ಹೊಸದಿಲ್ಲಿ: ಭಾರತದ ಜನಸಂಖ್ಯೆಯ ಶೇ 27 ರಷ್ಟು ಜನರು ಮಾತ್ರ ಕೋವಿಡ್ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದು ಜನರು ಜನನಿಬಿಡ ಸ್ಥಳಗಳಲ್ಲಿ ಜಾಗ್ರತೆ ವಹಿಸಲು ಮತ್ತು ಮಾಸ್ಕ ಧರಿಸಲು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿಕೆ ಪೌಲ್ ಬುಧವಾರ ಸಲಹೆ ನೀಡಿದ್ದಾರೆ.
ಆದರೆ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ.ಜನಸಂದಣಿ ಇರುವಪ್ರದೇಶಗಳಲ್ಲಿ ಜನರು ಮಾಸ್ಕ ಧರಿಸಬೇಕು. ಹೃದಯ ರೋಗ, ಬಿಪಿ, ಉಸಿರಾಟದ ತೊಂದರೆ ಇರುವವರು ಅಥವಾ ವಯಸ್ಸಾದವರುವಿಶೇಷವಾಗಿ ಇದನ್ನು ಅನುಸರಿಸಬೇಕು ಎಂದು ಪೌಲ್ ಹೇಳಿದರು.
ಜಾಗತಿಕವಾಗಿ, ವಿಶೇಷವಾಗಿ ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಮನ್ಸೂಖಮಾಂಡವಿಯಾ ಅವರು ನಡೆಸಿದ ಪರಿಶೀಲನಾ ಸಭೆಯ ನಂತರ ಪೌಲ್ ಹೇಳಿಕೆ ನೀಡಿದ್ದಾರೆ.‘ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ, ನಾನು ಇಂದು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಕೋವಿಡ್ ಇನ್ನೂ ಮುಗಿದಿಲ್ಲ. ಎಲ್ಲರು ಎಚ್ಚರದಿಂದ ಇರುವಂತೆ ಮತ್ತು ಕಣ್ಗಾವಲು ಬಲಪಡಿಸುವಂತೆ ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ‘ ಎಂದು ಮಾಂಡವಿಯಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಜನದಟ್ಟಣೆ, ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು, ಇದು ಜನರಿಗೆ ಪ್ರಮುಖ ಎಂದಿರುವಡಾ. ವಿ.ಕೆ. ಪೌಲ್, ದೇಶದಲ್ಲಿ ಕೇವಲ ಶೇ. 27 ರಿಂದ 28 ರಷ್ಟು ಜನರಿಗೆ ಮಾತ್ರ ಕೋವಿಡ್ ಬೂಸ್ಟರ್ ಡೋಸ್ ನೀಡಲಾಗಿದೆ. ಇತರರು ಕೂಡಾ ಈ ಡೋಸ್ ಪಡೆಯಬೇಕಾಗಿದೆ. ಪ್ರತಿಯೊಬ್ಬರಿಗೂ ಮುನ್ನೆಚ್ಚರಿಕಾ ಡೋಸ್ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಕಾರ್ಯದರ್ಶಿಗಳು, ಔಷಧೀಯ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಆಯುಷ್, ಭಾರತೀಯ ವೈದ್ಯಕೀಯ ಸಂಶೋಧನಾಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್, ಪೌಲ್ ಮತ್ತು ಇಮ್ಯುನೈಸೇಶನ್ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾಗುಂಪು (ಎನ್ಟಿಎಜಿಐ) ಅಧ್ಯಕ್ಷ ಡಾ ಎನ್.ಕೆ. ಅರೋರಾ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಜಪಾನ್, ಅಮೆರಿಕ, ರಿಪಬ್ಲಿಕ್ ಆಫ್ ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಪ್ರಕರಣಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಹೊಸ ರೂಪಾಂತರಗಳನ್ನು ಟ್ರ್ಯಾಕ್ ಮಾಡಲು ವೈರಾಣುವಿನ ವಂಶವಾಹಿಗಳ ಸಂರಚನೆಯ ವಿಶ್ಲೇಷಣೆಗಾಗಿ (ಜೀನೋಮ್ ಸೀಕ್ವೆ ನ್ಸಿಂಗ್ಗೆ) ಕ್ರಮವನ್ನು ಹೆಚ್ಚಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ಸೂಚನೆ ನೀಡಿದೆ.
ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶಭೂಷಣ, ಇಂತಹ ಕ್ರಮವು ದೇಶದಲ್ಲಿ ಪ್ರಸಾರವಾಗುತ್ತಿರುವ ಕೊರೋನಾ ವೈರಸ್ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಮತ್ತು ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.