ಪುಣೆ, ಜ, 28 : ಮಹಾರಾಷ್ಟ್ರ ರಾಜಕೀಯದಲ್ಲಿ ತೀವ್ರ ದುಃಖದ ಛಾಯೆ ಮೂಡಿದ್ದು, ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಅಜಿತ ಪವಾರ ಅವರು ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ತುರ್ತು ಲ್ಯಾಂಡಿಂಗ್ ವೇಳೆ ಅವರು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಪತನಗೊಂಡು, ಅಜಿತ್ ಪವಾರ್ ಸೇರಿ ಐವರು ಸಾವನ್ನಪ್ಪಿದ್ದಾರೆ.
ವಿಎಸ್‌ಆರ್ ಸಂಸ್ಥೆ ನಡೆಸುತ್ತಿದ್ದ ಲಿಯರ್‌ಜೆಟ್–45 (VT-SSK) ವಿಮಾನವು ಬೆಳಿಗ್ಗೆ ಸುಮಾರು 8.45ರ ಸುಮಾರಿಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸುವ ವೇಳೆ ನಿಯಂತ್ರಣ ತಪ್ಪಿ ಪತನಗೊಂಡಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಿಳಿಸಿದೆ. ವಿಮಾನದಲ್ಲಿ ಅಜಿತ ಪವಾರ ಜೊತೆಗೆ ಅವರ ವೈಯಕ್ತಿಕ ಭದ್ರತಾ ಅಧಿಕಾರಿ, ಸಹಾಯಕ ಹಾಗೂ ಇಬ್ಬರು ವಿಮಾನ ಸಿಬ್ಬಂದಿ ಇದ್ದರು. ಅಪಘಾತದಲ್ಲಿ ಯಾರೂ ಬದುಕುಳಿಯಲಿಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಅಜಿತ ಪವಾರ ಅವರು ಜಿಲ್ಲಾ ಪರಿಷತ್ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಬಾರಾಮತಿಗೆ ತೆರಳುತ್ತಿದ್ದರು. ಮಂಗಳವಾರ ಅವರು ಮುಂಬೈನಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಧ್ಯಕ್ಷತೆಯಲ್ಲಿ ನಡೆದ ಮಹಾರಾಷ್ಟ್ರ ಸಚಿವ ಸಂಪುಟದ ಮೂಲಸೌಕರ್ಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.
“ವಿಮಾನ ನೆಲಕ್ಕೆ ಬಿದ್ದ ತಕ್ಷಣ ಭಾರೀ ಸ್ಫೋಟ ಸಂಭವಿಸಿತು. ಬೆಂಕಿ ತೀವ್ರವಾಗಿದ್ದರಿಂದ ರಕ್ಷಣಾ ಕಾರ್ಯ ಕಷ್ಟಕರವಾಯಿತು” ಎಂದು ಅಪಘಾತ ಸ್ಥಳದಲ್ಲಿದ್ದ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಶರದ ಪವಾರ ಅವರ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರು ಮಹಾರಾಷ್ಟ್ರಕ್ಕೆ ಹೊರಟಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪವಾರ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಹಲವು ನಾಯಕರು ಅಜಿತ ಪವಾರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಶಿವಸೇನೆ (ಯುಬಿಟಿ) ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಈ ಘಟನೆಯನ್ನು “ಅಪಾರ ನಷ್ಟ” ಎಂದು ಬಣ್ಣಿಸಿದ್ದಾರೆ.
ರಾಜಕೀಯ ಕುಟುಂಬದಲ್ಲಿ ಜನಿಸಿದ ಅಜಿತ ಪವಾರ ಅವರು 1982ರಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ್ದರು. ನಾಲ್ಕು ದಶಕಗಳ ಕಾಲ ಮಹಾರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರ ನಿಧನವು ರಾಜ್ಯ ರಾಜಕೀಯಕ್ಕೆ ತುಂಬಲಾಗದ ನಷ್ಟವಾಗಿ ಪರಿಣಮಿಸಿದೆ.





