This is the title of the web page

ಜಮೀನು ಮಾರಾಟ ಸಂಬಂಧ ಗಂಡ-ಹೆಂಡತಿ ಜಗಳ; ಪುಟ್ಟ ಮಕ್ಕಳಿಗೆ ವಿಷವುಣಿಸಿದ ತಂದೆ

 

ವಿಜಯಪುರ, ೧೦- ತಮ್ಮ ಬದುಕಿಗೆ ಆಧಾರವಾಗಿರುವ ಕೃಷಿ ಜಮೀನು ಮಾರಾಟ ಮಾಡಲು ಪತ್ನಿ ಒಪ್ಪಿಗೆ ಕೊಡದಿದ್ದುದರಿಂದ ಕೋಪಗೊಂಡ ಪತಿ ಮಹಾಶಯನೊಬ್ಬ ತನ್ನಿಬ್ಬರು ಅಮಾಯಕ ಪುಟ್ಟ ಮಕ್ಕಳಿಗೆ ವಿಷವುಣಿಸಿದ ದಾರುಣ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.

ವಿಷದ ಆಹಾರವುಂಡ ಎರಡೂವರೆ ವರ್ಷದ ದುರ್ದೈವಿ ಮಗು ಸಾವಿಗೀಡಾಗಿದ್ದು, ಐದು ವರ್ಷದ ಮಗಳು ತೀವ್ರ ಅಸ್ವಸ್ಥಳಾಗಿದ್ದಾಳೆ.

ಗೋನಾಳ ಗ್ರಾಮದ ಚಂದ್ರಶೇಖರ ಅಗಸನಾಳ ಎಂಬವ ವಿವಿಧ ಕಾರಣಕ್ಕೆ ತುಂಬಾ ಸಾಲ ಮಾಡಿಕೊಂಡಿದ್ದ, ಸಾಲ ತೀರಿಸಲೆಂದು ತನ್ನ ಊರಾದ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದಲ್ಲಿದ್ದ ತನ್ನ ಹೊಲವನ್ನು ಮಾರಲು ಮುಂದಾಗಿದ್ದ. ಇದಕ್ಕೆ ಪತ್ನಿ ಸಾವಿತ್ರಿ ಒಪ್ಪದೇ ವಿರೋಧ ವ್ಯಕ್ತಪಡಿಸಿದ್ದಳು. ಇದೇ ವಿಚಾರಕ್ಕೆ ಜಗಳ ಮಾಡಿದ್ದ ಸಾವಿತ್ರಿ ತವರು ಮನೆಗೆ ಹೋಗಿದ್ದಳು. ಅಲ್ಲಿಗೂ ಹೋಗಿ ಚಂದ್ರಶೇಖರ ಸಾವಿತ್ರಿಯ ಮನವೊಲಿಸಲು ಪ್ರಯತ್ನಿಸಿದ್ದ.

ಎಷ್ಟೇ ವಿನಂತಿಸಿದರೂ ಪತ್ನಿ ಒಪ್ಪದೇ ಇದ್ದಾಗ ಹೊರಗೆ ಹೋಗಿ ಎಗ್ ರೈಸ್ ಪಾರ್ಸಲ್ ತೆಗೆದುಕೊಂಡು ಬಂದು ಅದರಲ್ಲಿ ಎಂತಹದೋ ವಿಷ ಬೆರೆಸಿ ಮಕ್ಕಳಾದ
ಶಿವರಾಜ ಹಾಗೂ ರೇಣುಕಾಗೆ ತಿನ್ನಲು ಕೊಟ್ಟು ಮನೆಯಿಂದ ಹೊರಟು ಹೋಗಿದ್ದಾನೆ.
ಊಟ ಮಾಡುತ್ತಿರುವಾಗಲೇ ಮಕ್ಕಳು ಅಸ್ವಸ್ಥಗೊಂಡಿವೆ. ತಾಯಿ ಸಾವಿತ್ರಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದಳಾದರೂ ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗ ಶಿವರಾಜ ಮೃತಪಟ್ಟಿದ್ದು, ರೇಣುಕಾಗೆ ಚಿಕಿತ್ಸೆ ನೀಡಲಾಗುತ್ತಿದೆ.

You might also like
Leave a comment