This is the title of the web page

ನಿವೃತ್ತಿ ಹೊಂದಿದ ಶೌರ್ಯ ಚಕ್ರ ಪ್ರಶಸ್ತಿ ಪಡೆದ ಕಾರ್ಗಿಲ್ ಯೋಧನಿಗೆ ಅದ್ಧೂರಿಯ ಸ್ವಾಗತ

ಬೆಳಗಾವಿ, 4-  ಕಾರ್ಗಿಲ್ ಯುದ್ಧದಲ್ಲಿ ಮೂವರು ವೈರಿ ಸೈನಿಕರನ್ನು ಹತ್ಯೆ ಮಾಡಿ ಅಪ್ರತಿಮ ಶೌರ್ಯ ಮೆರೆದಿದ್ದ ಬೆಳಗಾವಿ ಜಿಲ್ಲೆಯ ವೀರ ಯೋಧ ಬಸಪ್ಪ ರಾಚಪ್ಪ ಮುಗಳಿಹಾಳ ಅವರು ಸೇವೆಯಿಂದ ನಿವೃತ್ತಿಗೊಂಡು ಮೊದಲನೇ ಸಲ ತವರು ಜಿಲ್ಲೆಗೆ ಬುಧವಾರ ಆಗಮಿಸಿದಾಗ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ರೈಲ್ವೆ ನಿಲ್ದಾಣದಿಂದ ತೆರೆದ ಜೀಪ್ ನಲ್ಲಿ ಮೆರವಣಿಗೆಯಲ್ಲಿ ರಾಣಿ ಚನ್ನಮ್ಮ ಸರ್ಕಲ್ ಗೆ ತಲುಪಿದ ಅವರು ಚನ್ನಮ್ಮ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವಿಸಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ತಾವು ಪಾಕಿಸ್ತಾನದ ಮೂವರು ವೈರಿಗಳನ್ನು ಹತ್ಯೆ ಮಾಡಿದ್ದರು. ಮೂರನೇಯ ಉಗ್ರನನ್ನು ಅವನದೇ ಬಂದೂಕಿನಿಂದ ಹತ್ಯೆ ಮಾಡಿದ ತಮಗೆ “ಶೌರ್ಯ ಚಕ್ರ” ಪ್ರಶಸ್ತಿ ದೊರೆತಿದೆ ಎಂದರು. ಆಗಿನ ರಾಷ್ಟ್ರಪತಿ ಕೆಆರ್ ನಾರಾಯಣನ್ ಮುಗಳಿಹಾಳ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು.

28 ವರುಷ ಸೇನೆಯಲ್ಲಿದ್ದ ಅವರು ಜಾಮ ನಗರ, ಅಸ್ಸಾಂ, ಬಿಕನಾರ್, ಉತ್ತರಾಖಂಡ, ಕಾರ್ಗಿಲ್ ಸೇರಿದಂತೆ ಬೆಳಗಾವಿಯಲ್ಲೂ ಆರು ವರ್ಷ ಸೇವೆ ಸಲ್ಲಿಸಿದ್ದಾರೆ. ಬಸಪ್ಪ ಮುಗಳಿಹಾಳ ಅವರು ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಗ್ರಾಮದವರು.

ಕಾರ್ಗಿಲ್ ಯುದ್ಧದಲ್ಲಿ ತಮ್ಮ ಕೆಲವು ಸಹಪಾಠಿಗಳನ್ನು ಕಳೆದುಕೊಂಡಿರುವದಾಗಿ ತಿಳಿಸಿದ ಅವರು, ಯುದ್ಧ ಇನ್ನಷ್ಟು ದಿನ ಮುಂದುವರೆದಿದ್ದರೆ ಸಂಪೂರ್ಣ ವೈರಿ ಪಡೆಯನ್ನೇ ನಿರ್ಮೂಲ ಮಾಡುತ್ತಿದುದ್ದಾಗಿ ತಿಳಿಸಿದರು.

ರಾಣಿ ಚನ್ನಮ್ಮ ವೃತ್ತದಲ್ಲಿ ಬೆಳಗಾವಿ ಸಂಸದರಾದ ಮಂಗಳಾ ಅಂಗಡಿ ಸೇರಿದಂತೆ ಹಲವರು ಮುಗಳಿಹಾಳ ಅವರನ್ನು ಸ್ವಾಗತಿಸಿದರು.

You might also like
Leave a comment