ಮತ್ತೆ ಟ್ರಂಪ್ ಸುಂಕಾಸ್ತ್ರ: ಔಷಧಿ ಆಮದುಗಳ ಮೇಲೆ ಶೇ.100 ಸುಂಕ !

A B Dharwadkar
ಮತ್ತೆ ಟ್ರಂಪ್ ಸುಂಕಾಸ್ತ್ರ: ಔಷಧಿ ಆಮದುಗಳ ಮೇಲೆ ಶೇ.100 ಸುಂಕ !

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಸುಂಕಗಳಿಗೆ ಸಂಬಂಧಿಸಿದ ದೊಡ್ಡ ಘೋಷಣೆ ಮಾಡಿದ್ದು, ಈ ಬಾರಿ ಗುರಿಯಾಗಿರುವುದು ಔಷಧ ವಲಯ. ಅಮೆರಿಕಾಗೆ ಆಮದು ಆಗುವ ಎಲ್ಲಾ ಪೇಟೆಂಟ್ ಹಾಗೂ ಬ್ರಾಂಡ್ ಮಾಡಿದ ಔಷಧಿಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಣೆ ಹೊರಡಿಸಿರುವ ಟ್ರಂಪ್, “ಔಷಧ ವಲಯದಲ್ಲಿ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ನಮ್ಮ ಉದ್ದೇಶ. ಯಾವುದೇ ಕಂಪನಿಗಳು ಅಮೆರಿಕದಲ್ಲಿ ತಮಗೆ ಸೇರಿದ ಉತ್ಪಾದನಾ ಘಟಕ ಸ್ಥಾಪಿಸದ ಹೊರತು, ಅಕ್ಟೋಬರ್ 1, 2025ರಿಂದ ಈ ಹೊಸ ನಿಯಮ ಜಾರಿಯಾಗಲಿದೆ,” ಎಂದು ಘೋಷಿಸಿದ್ದಾರೆ.

ಟ್ರಂಪ್ ಸರ್ಕಾರದ ಈ ನಿರ್ಧಾರದಿಂದಾಗಿ, ಅಮೆರಿಕಕ್ಕೆ ಔಷಧಿಗಳನ್ನು ರಫ್ತು ಮಾಡುವ ಹಲವಾರು ಅಂತರಾಷ್ಟ್ರೀಯ ಕಂಪನಿಗಳಿಗೆ ಭಾರೀ ಹೊಡೆತ ಬೀಳಲಿದೆ. ಭಾರತ, ಚೀನಾ, ಯುರೋಪ್ ಸೇರಿದಂತೆ ಅನೇಕ ದೇಶಗಳಿಂದ ಅಮೆರಿಕ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಔಷಧಿಗಳ ಬೆಲೆಗಳು ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಅಮೆರಿಕದೊಳಗಿನ ಆರೋಗ್ಯ ಸೇವೆಗಳ ವೆಚ್ಚ ಹೆಚ್ಚುವ ಭೀತಿ ವ್ಯಕ್ತವಾಗಿದೆ.

ಆದರೆ, ಟ್ರಂಪ್ ಆಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, “ಇಂತಹ ಕ್ರಮಗಳಿಂದ ಅಮೆರಿಕಾದಲ್ಲೇ ಔಷಧ ಉತ್ಪಾದನೆಗೆ ಹೂಡಿಕೆ ಹೆಚ್ಚುತ್ತದೆ. ಇದು ದೇಶೀಯ ಉದ್ಯೋಗ ಸೃಷ್ಟಿಗೆ ಹಾಗೂ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗುತ್ತದೆ,” ಎಂದು ತಿಳಿಸಿದ್ದಾರೆ.

ಹೊಸ ನಿಯಮದ ಪ್ರಕಾರ, ಈಗಾಗಲೇ ಅಮೆರಿಕದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಕಂಪನಿಗಳಿಗೆ ಮಾತ್ರ ವಿನಾಯಿತಿ ಸಿಗಲಿದೆ. ಇತರರು ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸದಿದ್ದರೆ, ಶೇ.100 ರಷ್ಟು ಸುಂಕವನ್ನು ಕಟ್ಟಬೇಕಾಗುತ್ತದೆ.

ಈ ನಿರ್ಧಾರವು ವಿಶ್ವ ಔಷಧಿ ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಹಲವು ದೇಶಗಳ ಕಂಪನಿಗಳು ತಮ್ಮ ತಂತ್ರಗಳನ್ನು ಮರುಪರಿಶೀಲಿಸುವಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.