ಬೆಳಗಾವಿ : ರಮೇಶ್ ಕತ್ತಿ ಅವರು ಗೆದ್ದಿರುವ ಬೆನ್ನಲ್ಲೇ ಅವರಿಗೆ ಈಗ ಸಂಕಟ ಎದುರಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚಿಕ್ಕೋಡಿಯ ಮಾಜಿ ಸಂಸದರು ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು ಆಗಿರುವ ರಮೇಶ ಕತ್ತಿ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ರಮೇಶ ಕತ್ತಿ ಅವರನ್ನು ಈ ಕೂಡಲೇ ಬಂಧಿಸುವಂತೆ ಒತ್ತಾಯಿಸಿ ರವಿವಾರ ರಾತ್ರಿ ವಾಲ್ಮೀಕಿ ಸಮಾಜದವರು ಪ್ರತಿಭಟನೆ ನಡೆಸಿದರು. ಈ ಕೂಡಲೇ ರಮೇಶ್ ಕತ್ತಿ ಅವರನ್ನು ಬಂಧಿಸದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರವಿವಾರ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ಸಂದರ್ಭದಲ್ಲಿ ಅವರು ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದರು. ಜಾರಕಿಹೊಳಿ ಸಹೋದರರನ್ನು ಟೀಕಿಸುವ ಸಂದರ್ಭದಲ್ಲಿ ಇಡೀ ವಾಲ್ಮೀಕಿ ಸಮುದಾಯಕ್ಕೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಇದನ್ನೇ ಆಧಾರವಾಗಿಟ್ಟುಕೊಂಡು ಸಮಾಜದ ಮುಖಂಡ ರಾಜಶೇಖರ ತಳವಾರ ಅವರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೋಮವಾರ (ಅಕ್ಟೋಬರ 20 ರಂದು) ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ನನ್ನ ಹೇಳಿಕೆ ತಿರುಚಲಾಗಿದೆ : ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದ ನಂತರ ಅಭಿಮಾನಿಗಳು ಡಾಲ್ಫಿ ಸಂಗೀತ ಹಚ್ಚಿ ಮೆರವಣಿಗೆಗೆ ಒತ್ತಾಯ ಮಾಡಿದ್ದಾರೆ. ಆಗ ನಾನು ಬ್ಯಾಡರೋ(ಬೇಡ) ಎಂದೆ. ಈ ಹೇಳಿಕೆ ತಿರುಚಿ ಜಾತಿ ನಿಂದನೆ ಎಂದು ವಿಡಿಯೋ ಮಾಡಿದ್ದಾರೆ. ನನ್ನ ಗೆಲುವು ಸಹಿಸಲಾಗದವರು ಉದ್ದೇಶಪೂರ್ವಕವಾಗಿ ವಾಲ್ಮೀಕಿ ಸಮುದಾಯದ ವಿರೋಧಿ ಎಂಬಂತೆ ನನ್ನನ್ನು ಬಿಂಬಿಸಿದ್ದಾರೆ. ನಾನು ಯಾರನ್ನು ಉದ್ದೇಶಿಸಿ ಮಾತನಾಡಿಲ್ಲ. ಇಷ್ಟಾಗಿಯೂ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುವೆ ಎಂದು ರಮೆಶ ಕತ್ತಿ ಅವರು ಪ್ರತಿಕ್ರಿಯಿಸಿದ್ದಾರೆ.

