ಬೆಳಗಾವಿ : ಹಿಪ್ಪರಗಿ ಅಣೆಕಟ್ಟಿನ ಗೇಟ್ ಸಂಖ್ಯೆ 22 ಮುರಿದ ಪರಿಣಾಮ ಕೃಷ್ಣಾ ನದಿಯಲ್ಲಿ ಸುಮಾರು ಮೂರು ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗಿದೆ. ಇದರಿಂದ ಮುಂದಿನ ಒಂದು ತಿಂಗಳೊಳಗೆ ನದಿಯ ಪಾತ್ರ ಸಂಪೂರ್ಣವಾಗಿ ಒಣಗುವ ಸಾಧ್ಯತೆ ಉಂಟಾಗಿದೆ. ಈ ಪರಿಸ್ಥಿತಿ ಗಂಭೀರವಾಗಿದ್ದು, ನದಿತೀರದ ಗ್ರಾಮಗಳಿಗೆ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಬಹುದು ಎಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
ಈ ಸಂಕಷ್ಟವನ್ನು ಗಮನದಲ್ಲಿಟ್ಟು, ಇದೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು. ಚಿಕ್ಕೋಡಿ, ಅಥಣಿ, ಕಾಗವಾಡ ಮತ್ತು ಜಮಖಂಡಿ ತಾಲ್ಲೂಕುಗಳ ಎಲ್ಲಾ ಶಾಸಕರನ್ನೊಳಗೊಂಡ ನಿಯೋಗವು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಕೋಯ್ನಾ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರು ಬಿಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ರಾಜು ಕಾಗೆ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಜು ಕಾಗೆ, ಹಿಪ್ಪರಗಿ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಹೋದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗುವ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಆತಂಕವಿದೆ ಎಂದರು. ಈ ಸಮಸ್ಯೆಯನ್ನು ಮನಗಂಡು ನಾವು ಮಹಾರಾಷ್ಟ್ರ ಸರ್ಕಾರವನ್ನು ಭೇಟಿ ಮಾಡಿ, ಅಗತ್ಯವಿರುವ ಹಣವನ್ನು ಪಾವತಿಸಿ ನೀರು ಪಡೆಯಲು ಪ್ರಯತ್ನಿಸುತ್ತೇವೆ. ಹಿಪ್ಪರಗಿ ಅಣೆಕಟ್ಟಿನ ಗೇಟ್‌ಗಳಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದ್ದು, ಅದನ್ನು ತಡೆಹಿಡಿಯುವುದಾಗಿ ಎಂಜಿನಿಯರ್‌ಗಳು ಭರವಸೆ ನೀಡಿದ್ದಾರೆ ಎಂದೂ ಅವರು ಹೇಳಿದರು.
ಪ್ರತಿವರುಷ ಬೇಡಿಗೆಯಲ್ಲಿ ಅಂದರೆ ಮಾರ್ಚ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹರಿಯುವ ಕೃಷ್ಣ ನದಿ ಬರಿದಾಗುತ್ತದೆ, ಅಂತೆಯೇ ಮಹಾರಾಷ್ಟ್ರ ಕೊಯ್ನ್ ಜಲಾಶಯದಿಂದ ಹಂತ ಹಂತವಾಗಿ 2 ಟಿಎಂಸಿ ನೀರು ಬಿಡುಗಡೆ ಮಾಡುತ್ತದೆ. ಕಿತ್ತೂರು ಕರ್ನಾಟಕದ ಬೆಳಗಾವಿ, ಬಾಗಲಕೋಟ, ಕಲ್ಯಾಣ ಕರ್ನಾಟಕದ ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ತಪ್ಪುತ್ತದೆ.
ಹಿಪ್ಪರಗಿ ಜಲಾಷಯದ 22 ನಂಬರ್ ಗೇಟ್ ಮುರಿದಿರುವುದರಿಂದ ಸುಮಾರು 3 ಟಿಎಂಸಿ ನೀರು ಪೋಲಾಗಿರುವದರಿಂದ ನದಿ ಫೆಬ್ರವರಿ ಮೊದಲ ವಾರದಲ್ಲೇ ಬರಿದಾಗುವ ಸಾಧ್ಯತೆಯಿದೆ. ಜನ ಜಾನುವಾರುಗಳಿಗೆ ತೀವ್ರ ತೊಂದರೆಯಾಗುವ ಸಾಧ್ಯತೆಯಿದೆ, ಮಹಾರಾಷ್ಟ್ರ ನೀರು ಬಿಟ್ಟರೆ ಬಿಕ್ಕಟ್ಟು ಪರಿಹಾರವಾಗಲಿದೆ ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಮಹಾರಾಷ್ಟ್ರವನ್ನು ಶೀಘ್ರ ಸಂಪರ್ಕಿಸಲು ಒತ್ತಡ ತರುತ್ತೇವೆ ಅಲ್ಲದೇ ತಾವು ಬೆಳಗಾವಿ, ಬಾಗಲಕೋಟ ಜಿಲ್ಲೆಗಳ ಶಾಸಕರ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಈ ಕುರಿತು ಬೆಟ್ಟಿಯಾಗಿ ವಿನಂತಿಸಿಕೊಳ್ಳುತ್ತೇವೆ. ಸರಕಾರ ಕೂಡ ತನ್ನ ಹಂತದಲ್ಲಿ ಪ್ರಯತ್ನಿಸಲಿದೆ ಎಂದು ಕಾಗೆ ತಿಳಿಸಿದ್ದಾರೆ.



