ಖಾಸಗಿ ಸಿಮೆಂಟ್ ಕಂಪನಿಗೆ 1 ಸಾವಿರ ಎಕರೆ ಭೂಮಿ: ಹೈಕೋರ್ಟ ತರಾಟೆ

A B Dharwadkar
ಖಾಸಗಿ ಸಿಮೆಂಟ್ ಕಂಪನಿಗೆ 1 ಸಾವಿರ ಎಕರೆ ಭೂಮಿ: ಹೈಕೋರ್ಟ ತರಾಟೆ

ಗೌಹಾಟಿ, ೧೯- ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಸುಮಾರು 1 ಸಾವಿರ ಎಕರೆ ಭೂಮಿಯನ್ನು ಖಾಸಗಿ ಸಿಮೆಂಟ ಕಾರ್ಖಾನೆಗೆ ಮಂಜೂರು ಮಾಡಿದ್ದಕ್ಕೆ ಗೌಹಾಟಿ ಹೈಕೋರ್ಟ ಆಶ್ಚರ್ಯ ವ್ಯಕ್ತಪಡಿಸಿ, ಯಾವ ನಿಯಮದಡಿ ಇಷ್ಟು ದೊಡ್ಡ ಭೂಮಿ ನೀಡಲಾಗಿದೆ ಎಂದು ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಒಂದು ಸಾವಿರ ಎಕರೆ ಭೂಮಿಯನ್ನು ಒಂದು ಖಾಸಗಿ ಸಿಮೆಂಟ ಕಾರ್ಖಾನೆಗೆ ಧಾರೆ ಕೊಟ್ಟಿರುವುದು ಒಂದು ವ್ಯವಹಾರವಾಗಿ ಉಳಿದಿಲ್ಲ, ಇದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದ ಹೈಕೋರ್ಟ ನ್ಯಾಯಾಧೀಶ ಸಂಜಯ ಕುಮಾರ ಮೇಧಿ ಅವರು, “ಇದೇನು ತಮಾಷೆಯೇ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

2024ರ ಅಕ್ಟೋಬರ್‌ನಲ್ಲಿ ಮಹಾಬಲ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ ಕಂಪನಿಗೆ ದಿಮಾ ಹಸಾವೊ ಜಿಲ್ಲೆಯಲ್ಲಿ 2,000 ಬಿಘಾ ಅಥವಾ ಸುಮಾರು 650ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿತ್ತು. ಬಳಿಕ ಅದೇ ವರ್ಷ ನವೆಂಬರನಲ್ಲಿ ಮತ್ತೆ 1000 ಸಾವಿರ ಬಿಘಾ ಅಥವಾ ಸುಮಾರು 330 ಎಕರೆ ಭೂಮಿ ಹೆಚ್ಚುವರಿಯಾಗಿದೆ ನೀಡಿದೆ.

ದಿಮಾ ಹಸಾವೊ ಅಸ್ಸಾಂನಲ್ಲಿರುವ ಬುಡಕಟ್ಟು ಜನಾಂಗದವರು ಬಹುಸಂಖ್ಯಾತರಾಗಿರುವ ಗುಡ್ಡಗಾಡು ಜಿಲ್ಲೆಯಾಗಿದೆ. ಇದನ್ನು ಸಂವಿಧಾನದ ಆರನೇ ಶೆಡ್ಯೂಲ್‌ನ ನಿಬಂಧನೆಗಳ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಉತ್ತರ ಕ್ಯಾಚರ್ ಹಿಲ್ಸ್ ಸ್ವಾಯತ್ತ ಮಂಡಳಿಯ ಮೂಲಕ ನಿರ್ವಹಿಸಲಾಗುತ್ತದೆ. ಸಂವಿಧಾನದ ಆರನೇ ಶೆಡ್ಯೂಲ್ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂನಲ್ಲಿನ ಬುಡಕಟ್ಟು ಪ್ರದೇಶಗಳ ಆಡಳಿತವನ್ನು ನಿಯಂತ್ರಿಸುತ್ತದೆ.

ಅಕ್ಟೋಬರ್ 2024ರಲ್ಲಿ ಸಿಮೆಂಟ್ ಕಾರ್ಖಾನೆಗೆ ಭೂಮಿ ಮಂಜೂರು ಮಾಡುವ ಆದೇಶವನ್ನು ಉತ್ತರ ಕ್ಯಾಚರ್ ಹಿಲ್ಸ್ ಸ್ವಾಯತ್ತ ಮಂಡಳಿಯ ಹೆಚ್ಚುವರಿ ಕಾರ್ಯದರ್ಶಿ (ಕಂದಾಯ) ಹೊರಡಿಸಿದ್ದರು. ಹಂಚಿಕೆಯ ಉದ್ದೇಶ ಸಿಮೆಂಟ್ ಕಾರ್ಖಾನೆ ಸ್ಥಾಪಿಸುವುದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಈ ಭೂಮಿ ಮಂಜೂರಾತಿ ವಿರುದ್ದ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆ ಕಳೆದವಾರ ಗುವಾಹಟಿ ಹೈಕೋರ್ಟನಲ್ಲಿ ನಡೆದಿದೆ. ಸಿಮೆಂಟ್ ಕಾರ್ಖಾನೆಗೆ ಕೊಡಲು ನಮ್ಮ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ದಿಮಾ ಹಸಾವೊನ ಸ್ಥಳೀಯರ ಗುಂಪೊಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಈ ವರ್ಷದ ಆರಂಭದಲ್ಲಿ ಮಹಾಬಲ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ನಿರ್ಮಾಣ ಕಾರ್ಯಗಳಲ್ಲಿ ‘ಸ್ಥಳೀಯ ಗ್ರಾಮಸ್ಥರು ಸೃಷ್ಟಿಸುವ ಅಡಚಣೆಗಳಿಂದ’ ರಕ್ಷಣೆ ಕೋರಿ ಆರಂಭಿಕ ಅರ್ಜಿಯನ್ನು ಸಲ್ಲಿಸಿತ್ತು.

ಆಗಸ್ಟ್ 12ರಂದು ತನ್ನ ಆದೇಶದಲ್ಲಿ ನ್ಯಾಯಾಲಯವು “ಪ್ರಕರಣದ ಸತ್ಯಾಸತ್ಯತೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಂಜೂರು ಮಾಡಲು ಕೋರಿರುವ ಭೂಮಿ ಸುಮಾರು 3,000 ಬಿಘಾಗಳಾಗಿದ್ದು, ಅದು ಅಸಾಧಾರಣವೆಂದು ತೋರುತ್ತದೆ” ಎಂದು ಹೇಳಿದೆ.

“3,000 ಬಿಘಾ ಅಳತೆಯ ಇಷ್ಟು ದೊಡ್ಡ ಭೂಮಿಯನ್ನು ಕಾರ್ಖಾನೆಗೆ ಹಂಚಿಕೆ ಮಾಡುವ” ನೀತಿಯನ್ನು ಒಳಗೊಂಡಿರುವ ದಾಖಲೆಗಳನ್ನು ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಜಿಲ್ಲೆಯ ಉಮ್ರಾಂಗ್ಸೊ ಪ್ರದೇಶವು “ವಲಸೆ ಹಕ್ಕಿಗಳು, ವನ್ಯಜೀವಿಗಳು ಇತ್ಯಾದಿಗಳಿಗೆ ಬಿಸಿನೀರಿನ ಬುಗ್ಗೆ, ನಿಲುಗಡೆ ಸ್ಥಳಗಳನ್ನು ಹೊಂದಿರುವ ಪರಿಸರ ತಾಣ” ಎಂಬುವುದನ್ನೂ ನ್ಯಾಯಾಲಯ ಗಮನಿಸಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ನಿಗದಿಪಡಿಸಿದೆ. ವಿಚಾರಣೆ ವೇಳೆ, ನ್ಯಾಯಮೂರ್ತಿಗಳು ಸರ್ಕಾರದ ನಿರ್ಧಾರವನ್ನು ಕಂಡು ದಂಗಾಗಿದ್ದಾರೆ. ನ್ಯಾಯಾಧೀಶರು ಸರ್ಕಾರದ ವಕೀಲರನ್ನು ಕೇಳಿದ ಪ್ರಶ್ನೆಯ ವೀಡಿಯೊ ಈಗ ದೇಶಾದ್ಯಂತ ವೈರಲ್ ಆಗಿದೆ. ನ್ಯಾಯಾಧೀಶರು ಆಶ್ಚರ್ಯ ಮತ್ತು ಆಕ್ರೋಶದಿಂದ, “ಇದೇನು ತಮಾಷೆಯೇ? ನೀವು ಇಡೀ ಜಿಲ್ಲೆಯನ್ನೇ ಕೊಡುತ್ತಿದ್ದೀರಿ. ನಿಮ್ಮ ಅಗತ್ಯ ಮುಖ್ಯವಲ್ಲ, ಸಾರ್ವಜನಿಕ ಹಿತಾಸಕ್ತಿಯೇ ಇಲ್ಲಿ ಮುಖ್ಯ,” ಎಂದು ಖಡಕ್ ಮಾತುಗಳಲ್ಲಿ ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.