ಮೃತ ಪುತ್ರನ ನೆನಪಿಗೆ ₹ 20,000 ಕೋಟಿ ದಾನ ಮಾಡಿದ ಅಮೇರಿಕಾದ ಭಾರತೀಯ

A B Dharwadkar
ಮೃತ ಪುತ್ರನ ನೆನಪಿಗೆ ₹ 20,000 ಕೋಟಿ ದಾನ ಮಾಡಿದ ಅಮೇರಿಕಾದ ಭಾರತೀಯ

 

 

ದೆಹಲಿ: ಅಮೆರಿಕದಲ್ಲಿ ಸ್ಕೀಯಿಂಗ್ ಅಪಘಾತದ ಬಳಿಕ ಚೇತರಿಸಿಕೊಳ್ಳುತ್ತಿದ್ದ ವೇದಾಂತ ಸಮೂಹದ ಅಧ್ಯಕ್ಷ ಭಾರತದ ಅನಿಲ್ ಅಗರ್ವಾಲ್ ತಮ್ಮ ಪುತ್ರ ಅಗ್ನಿವೇಶ್ ಅಗರ್ವಾಲ್, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದುರ್ಘಟನೆಯ ಬೆನ್ನಲ್ಲೇ, ತಮ್ಮ ಪುತ್ರನ ಕನಸನ್ನು ನನಸು ಮಾಡಲು ಅನಿಲ್ ಅಗರ್ವಾಲ್ ತಮ್ಮ ಸಂಪತ್ತಿನ ಶೇ.75 ರಷ್ಟನ್ನು ಸಮಾಜಕ್ಕೆ ನೀಡಿ, ತಾವು ಇನ್ನು ಮುಂದೆ ಸರಳ ಜೀವನ ನಡೆಸುವುದಾಗಿ ಘೋಷಿಸಿದ್ದಾರೆ. ಅದು ಸುಮಾರು 20,000 ಕೋಟಿ ರೂಪಾಯಿಗಳಸ್ಥಾಗುತ್ತದೆ.

ಅಮೆರಿಕದಲ್ಲಿ ಪುತ್ರ ಅಗ್ನಿವೇಶ್ ಅಗರ್ವಾಲ್ ಅವರ ಅಕಾಲಿಕ ಮರಣದ ಬಳಿಕ, ಅನಿಲ್ ಅಗರ್ವಾಲ್ ಅವರು ತಮ್ಮ ಒಟ್ಟು ಸಂಪತ್ತಿನ ಶೇ. 75ಕ್ಕಿಂತ ಅಧಿಕ ಪಾಲನ್ನು ಸಮಾಜ ಸೇವೆಗಾಗಿ ದಾನ ಮಾಡುವುದಾಗಿ ತಮ್ಮ ಹಳೆಯ ವಾಗ್ದಾನವನ್ನು ಪುನರುಚ್ಚರಿಸಿದ್ದಾರೆ.

ಫೋರ್ಬ್ಸ್‌ ಪ್ರಕಾರ ಅನಿಲ್‌ ಅಗರ್‌ವಾಲ್‌ 3 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 27,000 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇದರಲ್ಲಿ ಸುಮಾರು 20,000 ಕೋಟಿ ರೂ.ಗಳನ್ನು ದಾನವಾಗಿ ನೀಡುವುದಾಗಿ ಹೇಳಿದ್ದಾರೆ.

ಅಗ್ನಿವೇಶ್ ಅಗರ್ವಾಲ್ ಅವರು ಅಮೆರಿಕದಲ್ಲಿ ಸ್ಕೀಯಿಂಗ್ ಮಾಡುವಾಗ ಅಪಘಾತಕ್ಕೀಡಾಗಿದ್ದರು. ನ್ಯೂಯಾರ್ಕ್‌ನ “ಮೌಂಟ್ ಸಿನಾಯ್” ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದರು ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಚೇತರಿಕೆಯ ಹಾದಿಯಲ್ಲಿದ್ದ ಅಗ್ನಿವೇಶ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಭಾವುಕವಾಗಿ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಅನಿಲ್ ಅಗರ್ವಾಲ್, “ಇದು ನನ್ನ ಜೀವನದ ಅತ್ಯಂತ ಕತ್ತಲ ದಿನ. ತಂದೆಯೊಬ್ಬ ತನ್ನ ಮಗನಿಗೆ ಅಂತಿಮ ವಿದಾಯ ಹೇಳುವ ನೋವನ್ನು ವಿವರಿಸಲು ಪದಗಳೇ ಸಾಲದು. ತಂದೆಗಿಂತ ಮುಂಚೆ ಮಗ ಹೋಗಬಾರದು, ಆದರೆ ಈ ನಷ್ಟ ನಮ್ಮನ್ನು ಝರ್ಝರಿತಗೊಳಿಸಿದೆ,” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಗ್ನಿವೇಶ್ ಅವರು ಸದಾ ಭಾರತದ ಅಭಿವೃದ್ಧಿಯ ಬಗ್ಗೆ ಕನಸು ಕಾಣುತ್ತಿದ್ದರು ಎಂದು ಅನಿಲ್ ಅಗರ್ವಾಲ್ ಸ್ಮರಿಸಿದ್ದಾರೆ. “ಭಾರತ ಯಾವುದರಲ್ಲೂ ಹಿಂದೆ ಬೀಳಬಾರದು, ನಮ್ಮ ದೇಶ ಸ್ವಾವಲಂಬಿಯಾಗಬೇಕು ಎಂಬುದು ಅಗ್ನಿವೇಶ್ ನಂಬಿಕೆಯಾಗಿತ್ತು. ಯಾವುದೇ ಮಗು ಹಸಿವಿನಿಂದ ಮಲಗಬಾರದು, ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಕನಸನ್ನು ನಾವಿಬ್ಬರೂ ಹಂಚಿಕೊಂಡಿದ್ದೆವು,” ಎಂದು ಅಗರ್ವಾಲ್ ಸ್ಮರಿಸಿಕೊಂಡಿದ್ದಾರೆ.

ಈ ಕಾರಣಕ್ಕಾಗಿಯೇ, ತಾವು ಗಳಿಸಿದ ಸಂಪತ್ತಿನಲ್ಲಿ ಮುಕ್ಕಾಲು ಭಾಗವನ್ನು (ಶೇ. 75) ಸಮಾಜಕ್ಕೆ ಹಿಂತಿರುಗಿಸುವುದಾಗಿ ಈ ಹಿಂದೆ ಮಗನಿಗೆ ಮಾತು ಕೊಟ್ಟಿದ್ದೆ ಎಂದು ಅವರು ತಿಳಿಸಿದ್ದಾರೆ. ಇದೀಗ ಮಗನ ಅಗಲಿಕೆಯ ನಂತರ ಆ ಮಾತಿಗೆ ತಾವು ಬದ್ಧರಾಗಿರುವುದಾಗಿ ಮತ್ತು ಇನ್ಮುಂದೆ ತಾವು ಇನ್ನೂ ಸರಳ ಜೀವನವನ್ನು ನಡೆಸುವುದಾಗಿ ಅವರು ಘೋಷಿಸಿದ್ದಾರೆ. ಮಗನ ನೆನಪು ಮತ್ತು ಆತ ಸಮಾಜದ ಮೇಲೆ ಬೀರಿದ ಪ್ರಭಾವ ಸದಾ ಜೀವಂತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ವೇದಾಂತ ಸಮೂಹದ ಮುಖ್ಯಸ್ಥರು ಈ ಹಿಂದೆಯೂ ಕೂಡ ತಮ್ಮ ಸಂಪತ್ತಿನ ಬಹುಪಾಲನ್ನು ಲೋಕೋಪಕಾರಕ್ಕೆ ನೀಡುವ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು, ಇದೀಗ ಪುತ್ರ ಶೋಕದ ನಡುವೆಯೂ ಆ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.