡುವಂತೆ ಅಗ್ರಹಿಸಿ ಮುಷ್ಕರ ನಡೆಸುತ್ತಿದ್ದುದು ಕೂಡ ಪ್ರಸ್ತಾಪ ಆಗಲಿಲ್ಲ. ಶಾಸಕರು, ಸಚಿವರು ತಮಗೆ ಬೇಕಾದ್ದು ಮಾಡಿಕೊಂಡರು. ಆದರೆ ಜನರ ಸಮಸ್ಯೆ ಸರ್ಕಾರದ ಗಮನಕ್ಕೆ ತರಲು ಕಲಾಪದ ವೇಳೆ ಪ್ರಯತ್ನಿಸಬೇಕು ಎಂದು ಯಾರಿಗೂ ಅನ್ನಿಸುವುದೇ ಇಲ್ಲ, ಏಕೆಂದರೆ ಅವರ್ಯಾರಿಗೂ ಜನರ ಸಮಸ್ಯೆ ಏನು ಎನ್ನುವುದೇ ತಿಳಿದಿರುವುದಿಲ್ಲ. ತಿಳಿದಿದ್ದರೂ ಆ ಬಗ್ಗೆ ಗಂಭೀರ ಚಿಂತನೆ ಮಾಡುವುದೇ ಇಲ್ಲ.

ಸರ್ಕಾರದ ಎಲ್ಲ ಕೆಲಸಗಳಿಗೂ ಹೊರ ಗುತ್ತಿಗೆ ಅಶ್ರಯಿಸುತ್ತಿರುವುದರಿಂದ ಯುವಕರ ಆರಂಭಿಕ ದಿನಗಳ ಚೈತನ್ಯ ಸರಿಯಾಗಿ ಬಳಕೆ ಆಗುತ್ತಿಲ್ಲ ಮತ್ತು ಅವರ ದುಡಿಮೆಗೆ ತಕ್ಕ ವೇತನ ದೊರಕುತ್ತಿಲ್ಲ. ಒಂದು ಹಂತ ದಾಟಿದ ಮೇಲೆ ಅವರ ಜೀವನಕ್ಕೆ ದಾರಿ ಏನು ಎಂಬುದು ಕೂಡ ಸರ್ಕಾರ ನಡೆಸುವವರು ಮತ್ತು ಅವರನ್ನು ಎಚ್ಚರಿಸಬೇಕಾದವರು ಯೋಚನೆ ಮಾಡಲು ಕೂಡ ಹೋಗುತ್ತಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ನಿರುದ್ಯೋಗಿ ಯುವಕರ ಜೊತೆ ನಿರುದ್ಯೋಗಿ ವಯಸ್ಕರೂ ಸೇರಿಕೊಳ್ಳುತ್ತಾರೆ ಅಷ್ಟೆ.

ಈ ಸಂದರ್ಭದಲ್ಲಿ ಸರ್ಕಾರಕ್ಕೆ ನೀತಿ ನಿಯಮಗಳ ಸಾಧಕ ಬಾಧಕಗಳನ್ನು ತಿಳಿಸಿ, ಜನರಿಗೆ ಒಳ್ಳೆಯದನ್ನು ಮಾಡಬೇಕಾದ ಅಧಿಕಾರಿಗಳು ಇಡೀ ಸರ್ಕಾರವನ್ನೇ ದಿಕ್ಕು ತಪ್ಪಿಸಿ, ತಾವು ಲಾಭ ಮಾಡಿಕೊಳ್ಳಲು ದಾರಿ ಹುಡುಕುತ್ತಿರುತ್ತಾರೆ. ಇಂಥದೊಂದು ಆದೇಶ ಹೊರಡಿಸಿ ಎಂದು ಸಚಿವರು ಹೇಳಿದರೂ ಹಾಗೆ ಮಾಡಲು ನಿಯಮದಲ್ಲಿ ಅವಕಾಶ ಇಲ್ಲ ಎಂದು ಕ್ಯಾತೆ ತೆಗೆಯುತ್ತಾರೆ. ಹಿಂದೆ ಗುಂಡೂರಾವ ಮುಖ್ಯಮಂತ್ರಿ ಆಗಿದ್ದಾಗ ಪ್ರತಿ ಬಾರಿ ಇಂಥ ವಿವರಣೆ ಕೇಳಿ ಬೇಸತ್ತ ಅವರು, ಜನರಿಗೆ ಒಳ್ಳೆಯದು ಮಾಡುವುದಕ್ಕೆ ಕಾನೂನು, ನಿಯಮ ಅಡ್ಡಿ ಆಗುವುದಾದರೆ, ಅವೆಲ್ಲ ತಿದ್ದಿ ನನ್ನ ಹತ್ತಿರ ತಗೊಂಡು ಬನ್ನಿ, ಅವೆಲ್ಲ ಜಾರಿ ಆಗುವಂತೆ ಆದೇಶ ಹೊರಡಿಸುತ್ತೇನೆ ಎಂದಿದ್ದರು. ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಕೆಲಸ ಮಾಡಿಸುವ ಮಂತ್ರಿಗಳು, ಮುಖ್ಯಮಂತ್ರಿಗಳು ನಮ್ಮಲ್ಲಿ ತೀರಾ ಕಡಿಮೆ.

ಸರ್ಕಾರದ ಪ್ರತಿ ನಡೆಗೂ ವಿಧಾನ ಮಂಡಲ ಅಥವಾ ಸಂಸತ್ತಿನ ಒಪ್ಪಿಗೆ ಬೇಕು. ಆದರೆ ಎಷ್ಟೋ ಸಂದರ್ಭಗಳಲ್ಲಿ ಜನರ ಅಗತ್ಯ ಪರಿಗಣಿಸಿ; ಮುಖ್ಯಮಂತ್ರಿಯೋ, ಪ್ರಧಾನಿಯೋ ವಿವೇಚನೆಯಿಂದ ನಿರ್ಣಯ ತೆಗೆದುಕೊಳ್ಳಲು ಅವಕಾಶ ಇದೆ. ಇದನ್ನು ದುರುಪಯೋಗ ಮಾಡಿಕೊಳ್ಳುವುದೇ ಹೆಚ್ಚು. ಒಟ್ಟಿನಲ್ಲಿ ಸದನದ ಮರ್ಜಿಗಿಂತ ಹೆಚ್ಚಾಗಿ ಸರ್ಕಾರದ, ಇನ್ನೂ ನಿಖರವಾಗಿ ಹೇಳಬೇಕಾದರೆ ಸರ್ಕಾರದ ಮುಂದಾಳುವಿನ ಮರ್ಜಿಯಂತೆಯೇ ಕೆಲಸ ಕಾರ್ಯಗಳು ನಡೆಯುತ್ತವೆ. ಹೀಗಿರುವಾಗ ದಿನಕ್ಕೆ ಕೋಟಿ ರೂಪಾಯಿ ಖರ್ಚು ಮಾಡಿ ಶಾಸಕರು, ಸಚಿವರು ಬೈದಾಡಿಕೊಳ್ಳಲು ಅಖಾಡ ಸೃಜಿಸುವುದು ಎಷ್ಟು ಸರಿ. ಇದು ಬದಲಾಗಲು ಏನು ಮಾಡಬೇಕು ಎಂದು ಯೋಚಿಸುವ ಕಾಲ ಬಂದಿದೆ.
-ಎ.ಬಿ.ಧಾರವಾಡಕರ

You might also like
Leave a comment