Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

About Us

ಹಣತೆ ಬೆಳಗುತಿದೆ

ಅಕ್ಟೋಬರ 24, 1957 ಅಂದು ದೀಪಾವಳಿ. ಅದನ್ನು ಗೋಕಾವಿಯ ನೆಲದಲ್ಲಿ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿ ಹೊತ್ತಿಸಿಟ್ಟ ಹಣತೆಯ ಹೆಸರೇ ‘ಸಮದರ್ಶಿ’

ಅದು ಕೇವಲ ಪತ್ರಿಕೆ ಆಗಿ ಅಲ್ಲ, ಶ್ರಮಿಕ ವರ್ಗದ ಜನರ ದನಿಯಾಗುವ ಆಶಯದೊಡನೆ ಹೊತ್ತಿದ ದೀಪ. ಈ ಹೊತ್ತಿದ ಕುಡಿ ಮತ್ತಿಷ್ಟು ಪ್ರಖರವಾಗಲು ಹೆಗಲೊಡ್ಡಿ ನಿಂತವರು ಗೋಕಾವಿಯ ಹಲವಾರು ಚಿರಪರಿಚಿತ ಬರಹಗಾರರು. ಇವರೆಲ್ಲರಿಗೆ ಪತ್ರಿಕೆ ಬಗೆಗೆ ಅತೀವ ಕಾಳಜಿ. ಅದು ಇನ್ನಷ್ಟು ಜ್ವಾಜ್ವಲ್ಯಮಾನವಾಗಬೇಕು ಎಂಬ ಹಂಬಲ.

ಬಸವರಾಜ ಕಟ್ಟೀಮನಿ ಅವರದು ಸಮದರ್ಶಿಯೊಂದಿಗೆ ಅತೀವ ಒಡನಾಟ. ಗೋಕಾವಿಗೆ ಅವರು ಬಂದರೆಂದರೆ ಮೊದಲು ಕಾಲಿಡುತ್ತಿದ್ದುದು ಪತ್ರಿಕೆ ಕಚೇರಿಗೆ. ಅಲ್ಲಿ ಮಾತು, ಹರಟೆ ಎಲ್ಲ ಸಾಂಗವಾಗಿ ಜರುಗಬೇಕು. ಮಾತಿನ ನಡುವೆ ಸುಳಿದಾಡುತ್ತಿದ್ದ ರಶಿಯಾದ ಕ್ರಾಂತಿ, ಮಾವೋನ ಮಹತ್ವಾಕಾಂಕ್ಷೆ, ಸಾಮ್ರಾಜ್ಯಶಾಹಿ ಅಮೆರಿಕಾ ವಿರುದ್ಧ ತಲೆ ಎತ್ತಿನಿಂತ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ, ಜನರ ಪರ ನಿಂತು ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಹೋರಾಡುತ್ತಿದ್ದ ಚೆಗೆವಾರಾ, ಎಲ್ಲ ಮಾತಿನ ನಡುವೆ ಸುಳಿಯುತ್ತಿದ್ದವು. ಆದರೆ ಇದೆಲ್ಲದರ ಹಿನ್ನೆಲೆಯಲ್ಲಿ ನಮ್ಮ ಮಣ್ಣಿನ ಬದುಕಿಗೆ ಸ್ಪಂದಿಸುವ ರೀತಿ ಎಂಥದ್ದಿರಬೇಕೆಂಬ ಕಾಳಜಿ ಮುಖ್ಯ ಆಗಿರುತ್ತಿತ್ತು. ಆ ಹಿನ್ನೆಲೆಯಲ್ಲಿಯೇ ಪತ್ರಿಕೆ ರೂಪಗೊಳ್ಳುತ್ತ, ಒಂದೊಂದೇ ದೀಪಾವಳಿಯ ಹೆಜ್ಜೆಗಳನ್ನಿಡುತ್ತ ಇಂದು ಹೀಗೆ ನಿಮ್ಮ ಮುಂದಿದೆ.

ಅಂದು ಈ ಪತ್ರಿಕೆ ಎಂಬ ಜ್ಯೋತಿ ಹೊತ್ತಿಸಿದ ಜೀವ ಬಿ.ಎನ್.ಧಾರವಾಡಕರ. ಎಂದಿಗೂ ಜಾತಿ, ಮತ, ಧರ್ಮ, ಭಾಷೆಯ ಕಟ್ಟಳೆಗೆ ಸಿಲುಕಿದವರಲ್ಲ. ಅವರು ನಂಬಿದ್ದು ಒಂದೇ ಮಾನವಧರ್ಮ. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹಾಗು ಗೋವಾ ವಿಮೋಚನೆಗಾರರಾಗಿ ಶ್ರಮಿಸಿದ ಅವರಿಗೆ, ಸ್ವಾತಂತ್ರ್ಯಾನಂತರವೂ ಶೋಷಕರ ಬಲೆಯಿಂದ ಬಡವರು ಪಾರಾಗಲಿಲ್ಲ ಎಂಬ ಕಾಳಜಿ. ಅವರ ಪರ ನಿಲ್ಲಬೇಕೆಂಬ ತಹತಹ. ಪತ್ರಿಕೆ ಕೇವಲ ಹೊಟ್ಟೆ ಪಾಡಿನ ವೃತ್ತಿ ಆಗಿರದೇ, ಅದೊಂದು ಜೀವನದ ಧ್ಯೇಯ ಎಂದು ಪರಿಗಣಿಸಿದವರು ಬಾಬಾಸಾಹೇಬ ನವಾಜಸಾಹೇಬ ಧಾರವಾಡಕರ. ಅವರಲ್ಲಿ ಎಂದೂ ಹೋರಾಟದ ಕೆಚ್ಚು ಕುಂದಲಿಲ್ಲ. ಐವತ್ತು ಸುದೀರ್ಘ ವರ್ಷಗಳ ಕಾಲ ನಾನಾ ಕಷ್ಟ, ನಿಷ್ಠುರಗಳ ನಡುವೆಯೂ ಅವರು ಛಲದಿಂದ ಮುಂದೆ ಸಾಗಿದವರು. ಮಾನಸಿಕ-ದೈಹಿಕ ಹಿಂಸೆ, ಅವಮಾನಗಳೆಲ್ಲ ಇಂಥ ದಾರಿಯಲ್ಲಿ ಸಹಜ ಎಂಬಂತೆ ಸ್ವೀಕರಿಸಿ ಮುಂದೆ ಹೆಜ್ಜೆಗಳನ್ನಿಡುತ್ತಾ ಸಾಗಿದವರು. ಮೂಲತಃ ಕಮ್ಯುನಿಸ್ಟ ಸಿದ್ಧಾಂತದಲ್ಲಿ ನಿಷ್ಠುರ ನಂಬಿಕೆ ಇರಿಸಿದ ಧಾರವಾಡಕರ ಮಾತು, ಬರಹ ಎರಡೂ ಹರಿತ. ಅವರ ಮಾತು ಕೇಳಿದರೆ, ಕ್ರಾಂತಿಯ ಕೆಚ್ಚು ಎಂಥವರಲ್ಲೂ ಮೂಡಬೇಕು. ಅವರ ಸಂಪಾದಕೀಯ ಬರಹಗಳೆಂದರೆ ಸಿಂಹ ಗರ್ಜನೆ. ಬರಹದಿಂದ ಸರ್ಕಾರ, ಜನರ ನಿಷ್ಠುರತೆ ಎದುರಾದಾಗಲೂ ಅವರು ಹಿಂಜರಿಯಲಿಲ್ಲ.

ತಮ್ಮ ಎಪ್ಪತ್ತರ ಇಳಿ ವಯಸ್ಸಿನಲ್ಲೂ ಅವರು ತಾವು ಕಟ್ಟಿ ನಿಲ್ಲಿಸಿದ ಪತ್ರಿಕೆಯ ಹೂರಣಕ್ಕಾಗಿ ನಿರಂತರ ಹುಡುಕಾಟದಲ್ಲಿ ತೊಡಗಿದ್ದವರು. ಅದಕ್ಕಾಗಿ ಎಷ್ಟೇ ಕಷ್ಟ ಬಂದಾಗಲೂ ನಗುನಗುತ್ತ ಸಹಿಸಿಕೊಂಡು ನಡೆದವರು. ಜೊತೆಗೆ ಕನ್ನಡ, ಇಂಗ್ಲೀಷ, ಹಿಂದಿ, ಮರಾಠಿ ಭಾಷೆಗಳ ಅಪಾರ ಪಾಂಡಿತ್ಯ, ಓದಿನ ಹಿನ್ನೆಲೆ, ಅವರನ್ನು ಇಡೀ ಬೆಳಗಾವಿ ವಿಭಾಗದ ಜಿಲ್ಲೆಗಳ ಪತ್ರಿಕಾ ಜಗತ್ತು ಸದಾ ತೆರೆದ ಕಣ್ಣಿಂದ ಗಮನಿಸುತ್ತಲೇ ಇತ್ತು. ಸತತ ಐವತ್ತು ವರ್ಷ ಸಮಾಜದ ಶೋಷಿತರ ಪರವಾಗಿ ನಿಂತು ಶ್ರಮಿಸಿದ ಅವರ ನಡೆ, ನುಡಿಗಳೇ ಇಂದು ಈ ಪತ್ರಿಕೆಯ ದಾರಿ ದೀಪ. ಅವರು ಹೊತ್ತಿಸಿದ ಮಷಾಲಿನ ಬೆಳಕಲ್ಲಿ ಹೆಜ್ಜೆಗಳನ್ನು ಇರಿಸುತ್ತ ಸಾಗುವುದೇ ಒಂದು ಹೆಮ್ಮೆ. ಅವರ ತುಡಿತ, ಮಿಡಿತಗಳನ್ನು ಅವರ ನಂತರವೂ ಕಾಯ್ದುಕೊಂಡು ಸಾಗುತ್ತ ಬಂದ ಪತ್ರಿಕೆ, ದೀಪಾವಳಿಯ ದಿನದಂದೇ ಆರಂಭ ಆದದ್ದು ಸಹಜವೇ. ಕಾರ್ತೀಕ ಮಾಸದ ಸಮಯದಲ್ಲಿ ಕತ್ತಲು ಮುಸುಕುವ ವೇಳೆ ಸಂಜೆ ಹೊತ್ತಿಸಿಡುವ ದೀಪದಂತೆ, ಸಮಾಜದ ಕತ್ತಲು ಕಳೆಯಲು ಹೊತ್ತಿಸಿದ ದೀಪ ಇದು. ಆ ಅರಿವಿನಿಂದಲೇ ನಾವು ಮುಂದೆ ಸಾಗುವ, ಮತ್ತಷ್ಟು ಹೊಸ ಆಯಾಮಗಳನ್ನು ಸಾಧಿಸುವ ಹಂಬಲ ಮೈಗೂಡಿಸಿಕೊಂಡು ಹೆಜ್ಜೆ ಇರಿಸುತ್ತ ಇದ್ದೇವೆ.

ಅಂದು ಅವರು ಹೊತ್ತಿಸಿಟ್ಟ ಹಣತೆಯ ಬೆಳಕು ಎಲ್ಲರಿಗೂ ಹಿತ ನೀಡಬೇಕು, ದೀಪ ಇನ್ನಷ್ಟು ಪ್ರಖರ ಆಗಬೇಕು. ಆ ಆರು ದಶಕಗಳ ಹಿಂದಿನ ಕ್ಷಣ ನೆನೆದು ಮತ್ತೆ ನಾವು ಆ ಹಂಬಲವನ್ನು ಗಟ್ಟಿಗೊಳಿಸುತ್ತಿದ್ದೇವೆ.