ಮುಂಬೈ: ಮಹಾರಾಷ್ಟ್ರದ ಪರ್ಭಾನಿಯಲ್ಲಿ 19 ವರ್ಷದ ಯುವತಿಯೊಬ್ಬಳು ಚಲಿಸುತ್ತಿರುವ ಬಸ್ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ನಂತರ ತನ್ನ ಪತಿ ಎಂದು ಹೇಳಿಕೊಂಡ ವ್ಯಕ್ತಿಯ ಸಹಾಯದಿಂದ ನವಜಾತ ಗಂಡು ಮಗುವನ್ನು ತಾಯಿಯು ಬಸ್ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ. ಬಸ್ಸಿನಿಂದ ರಸ್ತೆಗೆ ಎಸೆದ ನಂತರ ಮಗು ಮೃತಪಟ್ಟಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 6:30 ರ ಸುಮಾರಿಗೆ ಪತ್ರಿ-ಸೇಲು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಟ್ಟೆಯಲ್ಲಿ ಸುತ್ತಿ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದನ್ನು ನಿವಾಸಿಯೊಬ್ಬರು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಂತ ಪ್ರಯಾಗ್ ಟ್ರಾವೆಲ್ಸನ ಸ್ಲೀಪರ್ ಕೋಚನಲ್ಲಿ ಪುಣೆಯಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದ ದಂಪತಿ ರಿತಿಕಾ ಧೇರೆ ಮತ್ತು ಅಲ್ತಾಫ ಶೇಖ ಎಂದು ಗುರುತಿಸಲಾಗಿದೆ.
“ಋತಿಕಾ ಧೇರೆ ಎಂದು ಗುರುತಿಸಲಾದ ಯುವತಿಯೊಬ್ಬರು ಸಂತ ಪ್ರಯಾಗ ಟ್ರಾವೆಲ್ಸನ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಪುಣೆಯಿಂದ ಪರ್ಭಾನಿಗೆ ತಮ್ಮ ಪತಿ ಎಂದು ಹೇಳಿಕೊಂಡ ಅಲ್ತಾಫ ಶೇಖ ಜೊತೆ ಪ್ರಯಾಣಿಸುತ್ತಿದ್ದಳು. ಪ್ರಯಾಣದ ಸಮಯದಲ್ಲಿ, ಗರ್ಭಿಣಿಯಾಗಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗು ಜನಿಸಿತು. ಆದರೆ, ದಂಪತಿ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬಸ್ಸಿನಿಂದ ಹೊರಗೆ ಎಸೆದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೇಲಿನ ಮತ್ತು ಕೆಳಗಿನ ಬರ್ತ್ಗಳನ್ನು ಹೊಂದಿರುವ ಸ್ಲೀಪರ್ ಬಸ್ ಚಾಲಕ ಕಿಟಕಿಯಿಂದ ಏನೋ ಹೊರಗೆ ಎಸೆಯಲ್ಪಟ್ಟಿರುವುದನ್ನು ಗಮನಿಸಿದ್ದಾನೆ. ಅದರ ಬಗ್ಗೆ ವಿಚಾರಿಸಿದಾಗ, ಬಸ್ ಪ್ರಯಾಣದ ಕಾರಣದಿಂದಾಗಿ ತನ್ನ ಹೆಂಡತಿಗೆ ವಾಕರಿಕೆ ಬಂದು ವಾಂತಿ ಮಾಡಿಕೊಂಡಿದ್ದಾಳೆ ಎಂದು ಶೇಖ್ ಅವರಿಗೆ ಹೇಳಿದ್ದಾನೆ ಎಂದು ಅವರು ಹೇಳಿದರು.
ವ್ಯಕ್ತಿಯೊಬ್ಬರು ಗಮನಿಸಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟದ್ದನ್ನು ಪರಿಶೀಲಿಸಿದಾಗ “ಅದು ಗಂಡು ಮಗು ಎಂಬುದನ್ನು ಕಂಡು ಆಘಾತಕ್ಕೊಳಗಾದರು” ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ, ಸ್ಥಳೀಯ ಪೊಲೀಸ್ ಗಸ್ತು ತಂಡ ಬಸ್ಸನ್ನು ಬೆನ್ನಟ್ಟಿ ದಂಪತಿಯನ್ನು ವಶಕ್ಕೆ ಪಡೆದಿದ್ದು
ದಂಪತಿ ಮಗುವನ್ನು ಬಸ್ಸಿನಿಂದ ಹೊರಗೆ ಎಸೆದಿದ್ದಾಗಿ ಒಪ್ಪಿಕೊಂಡರು ಮತ್ತು ಮಗುವನ್ನು ಬೆಳೆಸಲು ಸಾಧ್ಯವಾಗದ ಕಾರಣ ಹಾಗೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಇಬ್ಬರು ಪರ್ಭಾನಿಯವರಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಪುಣೆಯಲ್ಲಿ ವಾಸಿಸುತ್ತಿದ್ದರು. ದಂಪತಿ ತಾವು ವಿವಾಹಿತರು ಎಂದು ಹೇಳಿಕೊಂಡರೂ ಯಾವುದೇ ದಾಖಲೆಗಳನ್ನು ತೋರಿಸಲು ವಿಫಲರಾದರು. ಅವರನ್ನು ವಶಕ್ಕೆ ಪಡೆದ ನಂತರ, ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲೀಸರು ಪರ್ಭಾನಿಯ ಪತ್ರಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಹೊಸ ಬಿಎನ್ಎಸ್ ಕಾನೂನಿನ ಸೆಕ್ಷನ್ 94 (3) ಮತ್ತು (5) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

