ಬಂದರು ನಿರ್ಮಾಣ ವಿರೋಧಿಸಿ ಜೀವ ಲೆಕ್ಕಿಸದೇ ಸಮುದ್ರಕ್ಕಿಳಿದು ಬೃಹತ್ ಪ್ರತಿಭಟನೆ

A B Dharwadkar
ಬಂದರು ನಿರ್ಮಾಣ ವಿರೋಧಿಸಿ ಜೀವ ಲೆಕ್ಕಿಸದೇ ಸಮುದ್ರಕ್ಕಿಳಿದು ಬೃಹತ್ ಪ್ರತಿಭಟನೆ

ಕಾರವಾರ, ಫೆ. ೨೫:ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರು ರಸ್ತೆ ಸರ್ವೆ ವಿರೋಧಿಸಿ ಸ್ಥಳೀಯರು ಹಾಗೂ ಮೀನುಗಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಬಂದರು ನಿರ್ಮಾಣವನ್ನು ಕೈ ಬಿಡುವಂತೆ ಕೆಲವರು ಸಮುದ್ರಕ್ಕೆ ಹಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊನ್ನಾವರದ ಕಾಸರಕೋಡಿನಲ್ಲಿ‌ ಬಂದರು ನಿರ್ಮಾಣ‌ ಸಂಬಂಧ ಸಂಪರ್ಕ ರಸ್ತೆಯ ಸಮೀಕ್ಷೆ‌ ನಡೆಸಲು ಅನುಕೂಲವಾಗಲು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿ ಕೆ.‌ಲಕ್ಷ್ಮೀಪ್ರಿಯಾ ಅವರು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಮಾಡಿದ್ದರು. ಆದರೆ ಆದೇಶವನ್ನು ಲೆಕ್ಕಿಸದೇ ಸ್ಥಳೀಯ ನಾಗರಿಕರು ಶಾಲಾ ಮಕ್ಕಳೊಂದಿಗೆ ಸೇರಿ ಸರ್ವೆ ಕಾರ್ಯ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.

ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಹತ್ತಿರದಲ್ಲಿರುವ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದ ಸಮುದ್ರಗುಂಟ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಬಂದರು ಅಭಿವೃದ್ಧಿ ಯೋಜನಾ ಸ್ಥಳದವರೆಗೆ ಹೋಗುವ ರಸ್ತೆ ಕಾಮಗಾರಿಯ ಸರ್ವೆ ಕಾರ್ಯ ನಡೆಯುವ ಸುತ್ತಲಿನ ಪ್ರದೇಶದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163 ರನ್ವಯ ಫೆಬ್ರವರಿ 25 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು.

ಆದರೆ ಆದೇಶದ ನಡುವೆಯೂ ಸ್ಥಳೀಯರು ಸರ್ವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ಕೈಗೊಂಡಿದ್ದಾರೆ.
ವಿರೋಧದ ನಡುವೆಯೂ ಟೊಂಕಾದಲ್ಲಿ ವಾಣಿಜ್ಯ ಬಂದರಿಗೆ ರಸ್ತೆ ನಿರ್ಮಾಣಕ್ಕೆ ಸರ್ವೆ ಕಾರ್ಯ ಪ್ರಾರಂಭವಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ ನಡುವೆ ಸರ್ವೆ ಅಧಿಕಾರಿಗಳು ಗಡಿ ಗುರುತು ಮಾಡುತ್ತಿದ್ದಾಗ ಸ್ಥಳೀಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು ಎರಡು ಬಸ್ ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲಾಗಿದೆ. ಬಂಧಿತರನ್ನು ಬಿಡದೇ ಇದ್ದಲ್ಲಿ ಸಮುದ್ರಕ್ಕೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ.

ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ವಾಣಿಜ್ಯ ಬಂದರು ಸರ್ವೆ ಕೆಲಸ ನಡೆಯುವ ಸ್ಥಳಕ್ಕೆ ಬಂದು ಮೀನುಗಾರರಿಗೆ ರಕ್ಷಣೆ ನೀಡಬೇಕು. ನಾಲ್ಕು ಗಂಟೆ ಒಳಗೆ ಬಂಧಿತರನ್ನು ಬಿಡುಗಡೆ ಮಾಡಲು ಕ್ರಮ‌ ಕೈಗೊಳ್ಳದೇ ಇದ್ದಲ್ಲಿ ಸಚಿವರ ಹೆಸರು ಬರೆದಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿದ್ಯಾರ್ಥಿನಿ ಅಪೇಕ್ಷಾ ಆರ್. ತಾಂಡೇಲ್ ಆಕ್ರೋಶ ಹೊರಹಾಕಿದರು.

ಕಂಪನಿಗೆ ಪೊಲೀಸರ ರಕ್ಷಣೆ ನೀಡಲಾಗಿದೆ. ಮೀನುಗಾರರಿಗೆ ಸಚಿವರ ರಕ್ಷಣೆ ಬೇಕು, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನಿಮ್ಮ ಜೊತೆ ನಾನು ಸದಾ ಇದ್ದೇನೆ ಎಂದು ಮತ ಪಡೆದಿದ್ದರು. ಈಗ ಅವರು ಕೂಡಲೇ ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.