This is the title of the web page

ಬೆಳಗಾವಿ ಘಟನೆಗಳಿಗೆ ಪೂರ್ಣವಿರಾಮ ಯಾವಾಗ?

ಕೊಲ್ಹಾಪುರದಲ್ಲಿ ಕನ್ನಡ ಬಾವುಟ ಸುಟ್ಟ ನಂತರ ಈಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿಯಲ್ಲಿ ಕನ್ನಡ ಧ್ವಜ ಸುಡಲಾಗಿದೆ. ಅದರಂತೆ, ದಯವಿಲ್ಲದ ಧರ್ಮವಲ್ಲ ಎಂದು ಸಾರಿ ಸಕಲ ಜೀವಾತ್ಮಗಳಿಗೆ ಲೇಸು ಬಯಸಿದ ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿಯಲಾಗಿದೆ!. ಈ ನಡುವೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ದುಷ್ಕರ್ಮಿಗಳು ಬೆಳಗಾವಿಯಲ್ಲಿ ಧ್ವಂಸ ಮಾಡಿದ್ದಾರೆ. ಕೆಲವು ಕನ್ನಡ ಪರ ಜನ ಈ ಸಂದರ್ಭದಲ್ಲಿ ಸಹಜವಾಗಿಯೇ ಭಾವಾವೇಶದಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಹೆಣ ಬಿದ್ದಾಗಲೇ ಎಂಬ ಮಾತಿದೆ. ಉಳಿದಂತೆ ‘ಸಬ್ ಚಲ್ತಾ ಹೈ’ ಎನ್ನುವ ಧೋರಣೆ. ತಮಾಷೆ ನೋಡುವ ಜನ ಕೆಲವು ಸಂದರ್ಭಗಳನ್ನು ಬಳಸಿಕೊಂಡು ತಮ್ಮ ಹುಚ್ಚಾಟ ಮೆರೆದು ಸಮಾಜದ ಶಾಂತಿ ಕದಡಿ, ವಿಕೃತ ಸಂತೋಷ ಪಡೆಯುತ್ತಾರೆ. ಅಧಿವೇಶನ ನಡೆಯುವ ಸಮಯಕ್ಕೆ ಮಹಾಮೇಳ ನಡೆಸುವ ತುರ್ತು ಏನಿತ್ತು. ಅದಕ್ಕೆ ಅನುಮತಿ ನೀಡಿರದ ಪೊಲೀಸರು, ಅದು ನಡೆಯಲು ಬಿಟ್ಟಿದ್ದಾದರೂ ಏಕೆ? ಎಂಬೆಲ್ಲ ಪ್ರಶ್ನೆಗಳು ಹುಟ್ಟುತ್ತವೆ. ಏಕೆಂದರೆ ಈ ಮಹಾ ಮೇಳದಿಂದಲೇ ಮುಂದಿನ ಎಲ್ಲ ಘಟನೆಗಳೂ ಸಂಭವಿಸಿದವು. ಕನ್ನಡ ಪರ ಯುವಕನೊಬ್ಬ ಮರಾಠಿಗರ ದಳವಿ ಅವರ ಮುಖಕ್ಕೆ ಮಸಿ ಬಳಿಯುವುದರೊಂದಿಗೆ ಇದು ಮುಕ್ತಾಯ ಕಾಣಬೇಕಿತ್ತು. ಆದರೆ ಈ ಘಟನೆಗೆ ಪ್ರತಿಯಾಗಿ ಕೊಲ್ಹಾಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುವ ಪ್ರಕ್ರಿಯೆ ನಡೆಯಿತು.

ನಮ್ಮಲ್ಲಿ ಸ್ವಲ್ಪ ಚುರುಕಾಗಿ ನಿರ್ಧಾರ ಕೈಗೊಂಡು ಕೆಲಸ ಮಾಡಿದ್ದರೆ ಇಂಥ ಅವಘಡಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ಅನುಮತಿ ಇಲ್ಲದಿದ್ದರೂ ಮಹಾ ಮೇಳ ಸಂಘಟಿಸಿದವರನ್ನು ಹಿಡಿದು ಒಳಗೆ ತಳ್ಳಿದ್ದರೆ ಕತೆ ಮುಗಿಯುತ್ತಿತ್ತು. ಆದರೆ ಇರಲಿ ಬಿಡಿ ಎಂದು ಬಿಟ್ಟ ಪೊಲೀಸರು ಮತ್ತೊಂದು ದುರ್ಘಟನೆಗೆ ನಾಂದಿ ಹಾಡಿದರು. ಬೆಳಗಾವಿಯ ಮಸಿ ಬಳಿದ ಘಟನೆ ನಡೆದ ಮೇಲೆಯಾದರೂ ಪೊಲೀಸರು ಎಚ್ಚೆತ್ತು ವರ್ತಿಸಬಹುದಿತ್ತು. ಮೊನ್ನೆಯ ದಿನ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ ಅವರು ನಡೆದುಕೊಂಡ ರೀತಿ ನೋಡಿದರೆ, ಮೇಲಿನವರನ್ನು ಓಲೈಸುವ ಸ್ಪಷ್ಟ ಸಾಕ್ಷಿ ಕಾಣುತ್ತಿತ್ತು. ಅಷ್ಟು ದೊಡ್ಡ ಕಾಂಗ್ರೆಸ್ ಪ್ರತಿಭಟನೆಯನ್ನೇ ಮೂರು ತಾಸು ತಡೆಹಿಡಿದ ಇದೇ ಪೊಲೀಸರಿಗೆ ಮಹಾಮೇಳ ನಡೆಯದಂತೆ ತಡೆಯಲು ಬರುತ್ತಿರಲಿಲ್ಲವೇ? ಕೆಲವೊಮ್ಮೆ ಸ್ಥಳೀಯ ಸಂಗತಿಗಳ ವಿಚಾರದಲ್ಲಿ ಮೇಲಿನ ಅಧಿಕಾರಿಗಳು ಕುರುಡಾಗಿ ವರ್ತಿಸುತ್ತಾರೆ ಇಲ್ಲವೇ ಅವರಿಗೆ ಈ ಪರಿಸರ ಮತ್ತು ಇಲ್ಲಿನ ಸ್ಥಿತಿ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ಇದ್ದರೂ ತಮ್ಮ ಬಲದ ಮುಂದೆ ಎಲ್ಲ ನಿಕೃಷ್ಟ ಎಂದು ಭಾವಿಸುವುದೂ ಇದೆ. ಇದರಿಂದಾಗಿ ಹಲವಾರು ಸಂದರ್ಭಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದ ಉದಾಹರಣೆ ಇದೆ. ಇದೇ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಗ್ರಹಿಸುವುದಕ್ಕೆ ಸೂಕ್ತ ಅಲ್ಲದ ವ್ಯಕ್ತಿ ಗೃಹ ಸಚಿವ ಆಗಿರುವುದೂ ಮತ್ತೊಂದು ದುರಂತ.

ಹೊಲಿಗೆ ಹಾಕಿ ವಾಸಿ ಮಾಡಬೇಕಾದ ಗಾಯಕ್ಕೆ ಕೇವಲ ಪ್ಲಾಸ್ಟರ್ ಹಾಕಿ ಪರಿಸ್ಥಿತಿ ನಿಭಾಯಿಸುತ್ತಾ ಬಂದಿರುವುದರಿಂದಲೇ ಬೆಳಗಾವಿಯಲ್ಲಿ ಮತ್ತೆ ಮತ್ತೆ ಸಮಸ್ಯೆಗಳ ಪುನರಾವರ್ತನೆ ಆಗುವುದನ್ನು ಕಾಣುತ್ತಿದ್ದೇವೆ. ಬೆಳಗಾವಿಯ ಮರಾಠಿಗರು ಸ್ನೇಹಶೀಲರು. ಆದರೆ, ಕೆಲವು ನಾಯಕಮಣಿಗಳಿಗೆ ಈ ಸೌಹಾರ್ದ ಬೇಕಿಲ್ಲ. ಜನರ ಮಧ್ಯೆ ಬೆಂಕಿ ಹಚ್ಚಿ ತಮ್ಮ ಮೈ ಕಾಯಿಸಿಕೊಳ್ಳುವ ಹುನ್ನಾರದಲ್ಲಿ ಏನಾದರೊಂದು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪೂರ್ಣ ವಿರಾಮ ಕಲ್ಪಿಸದೇ ಇದ್ದಲ್ಲಿ ಬೆಳಗಾವಿಯಲ್ಲಿ ಮತ್ತೆ ಮತ್ತೆ ಕಹಿ ಪ್ರಸಂಗಗಳು ನಡೆಯುತ್ತವೆ. ಇದಕ್ಕೆ ಪ್ರತಿಯಾಗಿ, ತಮ್ಮ ಮೇಲೆ ಏನೂ ಕ್ರಮ ಕೈಗೊಳ್ಳುವುದು ಸಾಧ್ಯ ಇಲ್ಲ ಎಂದು ಗಡಿಯಾಚೆಗಿನ ದುಷ್ಟ ಶಕ್ತಿಗಳು ಹದ್ದು ಮೀರಿ ವರ್ತಿಸುತ್ತವೆ.

ಮಹಾರಾಷ್ಟ್ರ ರಾಜ್ಯದ ಕೆಲ ನಗರಗಳಲ್ಲಿ ಕನ್ನಡಿಗರು ಬಹು ಸಂಖ್ಯೆಯಲ್ಲಿದ್ದರೂ ಅಲ್ಲಿ ಅವರು ಯಾವುದೇ ವಿವಾದಗಳನ್ನು ಸೃಷ್ಟಿಸದೇ ಅಲ್ಲಿನ ಭಾಷೆ, ಸಂಸ್ಕøತಿಯೊಂದಿಗೆ ಬೆರೆತು ದಶಕಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಇರುವ ಮರಾಠಿ ಜನ ಸಹ ಅದನ್ನೇ ಅನುಸರಿಸಿ ಯಾವುದೇ ಉಸಾಬರಿಯಲ್ಲಿ ತೊಡಗದಂತೆ ನೋಡಿಕೊಳ್ಳಬೇಕು. ಅದರಂತೆ ಬಾವುಟದ ಪ್ರಸಂಗಕ್ಕೆ ಭಾವುಕವಾಗಿ ಪ್ರತಿಕ್ರಿಯೆ ನೀಡುತ್ತಿರುವ ಕನ್ನಡದ ಹುಡುಗರು ಹೆಚ್ಚಿನ ಅನಾಹುತ ನಡೆಸದಂತೆ ನೋಡಿಕೊಳ್ಳುವ ಮತ್ತು ಗಡಿಯಾಚೆಗಿನ ಮರಾಠಿಗರು ಔಚಿತ್ಯ ಮೀರಿ ವರ್ತಿಸುವುದನ್ನು ತಡೆಯುವ ದಿಶೆಯಲ್ಲಿ ರಾಜ್ಯ ಮತ್ತು ಬೆಳಗಾವಿ ಆಡಳಿತ ಮುಂದಾಗಬೇಕಿದೆ.

-ಎ.ಬಿ.ಧಾರವಾಡಕರ
ಸಂಪಾದಕ

You might also like
Leave a comment