ಮುಂಬೈ, 16: ಖ್ಯಾತ ಹಿಂದಿ ಚಿತ್ರನಟ, ನವಾಬ ಸೈಫ್ ಅಲಿ ಖಾನ್ ಅವರಿಗೆ ಚೂರಿಯಿಂದ ಇರಿಯಲಾಗಿದ್ದು ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬಯಿಯ ಬಾಂದ್ರಾ ಪಶ್ಚಿಮದಲ್ಲಿರುವ ಕರೀನಾ ಕಪೂರ ಅವರ ನಿವಾಸಕ್ಕೆ ಗುರುವಾರ (ಜನವರಿ 16) ನಸುಕಿನ ವೇಳೆ ಕಳ್ಳನೊಬ್ಬ ನುಗ್ಗಿದ್ದು, ಆತ ಚೂರಿಯಿಂದ ಇರಿದ ಕಾರಣ ಸೈಫ್ ಅಲಿ ಖಾನ್ ಗಾಯಗೊಂಡಿದ್ದಾರೆ. ಗುರುವಾರ ಮುಂಜಾನೆ 2:30 ರ ಸುಮಾರಿಗೆ ಈ ಘಟನೆ ನಡೆದಿದೆ.
ಸೈಫ್ ಅಲಿ ಖಾನ್ ತನ್ನ ಇತರ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಮಲಗಿದ್ದಾಗ ದರೋಡೆಕೋರ ಈ ಕೃತ್ಯವೆಸಗಿದ್ದ. ಮನೆಯಲ್ಲಿದ್ದವರು ಎಚ್ಚರಗೊಂಡ ಕೂಡಲೇ ದರೋಡೆಕೋರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂದ್ರಾ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಶೋಧ ನಡೆಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ಘಟನೆಯನ್ನು ದೃಢಪಡಿಸಿದ್ದು, ಸೈಫ್ ಅಲಿಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ದರೋಡೆಕೋರನೊಂದಿಗಿನ ಸಂಘರ್ಷದಲ್ಲಿ ಅವರು ಇರಿದಿದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಿದ್ದೇವೆ. ಮುಂಬೈ ಕ್ರೈಂ ಬ್ರಾಂಚ್ ಕೂಡ ಘಟನೆಯ ಬಗ್ಗೆ ಸಮಾನಾಂತರ ತನಿಖೆ ನಡೆಸುತ್ತಿದೆ ಎಂದು ಅವರು ವಿವರಿಸಿದರು. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದು ಆರೋಪಿ ಪತ್ತೆಗಾಗಿ ಶೋಧ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕಳ್ಳನೊಬ್ಬ ತಡ ರಾತ್ರಿ – ನಸುಕಿನ ವೇಳೆ ಬಾಂದ್ರಾದಲ್ಲಿರುವ ಕರೀನಾ ಕಪೂರ್ ಅವರ ಐಷಾರಾಮಿ ಮನೆಗೆ ನುಗ್ಗಿದ್ದಾನೆ. ಇದೇ ವೇಳೆ ಮನೆಯ ಕಾವಲು ಸಿಬ್ಬಂದಿ ಕಳ್ಳ, ಕಳ್ಳ ಎಂದು ಕೂಗಿಕೊಂಡ ಕಾರಣ ಸೈಫ್ ಅಲಿ ಖಾನ್ ಎಚ್ಚರಗೊಂಡಿದ್ದರು. ಕಳ್ಳ ಸಿಕ್ಕಿ ಬೀಳುವ ಭಯದಲ್ಲಿದ್ದಾಗ ಸಂಘರ್ಷ ಸಂಭವಿಸಿದ್ದು, ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡರು. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮನೆ ಕೆಲಸದವರು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಅವರು ತಮ್ಮ ಪತ್ನಿ ಕರೀನಾ ಕಪೂರ ಖಾನ್ ಮತ್ತು ಇಬ್ಬರು ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ಸದ್ಗುರು ಶರಣ ಅಪಾರ್ಟಮೆಂಟನಲ್ಲಿ ವಾಸಿಸುತ್ತಿದ್ದಾರೆ.
ನವಾಬ ಸೈಫ್ ಅಲಿ ಖಾನ್ ಅವರನ್ನು ನಸುಕಿನ 3.30ಕ್ಕೆ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಶರೀರದಲ್ಲಿ ಆರು ಗಾಯಗಳಿದ್ದು, ಅವುಗಳ ಪೈಕಿ 2 ಗಂಭೀರ ಗಾಯಗಳಾಗಿವೆ. ಒಂದು ಗಾಯ ಬೆನ್ನುಮೂಳೆಗೆ ಸಮೀಪ ಇದ್ದು, ಆಪರೇಷನ್ ನಡೆಸಿದ್ದೇವೆ. ನರಶಸ್ತ್ರ ಚಿಕಿತ್ಸಕ ನಿತಿನ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞ ನಿಶಾ ಗಾಂಧಿ ಅವರನ್ನೊಳಗೊಂಡ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ.