This is the title of the web page

ಝೆಡ್ ಭದ್ರತೆ ತಿರಸ್ಕರಿಸಿದ ಓವೈಸಿ

ಹೊಸದಿಲ್ಲಿ, 4- ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ ಸಂಸದ ಅಸಾದುದ್ದೀನ ಓವೈಸಿ ಅವರು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ನೀಡಬೇಕೆಂದಿದ್ದ ‘ಝೆಡ್’ ವರ್ಗದ ಭದ್ರತೆಯನ್ನು ತಿರಸ್ಕರಿಸಿರುವುದಾಗಿ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಸಂಜೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಚಾಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ದುಷ್ಕರ್ಮಿಗಳು ಓವೈಸಿ ಅವರ ವಾಹನದ ಮೇಲೆ ಗುಂಡುಗಳನ್ನು ಹಾರಿಸಿದ ಒಂದು ದಿನದ ನಂತರ ಓವೈಸಿಗೆ ಭದ್ರತೆಯನ್ನು ಮಂಜೂರು ಮಾಡಲಾಗಿತ್ತು.

ಉತ್ತರ ಪ್ರದೇಶ ಪೊಲೀಸರು ಈ ಸಂಬಂಧ ಸಚಿನ ಶರ್ಮಾ ಮತ್ತು ಶುಭಮ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರಕಾರ, ಶರ್ಮಾ ಬಿಜೆಪಿಯ ಸದಸ್ಯನಾಗಿದ್ದಾನೆ. ಅವನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಶರ್ಮಾ ತಮ್ಮನ್ನು “ದೇಶಭಕ್ತ ಸಚಿನ್ ಹಿಂದೂ (ದೇಶಭಕ್ತ ಹಿಂದೂ)” ಎಂದು ವಿವರಿಸಿದ್ದಾನೆ.

ಗೌತಮ ಬುದ್ಧ ನಗರದ ಲೋಕಸಭಾ ಸದಸ್ಯ ಮಹೇಶ ಶರ್ಮಾ ಮತ್ತು ಯು.ಪಿ ಬಿಜೆಪಿ ನಾಯಕರೊಂದಿಗೆ ಅವರ ಫೋಟೋಗಳಿವೆ. ಆದರೆ ಬಿಜೆಪಿ ಯಾವುದೇ ರೀತಿಯ ಹಿಂಸಾಚಾರಕ್ಕೆ ವಿರುದ್ಧವಾಗಿದೆ ಎಂದು ಸುದ್ದಿಗಾರರಿಗೆ ಮಹೇಶ ಶರ್ಮಾ ತಿಳಿಸಿದ್ದಾರೆ.

“ಜನಪ್ರತಿನಿಧಿಯಾಗಿರುವ ಕಾರಣ ಯಾರಾದರೂ ನನ್ನೊಂದಿಗೆ ಛಾಯಾಚಿತ್ರ ತೆಗೆದುಕೊಳ್ಳಬಹುದು. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನನಗೆ ಅವನು ಗೊತ್ತಿಲ್ಲ”ಎಂದು ಶರ್ಮಾ ಹೇಳಿದರು.

ಶರ್ಮಾ ದೆಹಲಿ ಸಮೀಪದ ದಾದ್ರಿಯ ಬಾದಲ್‌ಪುರ ನಿವಾಸಿಯಾಗಿದ್ದು, ಶುಭಂ ಸಹರಾನ್‌ಪುರ ನಿವಾಸಿ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೀರತ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ಓವೈಸಿ ಮೇಲೆ ದಾಳಿ ಮಾಡಲು ಇವರಿಬ್ಬರು ಪರವಾನಗಿ ಇಲ್ಲದ ಪಿಸ್ತೂಲ್ ಬಳಸಿದ್ದಾರೆ. ಒಂದು ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲೋಕಸಭೆಯಲ್ಲಿ ಮಾತನಾಡಿದ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಓವೈಸಿ ಅವರು ಸರ್ಕಾರವು ಅವರಿಗೆ ವಿಸ್ತರಿಸಿದ ‘ಝಡ್’ ವರ್ಗದ ಭದ್ರತೆಯನ್ನು ತಿರಸ್ಕರಿಸಿದರು.

ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಇತ್ತೀಚೆಗೆ ತಮ್ಮ ವಿರುದ್ಧ ಮಾಡಿದ ದ್ವೇಷದ ಭಾಷಣಗಳನ್ನು ಉಲ್ಲೇಖಿಸಿ ಯುವಕರು ಏಕೆ ಮೂಲಭೂತವಾದಿಗಳಾಗಿದ್ದಾರೆ ಎಂಬುದನ್ನು ಪ್ರತಿಬಿಂಬಿಸುವಂತೆ ಅವರು ಸರ್ಕಾರವನ್ನು ಕೇಳಿದರು.

ಬ್ಯಾಲೆಟ್ ನಂಬದೇ ಬುಲೆಟ್ ನಂಬುವ ಈ ಜನರು ಯಾರು? ಏಕೆ ಈ ರೀತಿ ಮಾಡುತ್ತಿದ್ದಾರೆ. ಈ ದ್ವೇಷವನ್ನು ನಿಲ್ಲಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ನನಗೆ ಝಡ್ ವರ್ಗದ ಭದ್ರತೆ ಬೇಡ. ನಾನು ನಿಮ್ಮೆಲ್ಲರೊಂದಿಗೆ ಸಮಾನವಾಗಿ ಎ-ವರ್ಗದ ನಾಗರಿಕನಾಗಲು ಬಯಸುತ್ತೇನೆ. ನನ್ನ ಮೇಲೆ ಗುಂಡು ಹಾರಿಸಿದವರ ವಿರುದ್ಧ ಯುಎಪಿಎ [ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ]ಯನ್ನು ಏಕೆ ಅನ್ವಯಿಸಲಿಲ್ಲ? ಎಂದು ಓವೈಸಿ ಕೇಳಿದರು.

ನಾನು ಬದುಕಲು, ಮಾತನಾಡಲು ಬಯಸುತ್ತೇನೆ. ಬಡವರು ಸುರಕ್ಷಿತವಾಗಿದ್ದಾಗ ನನ್ನ ಜೀವನ ಸುರಕ್ಷಿತವಾಗಿರುತ್ತದೆ. ನನ್ನ ಕಾರಿಗೆ ಗುಂಡು ಹಾರಿಸಿದವರಿಗೆ ನಾನು ಹೆದರುವುದಿಲ್ಲ ಎಂದರು.

ಗೃಹ ಸಚಿವ ಅಮಿತ ಶಾ ಸೋಮವಾರ ಲೋಕಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಲಿದ್ದಾರೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ ಮತ್ತು ರಾಜ್ಯ ಸರ್ಕಾರವು ಆರೋಪಿಗಳನ್ನು ಬಂಧಿಸಿದೆ ಮತ್ತು ದಾಳಿಗೆ ಬಳಸಲಾದ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

You might also like
Leave a comment