This is the title of the web page

ಈ ಗ್ರಾಮದ ಮನೆಗಳಿಗೆ ಮಹಿಳೆಯರೇ ಮಾಲೀಕರು

ಔರಂಗಾಬಾದ, 8- ಬಕಪುರ, ಮಹಾರಾಷ್ಟ್ರದ ಸುಮಾರು 2,000 ನಿವಾಸಿಗಳನ್ನು ಹೊಂದಿರುವ ಪುಟ್ಟ ಗ್ರಾಮ. ಅಲ್ಲಿನ ಪ್ರತಿಯೊಂದು ಮನೆಗಳಿಗೆ ಮಹಿಳೆಯರೇ ಮಾಲೀಕರು. ಪ್ರತಿಯೊಂದು ಮನೆಯ ಮುಂದೆ ಅವರದೇ ಹೆಸರಿನ ನಾಮಫಲಕ ಎಂಬುದು ಇಲ್ಲಿನ ವಿಶೇಷ.

2008ರಲ್ಲಿ ಗ್ರಾಮ ಪಂಚಾಯತಿ ಮಾಡಿದ ವಿಶೇಷ ನಿಬಂಧನೆಯಿಂದ ಇದು ಸಾಧ್ಯವಾಗಿದೆ. ವಿಶ್ವವು ಮಂಗಳವಾರ ಮಹಿಳಾ ದಿನವನ್ನು ಆಚರಿಸುತ್ತಿರುವಾಗ, ಔರಂಗಾಬಾದ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಬಕಪುರದ ಪ್ರತಿ ಮನೆಯ ನಾಮಫಲಕವು ಅದರ ನಿವಾಸಿಗಳಿಗೆ ಹೆಮ್ಮೆಯ ಭಾವನೆಯನ್ನು ತರುತ್ತದೆ. ಏಕೆಂದರೆ ಅದು ಮಹಿಳೆಯ ಹೆಸರನ್ನು ನಿವಾಸದ ಮಾಲೀಕ ಅಥವಾ ಸಹ-ಮಾಲೀಕ ಎಂದು ತೋರಿಸುತ್ತದೆ.

ಗ್ರಾಮದಲ್ಲಿನ ಒಂದೇ ಒಂದು ಮನೆಗೆ ಒಬ್ಬನೇ ಒಬ್ಬ ಪುರುಷ ಮಾಲೀಕನಿಲ್ಲ, ಗ್ರಾಮ ಪಂಚಾಯತಿ ದಾಖಲೆಗಳ ಪ್ರಕಾರ ಕುಟುಂಬದ ಮಹಿಳೆ ಕನಿಷ್ಠ ಪಕ್ಷ ಸಹ ಮಾಲೀಕಳಾಗಿರಬೇಕು. 2008ರಲ್ಲಿ ಈ ನಿರ್ಧಾರ ಕೈಗೊಂಡಾಗ ಸುದಾಮರಾವ ಪಾಲಸ್ಕರ ಅವರು ಗ್ರಾಮದ ಸರಪಂಚ್ ಆಗಿದ್ದರು.

ಹಿಂದಿನ ಕೆಲವು ಅನುಭವಗಳ ಆಧಾರದ ಮೇಲೆ, ಪ್ರತಿ ಕುಟುಂಬದ ಮಹಿಳೆಯನ್ನು ಆಕೆಯ ನಿವಾಸದ ಮಾಲೀಕರಾಗಿ ಮಾಡಲು ನಿರ್ಧರಿಸಲಾಯಿತು. ಆಗ ಗ್ರಾಮ ಪಂಚಾಯತಿಯಲ್ಲಿ ಏಳು ಸದಸ್ಯರಿದ್ದರು. ಈ ಪ್ರಸ್ತಾಪದ ವಿರುದ್ಧ ಒಬ್ಬ ಸದಸ್ಯರೂ ಮತ ಹಾಕಲಿಲ್ಲ. ಈ ನಿರ್ಧಾರವು ಪ್ರತಿ ಹಳ್ಳಿಯ ಮನೆಯಲ್ಲೂ ಸುರಕ್ಷತೆಯ ಭಾವನೆಯನ್ನು ತಂದಿತು ಮತ್ತು ಈ ನಿರ್ಧಾರ ಮಕ್ಕಳ ಭವಿಷ್ಯಕ್ಕಾಗಿ ಇತ್ತು ಎಂದು ಸುದಾಮರಾವ ಪಾಲಸ್ಕರ ಹೇಳಿದರು.

ಬಕಪುರದ ಪ್ರತಿ ಮನೆಯ ನಾಮಫಲಕದಲ್ಲಿ ಮಹಿಳಾ ಮಾಲೀಕರ ಹೆಸರಿದೆ, ಇದು ಇಲ್ಲಿ ಕಡ್ಡಾಯ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

21 ವರ್ಷಗಳಿಂದ ಬಕಪುರದಲ್ಲಿ ವಾಸಿಸುತ್ತಿರುವ ಹಾಗೂ ಈಗಿನ ಸರಪಂಚ‌ ಕವಿತಾ ಸಾಳ್ವೆ ಅವರು, ಈ ಹಿಂದೆ ಪುರುಷರು ತಮ್ಮ ಕುಟುಂಬದ ಒಪ್ಪಿಗೆಯಿಲ್ಲದೇ ಮನೆಗಳನ್ನು ಮಾರಾಟ ಮಾಡಬಹುದು ಎಂಬ ಭಯವಿತ್ತು. ಇದು ಕುಟುಂಬಗಳಿಗೆ ಆರ್ಥಿಕವಾಗಿ ಪರಿಣಾಮ ಬೀರುತ್ತಿತ್ತು. ಆದರೆ, ಮಹಿಳೆಯನ್ನು ಮನೆಯ ಮಾಲೀಕರನ್ನಾಗಿ ಮಾಡುವ ನಿರ್ಧಾರವು ಇಲ್ಲಿನ ಮಹಿಳೆಯರಿಗೆ ಅಧಿಕಾರ ಮತ್ತು ಭದ್ರತೆಯ ಭಾವನೆಯನ್ನು ನೀಡಿತು. ಈಗ ಅವರು ಮನೆಗೆ ಸಂಬಂಧಿಸಿದ ಹಣಕಾಸಿನ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದರು.

ಉಪ ಸರಪಂಚ ಅಜೀಜ ಷಾ ಮಾತನಾಡಿ, ಈ ಹಿಂದೆ ಕೆಲವು ಪುರುಷರು ವಿವಿಧ ಚಟಗಳಲ್ಲಿ ತೊಡಗಿ, ತಮ್ಮ ಮನೆಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು. ಆದರೆ, ಕುಟುಂಬದ ಮಹಿಳೆಗೆ ಮನೆ ಮಾಲೀಕತ್ವವನ್ನು ನೀಡುವ ನಿರ್ಧಾರವು ಮನೆಗಳನ್ನು ಸುಗಮವಾಗಿ ನಡೆಸಲು ಕಾರಣವಾಗಿದೆ. ಒಬ್ಬ ವ್ಯಕ್ತಿಯು ಬಕಾಪುರದಲ್ಲಿ ಮನೆಯನ್ನು ಖರೀದಿಸಲು ಬಯಸಿದರೆ, ಅವನು ಅದನ್ನು ತನ್ನ ಕುಟುಂಬದ ಮಹಿಳೆಯೊಂದಿಗೆ ಜಂಟಿಯಾಗಿ ಖರೀದಿಸಬೇಕು ಎಂಬುದು ಕಡ್ಡಾಯ ಎಂದು ಶಾ ಹೇಳಿದರು.

You might also like
Leave a comment