ಹೊಸದಿಲ್ಲಿ, ನವೆಂಬರ 10: ದೆಹಲಿಯ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಸೋಮವಾರ ಸಂಜೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿ, 24 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ರಾಷ್ಟ್ರದ ಉನ್ನತ ಭದ್ರತಾ ವಲಯದಲ್ಲಿ ತಲ್ಲಣ ಉಂಟು ಮಾಡಿದ್ದು, ದೆಹಲಿಯಷ್ಟೇ ಅಲ್ಲದೇ ದೇಶದ ಪ್ರಮುಖ ನಗರಗಳಲ್ಲಿ ಹೈಅಲರ್ಟ ಘೋಷಿಸಲಾಗಿದೆ.
ಸಂಜೆ 6.55ರ ಸುಮಾರಿಗೆ ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, ನಂತರ ಮೂರರಿಂದ ಆರು ಕಾರುಗಳು ಮತ್ತು ಮೂರು ಆಟೋಗಳು ಬೆಂಕಿಗೆ ಆಹುತಿಯಾದವು. ಘಟನೆಯ ಸಮಯದಲ್ಲಿ ಕೆಂಪು ಕೋಟೆ ಮತ್ತು ಚಾಂದನಿ ಚೌಕ್ ಪ್ರದೇಶಗಳಲ್ಲಿ ಭಾರಿ ಜನಸಮೂಹವಿತ್ತು. ಸ್ಫೋಟದ ತೀವ್ರತೆಗೆ ಹಲವರ ದೇಹಗಳು ಛಿದ್ರ ಛಿದ್ರವಾಗಿದ್ದು, ದೃಶ್ಯ ಭೀಕರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಅಗ್ನಿಶಾಮಕ ಇಲಾಖೆಗೆ ಸಂಜೆ 6.55ಕ್ಕೆ ಕರೆ ಬಂದ ತಕ್ಷಣ ಏಳು ಅಗ್ನಿಶಾಮಕ ವಾಹನಗಳು ಮತ್ತು 15 ಆಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿದವು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಹಲವು ಗಂಟೆಗಳ ಕಾಲ ಹರಸಾಹಸ ಪಡಿದರು. ಹಲವಾರು ಶವಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಸ್ಫೋಟದ ತೀವ್ರತೆಯಿಂದ ಹತ್ತಿರದ ಬೀದಿ ದೀಪಗಳು, ಅಂಗಡಿಗಳು ಮತ್ತು ಪಾರ್ಕ ಮಾಡಿದ್ದ ವಾಹನಗಳಿಗೆ ಹಾನಿಯಾಗಿದೆ. ಸ್ಫೋಟದ ನಂತರ ಸ್ಥಳಕ್ಕೆ ದೆಹಲಿ ಪೊಲೀಸ್ ವಿಶೇಷ ಘಟಕದ ಹಿರಿಯ ಅಧಿಕಾರಿಗಳು, ಉಪಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್ ಎಸ್ ಜಿ ಮತ್ತು ಎನ್ ಐಎ ತಂಡಗಳು ಸಹ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಭಿಸಿವೆ.
ಸ್ಫೋಟದ ನಿಖರ ಕಾರಣ ಇನ್ನೂ ಪತ್ತೆಯಾಗದಿದ್ದರೂ, ಇದೇ ದಿನ ಬೆಳಿಗ್ಗೆ ದೆಹಲಿ ಪೊಲೀಸರು ನಿಷೇಧಿತ ಸಂಘಟನೆಗಳಿಗೆ ಸಂಪರ್ಕ ಹೊಂದಿದ್ದ ಅಂತರರಾಜ್ಯ ಭಯೋತ್ಪಾದಕ ಗುಂಪನ್ನು ಪತ್ತೆಹಚ್ಚಿ 2,900 ಕಿಲೋಗ್ರಾಂ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಂಡಿದ್ದರು. ಇದೇ ರಾಸಾಯನಿಕವನ್ನು ಶಕ್ತಿಶಾಲಿ ಸ್ಪೋಟಕ ಸಾಧನಗಳು ತಯಾರಿಸಲು ಬಳಸುವ ಯೋಜನೆ ಇದ್ದುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಂಪು ಕೋಟೆ ಸ್ಫೋಟಕ್ಕೂ ಉಗ್ರಗಾಮಿ ನಂಟು ಇರಬಹುದೆಂಬ ಶಂಕೆ ಹೆಚ್ಚಾಗಿದೆ.
“ಎಲ್ಲರೂ ಸಾಯ್ತೀವೋ ಅನ್ನಿಸ್ತು” : ಕಣ್ಣಾರೆ ಕಂಡವರ ಅನುಭವ
ಸ್ಥಳೀಯ ನಿವಾಸಿ ರಾಜಧರ ಪಾಂಡೆ ಹೇಳುವಂತೆ, “ನನ್ನ ಮನೆಯಿಂದಲೇ ಬೆಂಕಿಯ ಶಿಖರಗಳು ಗೋಚರಿಸಿದವು. ಭಾರೀ ಸದ್ದು ಕೇಳಿದ ತಕ್ಷಣ ಹೊರಗೆ ಬಂದು ನೋಡಿದಾಗ ಎಲ್ಲೆಡೆ ಬೆಂಕಿಯೇ ಕಾಣಿಸುತ್ತಿತ್ತು.” ಮತ್ತೊಬ್ಬ ಅಂಗಡಿ ಮಾಲೀಕನ ಪ್ರಕಾರ, “ನನ್ನ ಜೀವನದಲ್ಲಿ ಇಷ್ಟು ಭಾರೀ ಸದ್ದು ಎಂದೂ ಕೇಳಿರಲಿಲ್ಲ. ಸ್ಫೋಟದ ತೀವ್ರತೆಗೆ ಮೂರು ಬಾರಿ ನೆಲಕ್ಕುರುಳಿದೆ. ಎಲ್ಲರೂ ಸಾಯ್ತೀವೋ ಅನ್ನಿಸ್ತು.”
ಫರೆನ್ಸಿಕ್ ತಜ್ಞರು ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸುತ್ತಿದ್ದು, ಕೆಂಪು ಕೋಟೆ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಜನರನ್ನು ದೂರ ಇರಿಸಲಾಗಿದ್ದು, ಪ್ರಮುಖ ರಸ್ತೆಗಳನ್ನೂ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ದೆಹಲಿ ಪೊಲೀಸ್ ಇಲಾಖೆ ನಗರಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದು, ನಾಕಾಬಂದಿ, ವಾಹನ ತಪಾಸಣೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಶೋಧ ಕಾರ್ಯ ನಡೆಯುತ್ತಿದೆ.
ಘಟನೆಯ ನಂತರ ದೇಶದಾದ್ಯಂತ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ. ರಾಷ್ಟ್ರದ ಹೃದಯಭಾಗದಲ್ಲೇ ಇಂತಹ ಭಾರೀ ಸ್ಫೋಟ ಸಂಭವಿಸಿರುವುದರಿಂದ ಭದ್ರತೆಯ ಕಾರ್ಯಕ್ಷಮತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

