ಬೆಳಗಾವಿಗೆ ” ವಂದೇ ಭಾರತ” ರೈಲು ಬರಬೇಕಾದರೆ ನೂರೆಂಟು ರಗಳೆ, ರಾದ್ಧಾಂತ. ಕಳೆದ ಆರೇಳು ತಿಂಗಳಿಂದ ಈ ರೈಲನ್ನು ಬಿಡಿಸಲು ಕೇಂದ್ರ ಸಚಿವರು ಮತ್ತು ಸಂಸದರ ಮಧ್ಯೆ ಪೈಪೋಟಿಯೇ ಪೈಪೋಟಿ!.
ದಿಲ್ಲಿಗೆ ಎಡತಾಕಿದ್ದೇ ಎಡತಾಕಿದ್ದು. ಕೇಂದ್ರ ಸಚಿವರನ್ನು ಭೆಟ್ಟಿಯಾದಾಗೊಮ್ಮೆ ಪತ್ರಿಕೆಗಳಲ್ಲಿ ಸುದ್ದಿಯೋ ಸುದ್ದಿ. ಕೊನೆಗೂ ದಿ.೧೦ರಂದು ರವಿವಾರ ರೈಲು ಬಿಟ್ಟೇ ಬಿಟ್ಟಿತು. ಕ್ರೆಡಿಟ್ ವಾರ್ ನಡೆದು ಈ ರೈಲು ಬೆಳಗಾವಿಗೆ ಬರಲು ಪ್ರಧಾನಿಯವರೇ ಕಾರಣ ಎಂದು ಬೆಳಗಾವಿ ಸಂಸದರು ಹೇಳಿ ಮುಗಿಸಿಬಿಟ್ಟರು! ಈ ರೈಲೇನೊ ಬಂತು. ಆದರೆ ಅದರ ವೇಳಾಪಟ್ಟಿ ನೋಡಿದರೆ ಬೆಳಗಾವಿ ಪ್ರಯಾಣಿಕರ ನಿದ್ದೆಯೇ ಹಾರಿ ಹೋಗಿದೆ!
ಬೆಳಗಿನ 5.20 ಕ್ಕೆ ಬೆಳಗಾವಿಯಿಂದ ರೈಲು ಹೊರಡಬೇಕಂತೆ. ಅಂದರೆ ಇದರಲ್ಲಿ ಪ್ರಯಾಣಿಸುವವರು ಹಿಂದಿನ ದಿನ ಮಲಗಲೇಬಾರದು. ಮಲಗಿದರೂ ಬೇಗನೇ ಸಂಜೆ ಮಲಗಬೇಕು. ಬೆಳಗಿನ ಜಾವ ಮೂರಕ್ಕೋ ನಾಲ್ಕಕ್ಕೋ ಏಳಬೇಕು. ಎದ್ದು ಸ್ನಾನ, ಪೂಜೆ ಮುಗಿಸಬೇಕು. ರೈಲು ನಿಲ್ದಾಣಕ್ಕೆ ಹೋಗಲು ರಿಕ್ಷಾಗಳನ್ನು ಅನಿವಾರ್ಯವಾಗಿ ಹಿಡಿಯಬೇಕು. ಕಾರುಗಳಿದ್ದವರು, ಡ್ರಾಪ್ ಕೊಡುವ ಚಾಲಕನಿದ್ದರೆ ಹೋಗಬಹುದಷ್ಟೆ. ಆ ಸಮಯದಲ್ಲಿ ಬಸ್ಸಂತೂ ಇರಲಾರದು.
ಇನ್ನು ಧಾರವಾಡ ಹುಬ್ಬಳ್ಳಿಯವರಿಗೆ ಈ ರೈಲು ಹೇಳಿ ಮಾಡಿಸಿದಂತಿದೆ. ಮುಂಜಾನೆ 8 ಗಂಟೆಗೆ ತಯಾರಾಗಿ ಆರಾಮವಾಗಿ ರೈಲು ನಿಲ್ದಾಣಕ್ಕೆ ಬಂದರೆ ಸಾಕು. ಈ ಬೆಳಗಾವಿ ಹೆಸರಿನ ರೈಲನ್ನು ಹತ್ತಿ ಮಧ್ಯಾನ್ಹ 1 .20 ಕ್ಕೆ ಬೆಂಗಳೂರು ತಲುಪಬಹುದು. ಈಗಾಗಲೇ ಅವರ ವಂದೇ ಭಾರತ ರೈಲು ಮಧ್ಯಾನ್ಹ 1.15 ಕ್ಕೆ ಬಿಡುತ್ತಿದೆ. ಅದಕ್ಕೂ ಮೊದಲೇ ಮತ್ತೊಂದು ವಂದೇ ಭಾರತ ರೈಲು ಅವರ ಬಾಗಿಲಿಗೆ ಬಂದು ನಿಲ್ಲುತ್ತದೆ!
ರಾಣಿ ಚೆನ್ನಮ್ಮ ರೈಲು ಬೆಂಗಳೂರನ್ನು ರಾತ್ರಿ 9 ಗಂಟೆಗೆ ಹೊರಟು ಬೆಳಗಾವಿಗೆ ಮರುದಿನ ಮುಂಜಾನೆ ಒಂಭತ್ತಕ್ಕೊ ಹತ್ತಕ್ಕೋ ಬರುತ್ತಿತ್ತು. ಅದನ್ನು ಬೇಗೆ ಹೊರಡಿಸಿ ಬೆಳಗಾವಿಯನ್ನು ಮುಂಜಾನೆ 7 ಗಂಟೆಗೆ ತಲಪುವಂತೆ ಮಾಡಬೇಕೆಂದು ಬೆಳಗಾವಿಗರು ಎರಡು ದಶಕಗಳ ಹಿಂದೆ ಒತ್ತಾಯಿಸಿದ್ದರು. ಬೆಳಗಾವಿಯನ್ನು 7 ಕ್ಕೆ ತಲುಪಿದರೆ ಹುಬ್ಬಳ್ಳಿಗೆ ಬೆಳಗಿನ ಜಾವ 3 ಗಂಟೆಗೆ ಬರಬೇಕಾಗುತ್ತದೆ. ಆ ಸಮಯದಲ್ಲಿ ಹುಬ್ಬಳ್ಳಿ ಪ್ರಯಾಣಿಕರು ಮನೆಗೆ ತೆರಳಬೇಕಾದರೆ ನಾಯಿಗಳ ಕಾಟವನ್ನು ಎದುರಿಸಬೇಕಾಗುತ್ತದೆ ಎಂದು ಹುಬ್ಬಳ್ಳಿ ನಾಯಕರು ತಕರಾರು ತೆಗೆದರೆಂದು ಸಂಸದ ದಿ.ಸುರೇಶ ಅಂಗಡಿ ಅವರು ಒಮ್ಮೆ ನನ್ನೆದುರಿಗೆ ಹೇಳಿದ್ದರು. ಕೊನೆಗೆ ಸುರೇಶ ಅಂಗಡಿಯವರು ರೈಲು ಸಚಿವರಾದಾಗ ಬೆಳಗಾವಿಯಿಂದ ರಾತ್ರಿ 9 ಗಂಟೆಗೆ ಬಿಟ್ಟು ಬೆಂಗಳೂರನ್ನು ಮುಂಜಾನೆ 7 ಕ್ಕೆ ಮುಟ್ಟುವ ಹೊಸ ರೈಲನ್ನು ಬಿಡಿಸಿದರು. ಈ ರೈಲಿಗೆ ಪ್ರಯಾಣಿಕರು ” ಸುರೇಶ ಅಂಗಡಿ ಟ್ರೇನ್” ಎಂದೇ ಕರೆಯುತ್ತಿದ್ದಾರೆ.
ಬೆಳಗಾವಿಗರಿಗೆ ವಂದೇ ಭಾರತ ರೈಲು ಅನುಕೂಲವಾಗಬೇಕಾದರೆ ಮುಂಜಾನೆ 7.30 ಕ್ಕೆ ಹೊರಟು ಮಧ್ಯಾನ್ಹ 3ಕ್ಕೆ ಬೆಂಗಳೂರು ತಲುಪಬೇಕು. ಮತ್ತೊಂದು ವಂದೇ ಭಾರತ ರೈಲು ಬೆಂಗಳೂರಿನಿಂದ ಮಧ್ಯಾನ್ಹ 1.30 ಕ್ಕೆ ಹೊರಟು ರಾತ್ರಿ 9 ಗಂಟೆಗೆ ಬೆಳಗಾವಿ ಮುಟ್ಟಬೇಕು. ಅಂದರೆ
ಮಾತ್ರ ಇದು ಬೆಳಗಾವಿ ವಂದೇ ಭಾರತ ಆಗುತ್ತದೆ. ಇಲ್ಲದಿದ್ದರೆ ಧಾರವಾಡ ಹುಬ್ಬಳ್ಳಿಯವರ ” ಎರಡನೇ ಭಾರತ” ರೈಲು ಆಗುತ್ತದೆ!
ಸಮಯ ಬದಲಾವಣೆಗೂ ಕೇಂದ್ರ ಸಚಿವರು, ಸಂಸದರ ಮಧ್ಯೆ ಕ್ರೆಡಿಟ್ ವಾರ್ ಮಾತ್ರ ಬೇಡ!
-ಅಶೋಕ ಚಂದರಗಿ
ಅಧ್ಯಕ್ಷರು, ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ

