ಎಸ್‌ಬಿಐ ದರೋಡೆ: ಪಾಳುಬಿದ್ದ ಮನೆಯಲ್ಲಿ 41 ಲಕ್ಷ ರೂ, 6.5 ಕೆಜಿ ಚಿನ್ನ ಪತ್ತೆ

A B Dharwadkar
ಎಸ್‌ಬಿಐ ದರೋಡೆ: ಪಾಳುಬಿದ್ದ ಮನೆಯಲ್ಲಿ 41 ಲಕ್ಷ ರೂ, 6.5 ಕೆಜಿ ಚಿನ್ನ ಪತ್ತೆ

ವಿಜಯಪುರ: ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಸೆಪ್ಟೆಂಬರ್ 16 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸುಳಿವು ದೊರೆತಿದೆ.

ಹುಲಜಂತಿ ಗ್ರಾಮದ ಪಾಳುಬಿದ್ದ ಮನೆಯ ಮೇಲ್ಛಾವಣಿಯಲ್ಲಿ ಬರೋಬ್ಬರಿ 41.4 ಲಕ್ಷ ರೂ. ನಗದು ಮತ್ತು 6.54 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಈ ಆಘಾತಕಾರಿ ದರೋಡೆಯಲ್ಲಿ ಒಟ್ಟು 1.5 ಕೋಟಿ ರೂ. ನಗದು ಮತ್ತು 20 ಕೆ.ಜಿ.ಗೂ ಅಧಿಕ ಚಿನ್ನಾಭರಣ ಕಳುವಾಗಿತ್ತು.

ಮಂಗಳವೇಡ ಗ್ರಾಮಸ್ಥರು ಮನೆಯ ಮೇಲ್ಛಾವಣಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬ್ಯಾಗನ್ನು ವಶಪಡಿಸಿಕೊಂಡಿದ್ದಾರೆ. ದರೋಡೆಕೋರರು ಕೃತ್ಯದ ನಂತರ ಪರಾರಿಯಾಗುವಾಗ ಈ ಹಣ ಮತ್ತು ಚಿನ್ನವನ್ನು ಅಲ್ಲಿ ಬಚ್ಚಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ದರೋಡೆಕೋರರ ಪತ್ತೆಗಾಗಿ 8 ವಿಶೇಷ ತಂಡಗಳನ್ನು ರಚಿಸಿದ್ದಾರೆ.

ದರೋಡೆ ನಡೆದ ದಿನವೇ, ಅಂದರೆ ಸೆಪ್ಟೆಂಬರ್ 16 ರಂದು, ದರೋಡೆಕೋರರು ಬಳಸಿದ್ದ ಇಕೋ ವಾಹನ ಹುಲಜಂತಿ ಗ್ರಾಮದಲ್ಲಿ ಪತ್ತೆಯಾಗಿತ್ತು. ಈ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಾಗ ಸ್ಥಳೀಯರು ಪ್ರಶ್ನಿಸಿದ್ದರು. ಆಗ ಆರೋಪಿಗಳು ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಸ್ಥಳೀಯರಿಗೆ ಸಿಕ್ಕಿದ್ದ ಬ್ಯಾಗ್‌ನಲ್ಲಿಯೂ ಸ್ವಲ್ಪ ಚಿನ್ನಾಭರಣ ಹಾಗೂ 1.30 ಲಕ್ಷ ರೂ. ನಗದು ಪತ್ತೆಯಾಗಿತ್ತು.

ಸೆಪ್ಟೆಂಬರ್ 16ರ ಸಂಜೆ ನಡೆದಿದ್ದ ಈ ದರೋಡೆಯಲ್ಲಿ ಮ್ಯಾನೇಜರ್, ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಮತ್ತು ಕೆಲವು ಗ್ರಾಹಕರ ಕೈಕಾಲು ಕಟ್ಟಿಹಾಕಿ ದರೋಡೆಕೋರರು ಹಣ ಮತ್ತು ಚಿನ್ನಾಭರಣ ದೋಚಿದ್ದರು. ಬ್ಯಾಂಕ್ ಮ್ಯಾನೇಜರ್ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ನಿರ್ಲಕ್ಷ್ಯವೂ ದರೋಡೆಗೆ ಕಾರಣವಾಗಿರಬಹುದು ಎಂದು ಗ್ರಾಹಕರು ಆರೋಪಿಸಿದ್ದು, ಅವರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದರೋಡೆಕೋರರು ಮಹಾರಾಷ್ಟ್ರದ ಕಡೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಅವರ ಶೋಧ ಕಾರ್ಯ ಮುಂದುವರಿದಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿರುವ ಈ ದೊಡ್ಡ ಮೊತ್ತದ ಹಣ ಮತ್ತು ಚಿನ್ನದ ಮೂಲಕ ದರೋಡೆಕೋರರನ್ನು ಶೀಘ್ರದಲ್ಲೇ ಬಂಧಿಸುವ ನಿರೀಕ್ಷೆ ಇದೆ.

ಇನ್ನಷ್ಟು ವಿವರ :
ಚಡಚಣದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಹುಲಜಂತಿದಲ್ಲಿ ಬ್ಯಾಗ್ ಪತ್ತೆಯಾಗಿದೆ. ಇದರಲ್ಲಿ 6.54 ಕೆಜಿ ಚಿನ್ನ ಹಾಗೂ 41.04 ಲಕ್ಷ ರೂ. ನಗದು ದೊರೆತಿದೆ.

ಸೆ.16ರಂದು ಸಂಜೆ ಮೂವರು ದರೋಡೆಕೋರರು ಬ್ಯಾಂಕ್‌ನ ಆರು ಜನ ಸಿಬ್ಬಂದಿ ಹಾಗೂ ನಾಲ್ವರು ಗ್ರಾಹಕರಿಗೆ ಪಿಸ್ತೂಲ್, ಚಾಕುಗಳ ತೋರಿಸಿ, ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದರು. ಬ್ಯಾಂಕ್‌ನಲ್ಲಿದ್ದ 1.04 ಕೋಟಿ ರೂ. ಮತ್ತು 20 ಕೆಜಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಂಟು ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು.

ಅಂದು ರಾತ್ರಿಯೇ ಕದ್ದ ಚಿನ್ನ ಹಾಗೂ ಹಣದೊಂದಿಗೆ ಕಾರಿನಲ್ಲಿ ಆರೋಪಿಗಳು ಮಹಾರಾಷ್ಟ್ರದ ಪಂಢರಾಪುರದತ್ತ ಹೋಗುತ್ತಿದ್ದಾಗ ಸೋಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದ ಬಳಿ ಕಾರು ಅಪಘಾತಕ್ಕೆ ಈಡಾಗಿತ್ತು. ಇದರಿಂದ ಕಾರನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಓಡಿ ಹೋಗಿದ್ದರು. ಕಾರಿನಲ್ಲಿ ಸ್ವಲ್ಪ ಹಣ ಹಾಗೂ ಚಿನ್ನಾಭರಣ ದೊರೆತಿತ್ತು.

ಆರೋಪಿಗಳ ಪತ್ತೆಗೆ ಮಹಾರಾಷ್ಟ್ರ ಪೊಲೀಸರೊಂದಿಗೆ ರಾಜ್ಯ ತನಿಖಾ ತಂಡಗಳು ಜಂಟಿ ಕಾರ್ಯಾಚರಣೆ ಕೈಗೊಂಡಿವೆ. ಇದೀಗ ಅದೇ ಹುಲಜಂತಿ ಗ್ರಾಮದಲ್ಲಿ ಗುರುವಾರ ಸಂಜೆ ಬ್ಯಾಗ್‌ವೊಂದು ಪತ್ತೆಯಾಗಿದೆ. ಈ ಕುರಿತು ಶುಕ್ರವಾರ ಚಡಚಣ ಪೊಲೀಸ್ ಠಾಣೆಯಲ್ಲಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಬ್ಯಾಂಕ್ ದರೋಡೆ ನಡೆದ ಒಂದೂವರೆ ಗಂಟೆಯಲ್ಲೇ ಹುಲಜಂತಿ ಗ್ರಾಮದಲ್ಲಿ ಆರೋಪಿಗಳು ಬಳಕೆ ಮಾಡಿದ್ದ ಕಾರು ಪತ್ತೆ ಹಚ್ಚಲಾಗಿತ್ತು. ಅಂದು ಕಾರಿನಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದಾಗ ಅಪಘಾತವಾಗಿ ಗ್ರಾಮಸ್ಥರೊಂದಿಗೆ ವಾಗ್ವಾದ ಮಾಡಲಾಗಿತ್ತು. ನಂತರದಲ್ಲಿ ಗ್ರಾಮಸ್ಥರಿಗೂ ಬೆದರಿಕೆ ಹಾಕಿ ಅಲ್ಲಿಂದ ಆರೋಪಿಗಳು ಪರಾರಿಯಾದ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ತನಿಖೆ ಕೈಗೊಂಡಾಗ ಕಾರಿನಲ್ಲಿ 21 ಚಿನ್ನದ ಪ್ಯಾಕೇಟ್‌ಗಳು ಹಾಗೂ 1.03 ಲಕ್ಷ ರೂ. ನಗದು ಪತ್ತೆಯಾಗಿತ್ತು ಎಂದು ತಿಳಿಸಿದರು.

ಆ ದಿನದಿಂದಲೇ ಸೋಲಾಪುರ ಹಾಗೂ ವಿಜಯಪುರ ಪೊಲೀಸರು ಇಡೀ ಹುಲಜಂತಿ ಗ್ರಾಮವನ್ನು ಸುತ್ತುವರಿದು, ನಿಗಾ ವಹಿಸಲಾಗಿತ್ತು. ವಾಹನಗಳ ತಪಾಸಣೆ ಸೇರಿದಂತೆ ಅಗತ್ಯ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ, ಗ್ರಾಮದ ಪಾಳು ಬಿದ್ದ ಮನೆಯ ಮೇಲೆ ಬ್ಯಾಗ್ ಪತ್ತೆ ದೊರೆತಿದೆ. ಇದು ಬ್ಯಾಂಕ್‌ನಲ್ಲಿ ಕದ್ದ ಚಿನ್ನ, ಹಣ ತುಂಬಿಕೊಂಡು ಹೋದ ಬ್ಯಾಗ್ ಆಗಿದ್ದು, ಇದರಲ್ಲಿ 41.04 ಲಕ್ಷ ರೂ. ನಗದು ಹಾಗೂ 136 ಪಾಕೇಟ್‌ಗಳಲ್ಲಿ 6.54 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಎಸ್‌ಪಿ ವಿವರಿಸಿದರು.

ಬ್ಯಾಂಕ್ ದರೋಡೆಕೋರರು ಕೃತ್ಯಕ್ಕೆ ಬಳಸಿದ ವಾಹನ ಸಹ ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಸೋಲಾಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಹಾಗೂ ಕಾರು ಕಳ್ಳತನ ಮಾಡಿರುವ ಆರೋಪಿಗಳೇ ಈ ಬ್ಯಾಂಕ್ ದರೋಡೆ ಸಹ ಮಾಡಿದ್ದಾರೆ. ಸೋಲಾಪುರ ಪೊಲೀಸ್ ತನಿಖಾ ತಂಡ ಹಾಗೂ ನಮ್ಮ ತನಿಖಾ ತಂಡ ಜಂಟಿಯಾಗಿ ಆದಷ್ಟು ಬೇಗ ಉಳಿದ ವಸ್ತುಗಳು ಹಾಗೂ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.