ಕಾರವಾರ : ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 10 ಜನರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ತರಕಾರಿ ತುಂಬಿದ್ದ ಲಾರಿಯಲ್ಲಿ 25 ಜನರು ಪ್ರಯಾಣಿಸುತ್ತಿದ್ದರು. ತರಕಾರಿ ತುಂಬಿದ್ದ ಲಾರಿ ಸವಣೂರಿನಿಂದ ಕುಮಟಾಗೆ ತೆರಳುತ್ತಿತ್ತು.
ಮೃತರು ಹಾವೇರಿ ಜಿಲ್ಲೆ ಸವಣೂರ ಮೂಲದವರೆಂಬ ಮಾಹಿತಿ ದೊರೆತಿದೆ. ನಸುಕಿನ ಜಾವ ರಸ್ತೆಯಲ್ಲಿ ಮಂಜು ಮುಸುಕಿದ್ದರಿಂದ ಲಾರಿ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ಮೂಲಕ ಶವಗಳನ್ನು ಹೊರತೆಗೆಯಲಾಗುತ್ತಿದೆ.
ಘಟನಾ ಸ್ಥಳಕ್ಕೆ ಎಸ್ಪಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತಪಟ್ಟವರ ವಿವರ : ಫಯಾಜ ಜಮಖಂಡಿ – 45 ವರ್ಷ, ವಾಸೀಮ ಮುಡಗೇರಿ – 35 ವರ್ಷ, ಇಜಾಜ ಮುಲ್ಲಾ – 20 ವರ್ಷ, ಸಾದೀಕ ಬಾಷಾ – 30 ವರ್ಷ,
ಗುಲಾಮ ಹುಸೇನ್ ಜವಳಿ – 40 ವರ್ಷ,
ಇಮ್ತಿಯಾಜ ಮುಳಕೇರಿ – 36 ವರ್ಷ,
ಅಲ್ಪಾಜ ಜಾಫರ್ ಮಂಡಕ್ಕಿ – 25 ವರ್ಷ,
ಜೀಲಾನಿ ಅಬ್ದುಲ್ ಜಖಾತಿ – 25 ವರ್ಷ,
ಅಸ್ಲಂ ಬಾಬುಲಿ ಬೆಣ್ಣಿ – 24 ವರ್ಷ, ಇನ್ನೊಬ್ಬ ಮೃತರ ಹೆಸರು ಲಭ್ಯವಾಗಿಲ್ಲ.
ಭೀಕರ ಅಪಘಾತದ ಬಗ್ಗೆ ಗಾಯಾಳು ಮೊಹಮ್ಮದ ಎಂಬವರು ಮಾಹಿತಿ ಹಂಚಿಕೊಂಡಿದ್ದು : “ನಸುಕಿನ 3.30 ಗಂಟೆಗೆ ಅಪಘಾತ ಆಗಿದೆ. ನಾನು ಮಲಗಿದ್ದೆ, ಟೈರ್ ಬ್ಲಾಸ್ಟ್ ಆದ ಹಾಗೆ ಸದ್ದು ಕೇಳಿತು. ನಂತರ ಘಟನೆ ಸಂಭವಿಸಿತು” ಎಂದು ತಿಳಿಸಿದ್ದಾರೆ.
ನಾವೆಲ್ಲ ಪ್ರತಿ ವಾರ ಸವಣೂರಿನಿಂದ ಸಂತೆಗೆ ಹೋಗುತ್ತಿದ್ದೆವು. ತರಕಾರಿ, ಹಣ್ಣು ವ್ಯಾಪಾರ ಮಾಡುತ್ತಿದ್ದೆವು. ಘಟನೆ ಸಂಭವಿಸಿದಾಗ ಎಲ್ಲ ತರಕಾರಿಗಳು ನಮ್ಮ ಮೈ ಮೇಲೆ ಬಿದ್ದಿದ್ದವು ಎಂದು ಮೊಹಮ್ಮದ ಹೇಳಿದ್ದಾರೆ.